ಎಂ.ಜಿ. ರಸ್ತೆ ಕಟ್ಟಡ ಮಾಲೀಕರಿಗೆ ಕಾದಿದೆ ಅವಾಂತರ
ಚಿಕ್ಕಮಗಳೂರು: ನಗರದಲ್ಲಿ ರಸ್ತೆ ಡಾಂಬರೀಕರಣ, ಚರಂಡಿಗಳ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗುತ್ತಿದೆ. ಈ ಹಣದಲ್ಲಿ ನಗರದ ಭಾಗಶಃ ಎಲ್ಲಾ ರಸ್ತೆಗಳು ಡಾಂಬರೀಕರಣಗೊಳ್ಳಲಿವೆ.
ಇಲ್ಲಿನ ಮಾರ್ಕೆಟ್ ರಸ್ತೆ ಹಾಗೂ ಎಂ.ಜಿ. ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 20 ಕೋಟಿ ಬಿಡುಗಡೆ ಮಾಡಿದ್ದು, ಕಳೆದ 8 ದಿನಗಳ ಹಿಂದೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಗುದ್ದಲಿಪೂಜೆ ನೆರವೇರಿಸಿದ್ದಾರೆ.
ಒಳ ಚರಂಡಿ ಕಾಮಗಾರಿಯಲ್ಲಿ ಈಗಾಗಲೇ ಮ್ಯಾನ್ ಹೋಲ್ ನಿರ್ಮಾಣದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಚೇಂಬರ್ ನಿರ್ಮಾಣ ಬಾಕಿ ಇದೆ.
ನಗರೋತ್ಥಾನದಲ್ಲಿ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಚೇಂಬರ್ ನಿರ್ಮಾಣದ ವೇಳೆಯಲ್ಲಿ ಎರಡು ಅಡಿಗಳ ಸುತ್ತಳತೆಯಲ್ಲಿ ಡಾಂಬರ್ ರಸ್ತೆಯನ್ನು ಮತ್ತೆ ಅಗೆಯಲಾಗುವುದು. ಇದರಿಂದ ನಗರದ ಬಹುತೇಕ ರಸ್ತೆಗಳು ಮತ್ತೆ ಹಾಳಾಗುವುದರಲ್ಲಿ ಅನುಮಾನ ಇಲ್ಲ.
ಎಂ.ಜಿ. ರಸ್ತೆ: 2005ರಲ್ಲಿ ಅಗಲೀಕರಣಗೊಂಡು ಡಾಂಬರೀಕರಣ ಮಾಡಲಾದ ಎಂ.ಜಿ. ರಸ್ತೆಗೆ ಕಾಂಕ್ರೀಟ್ ಹಾಕಲು ರಾಜ್ಯ ಸರ್ಕಾರ 10 ಕೋಟಿ ರುಪಾಯಿ ಬಿಡುಗಡೆ ಮಾಡಿದೆ.
ಈ ರಸ್ತೆಯ ಹಾಲಿ ಸ್ವರೂಪ ಹಾಗೂ ಮುಂದೆ ಈ ರಸ್ತೆಯಲ್ಲಿ ತೆಗೆದುಕೊಳ್ಳಲಿರುವ ಕಾಮಗಾರಿಗಳ ವಿವರ ಈ ಕೆಳಕಂಡಂತೆ ಇದೆ.
ಡಾಂಬರ್ ಮೇಲ್ಮೈ ರಸ್ತೆ (ರಸ್ತೆಯ ಪೂರ್ಣಭಾಗಕ್ಕೆ)- ಹಾಲಿ ಡಾಂಬರ್ ಮೇಲ್ಮೈಯನ್ನು ತೆಗೆದು ಹಾಕಿ ರಸ್ತೆಯ 10 ಮೀಟರ್ ಅಗಲಕ್ಕೆ 0.18 ಮೀ. ದಪ್ಪದ ಪದರದ ಡ್ರೈಲೀನ್ ಕಾಂಕ್ರೀಟ್ ಹಾಕಿ ಅದರ ಮೇಲೆ 0.30 ಮೀ. (300 ಮಿ.ಮಿ.) ಎಂ. 40 ಸಿಮೆಂಟ್ ಕಾಂಕ್ರೀಟ್ ಪೇವ್ಮೆಂಟ್ ನಿರ್ಮಿಸುವುದು.
ರಸ್ತೆಯ ಇಕ್ಕೆಲಗಳಲ್ಲಿ 2.50 ಮೀ. ಅಗಲಕ್ಕೆ 0.15 ಮೀ. ದಪ್ಪದ ಪದರದ ಎಂಬ್ಯಾಕ್ಮೆಂಟ್ ಮಾಡಿ 80 ಮಿ.ಮಿ. ದಪ್ಪದ ಕಾಬಲ್ ಸ್ಟೋನ್ ಇಂಟರ್ ಲಾಕ್ ಪೇವ್ಮೆಂಟ್ ನಿರ್ಮಿಸುವುದು.
ರಸ್ತೆ ಎರಡೂ ಬದಿ ಸೈಜು ಕಲ್ಲು ಕಟ್ಟಡದಿಂದ ಮಾಡಲ್ಪಟ್ಟ ಮಳೆನೀರು ಚರಂಡಿ- ಹನುಮಂತಪ್ಪ ವೃತ್ತದಿಂದ ಬೈರವಿ ಮೆಡಿಕಲ್ಸ್ ವರೆಗೆ ಹಾಲಿ ಇರುವ ಚರಂಡಿಯ ಗೋಡೆಯನ್ನು 0.20 ಮೀಟರ್ ಎತರಿಸುವುದು ಹಾಗೂ ಚರಂಡಿಯಲ್ಲಿ ತುಂಬಿರುವ ಮಣ್ಣನ್ನು ತೆಗೆಯುವುದು.
ಬೈರವಿ ಮೆಡಿಕಲ್ಸ್ ನಿಂದ ಆಜಾದ್ ವೃತ್ತದ ವರೆಗೆ ಹಾಲಿ ಚರಂಡಿ ಇರುವುದಿಲ್ಲ. ಈ ಭಾಗದಲ್ಲಿ ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ ಮಾಡುವುದು.
ಕಾಂಕ್ರೀಟ್ ಸ್ಲ್ಯಾಬ್ ನಿಂದ ಮಾಡಲಾದ ಫುಟ್ಪಾತ್- ಅಭಿವೃದ್ಧಿ ಪಡಿಸಲಿರುವ ಚರಂಡಿಯ ಮೇಲೆ 75 ಮಿ.ಮೀ. ದಪ್ಪದ ಸಿಮೆಂಟ್ ಕಾಂಕ್ರೀಟ್ ಸ್ಲ್ಯಾಬ್ ಮಾಡಿ ಅದರ ಮೇಲೆ 19 ಮಿ.ಮೀ. ದಪ್ಪದ ಗ್ರಾನೈಟ್ ಹಾಸು ಅಳವಡಿಸಿ, 5 ಅಡಿ ಅಗಲದ ಪುಟ್ಪಾತ್ ನಿರ್ಮಾಣ ಮಾಡುವುದು.
ಸಿಮೆಂಟ್ ಕಂಬಗಳನ್ನು ಅಳವಡಿಸಿ, ಎಚ್.ಟಿ. ಮತ್ತು ಎಲ್.ಟಿ. ವಿದ್ಯುತ್ ಲೈನ್ ಎಳೆಯಲಾಗಿದೆ. ಅದಕ್ಕೆ ಬೀದಿದೀಪಗಳನ್ನು ಅಳವಡಿಸಲಾಗಿದೆ.
ಹಾಲಿ ಇರುವ ವಿದ್ಯುತ್ ಕಂಬಗಳನ್ನು ಬದಲಾಗಿ ಎಚ್.ಟಿ., ಎಲ್.ಟಿ. ಲೈನ್ ಗಾಗಿ ಯು.ಜಿ. ಕೇಬಲ್ಗಳನ್ನು ಅಳವಡಿಸುವುದು. ಬೀದಿದೀಪಗಳಿಗಾಗಿ ಟ್ಯೂಬುಲರ್ ಕಂಬಗಳನ್ನು ಹೊಸದಾಗಿ ಅಳವಡಿಸುವುದು ಮತ್ತು ಇವುಗಳಿಗೆ ಹೊಸದಾಗಿ ಎಲ್.ಇ.ಡಿ. ಬೀದಿ ದೀಪಗಳನ್ನು ಅಳವಡಿಸುವುದು. ಖಾಸಗಿ ವಿದ್ಯುತ್ ಸಂಪರ್ಕಗಳಿಗಾಗಿ ಮೆಸ್ಕಾಂ ಅನುಮೋದಿತ ಪ್ರತ್ಯೇಕ ವ್ಯವಸ್ಥೆ.
ಡೆಕ್ ಸ್ಲ್ಯಾಬ್ಗಳು- ಹಾಲಿ ಇರುವ ಡೆಕ್ ಸ್ಲ್ಯಾಬ್ಗಳ ಸಂಖ್ಯೆ ಕಡಿಮೆ ಇದ್ದು, ಒಟ್ಟು 9 ಸಂಖ್ಯೆಯ ಡೆಕ್ ಸ್ಲಾಬ್ಗಳ ನಿರ್ಮಾಣಕ್ಕೆ ಉದ್ದೇಶಿಲಾಗಿದೆ.
ರಸ್ತೆ ವಿಭಜಕ- ಬೇಲೂರು ರಸ್ತೆಯ ಬಸ್ ನಿಲ್ಧಾಣದ ಬಳಿ ಮಾರ್ಕೆಟ್ ರಸ್ತೆ, ಎಂ.ಜಿ. ರಸ್ತೆ ಮತ್ತು ಬೇಲೂರು ರಸ್ತೆ ಸೇರುವ ಭಾಗದಲ್ಲಿ ವೃತ್ತ ನಿರ್ಮಾಣ. ಕರ್ಬ್ ಸ್ಟೋನ್ಗಳಿಂದ ವಿಶಿಷ್ಟ ರಚನೆಯ ರಸ್ತೆ ವಿಭಜಕ ಮಾಡುವುದು ಹಾಗೂ ರಸ್ತೆ ವಿಭಜಕದಲ್ಲಿ ಲ್ಯಾಂಡ್ ಸ್ಕೇಪಿಂಗ್ ಮಾಡುವುದು.
ಕೇಬಲ್ ಡಕ್ಟ್- ರಸ್ತೆಯ ಒಂದು ಭಾಗದಲ್ಲಿ ಯು.ಜಿ. ಕೇಬಲ್, ಟೆಲಿಪೋನ್ ಕೇಬಲ್ ಮತ್ತಿತರ ಕೇಬಲ್ಗಳ ಅಳವಡಿಕೆಗಾಗಿ ಡಕ್ಟ್ ನಿರ್ಮಾಣ ಹಾಗೂ ರಸ್ತೆಯ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸಲು ಕ್ರಾಸ್ ಸ್ಲೀವ್ಸ್ಗಳ ನಿರ್ಮಾಣ.
ಅಡ್ಡ ರಸ್ತೆಗಳು- ಎಂ.ಜಿ. ರಸ್ತೆಯ ಇಕ್ಕೆಲೆಗಳಲ್ಲಿನ ಅಡ್ಡ ರಸ್ತೆಗಳು ಮುಖ್ಯ ರಸ್ತೆಯ ಸಲಿಸಾದ ಸಂಪರ್ಕಕ್ಕಾಗಿ 19 ಅಡ್ಡ ರಸ್ತೆಗಳನ್ನು ತಲಾ 5 ಮೀ. ಉದ್ದದವರೆಗೆ ಕಾಂಕ್ರೀಟಿಕರಣ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅವೈಜ್ಞಾನಿಕ ಕಾಮಗಾರಿ
ಎಂ.ಜಿ. ರಸ್ತೆ ವ್ಯವಸ್ಥಿತವಾಗಿ ಅದರಲ್ಲೂ ಕಾಂಕ್ರೀಟಿಕರಣಗೊಳ್ಳುತ್ತಿದೆ ಎಂಬುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಅದು, ವ್ಯವಸ್ಥಿತವಾಗಿರಬೇಕು.
ಎಂ.ಜಿ. ರಸ್ತೆಯ ಕಾಂಕ್ರೀಟಿಕರಣದ ವೇಳೆಯಲ್ಲಿ ಸಾಧಕ- ಬಾಧಕಗಳ ಬಗ್ಗೆ ಯಾವುದೇ ಮುಂದಾಲೋಚನೆ ಮಾಡಲ್ಲ ಎಂಬುದು ಪ್ಲಾನ್ ನೋಡಿದರೆ ವ್ಯಕ್ತವಾಗುತ್ತದೆ.
ಎಂ.ಜಿ. ರಸ್ತೆಯ ಬಹುತೇಕ ಅಂಗಡಿ ಮಳಿಗೆಗಳು ಹಾಲಿ ಇರುವ ಪುಟ್ ಪಾತ್ಗೆ ಸರಿ ಸಮಾನವಾಗಿ ಇವೆ. ಇದೀಗ ಈ ಪುಟ್ಪಾತನ್ನು 20 ಸೆಂಟಿ ಮೀಟರ್ನಷ್ಟು ಎತ್ತರ ಮಾಡಿದರೆ, ಹಲವೆಡೆ ಕಟ್ಟಡಗಳ ಸಮತಟ್ಟು ಮೀರಿ ಚರಂಡಿ ಮೇಲ್ಭಾಗಕ್ಕೆ ಬರಲಿದೆ. ಮಳೆಗಾಲದಲ್ಲಿ ಮಳೆಯ ನೀರು ಅಂಗಡಿಗಳ ಒಳಗೆ ನುಸುಳುವ ಸಾಧ್ಯತೆ ಹೆಚ್ಚಿದೆ. ಈ ಅವ್ಯವಸ್ಥೆ ಒಂದೆಡೆ ಮಾತ್ರವಲ್ಲ ಹಲವೆಡೆ ಸಮಸ್ಯೆಯಾಗಿ ಕಾಡಲಿದೆ.
ಎಂ.ಜಿ. ರಸ್ತೆಯ ಒಂದು ಭಾಗದಲ್ಲಿ ಯು.ಜಿ. ಕೇಬಲ್, ಟೆಲಿಪೋನ್ ಕೇಬಲ್ ಮತ್ತಿತರ ಕೇಬಲ್ಗಳ ಅಳವಡಿಕೆಗಾಗಿ ಡಕ್ಟ್ ನಿರ್ಮಾಣ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇದೆಲ್ಲಾ ಗೊತ್ತಿದ್ದರೂ ಸಹ ಎಂ.ಜಿ. ರಸ್ತೆಯಲ್ಲಿ ರಿಲಯನ್ಸ್ ಸಂಸ್ಥೆಗೆ ಕೇಬಲ್ ಅಳವಡಿಸಲು ನಗರಸಭೆಯಿಂದ ಅನುಮತಿ ನೀಡಲಾಗಿದ್ದು, ಕೇಬಲ್ ಅಳವಡಿಕೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ರಿಲಯನ್ಸ್ ಸಂಸ್ಥೆಯವರು ರಸ್ತೆಯನ್ನು ಅಗೆದು ಕೇಬಲ್ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡ ಬಳಿಕ ಈ ಕೇಬಲ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದರೆ, ಅಥವಾ ಕೇಬಲ್ ತುಂಡಾದರೆ, ಕಾಂಕ್ರೀಟ್ ರಸ್ತೆಯಲ್ಲಿ ಗುಂಡಿ ತೋಡಿ ಕೇಬಲ್ ದುರಸ್ತಿ ಪಡಿಸಬೇಕು. ಕೇಬಲ್ ಹಾಕಲು ಅನುಮತಿ ನೀಡಿದ್ದರಿಂದ ಅದರ ದುರಸ್ತಿಗೂ ಅನುಮತಿ ನೀಡಬೇಕಾಗುತ್ತದೆ.
ಕೇಬಲ್ ಡಕ್ಟ್ ನಿರ್ಮಾಣ ಮಾಡಿದ ನಂತರ ರಿಲಯನ್ಸ್ ಸಂಸ್ಥೆಗೆ ಕೇಬಲ್ ಹಾಕಲು ಅನುಮತಿ ನೀಡಬಹುದಾಗಿತ್ತು. ಆದರೆ, ತರಾತುರಿಯಲ್ಲಿ ನಗರಸಭೆ ರಸ್ತೆ ಅಗೆದು ಕೇಬಲ್ ಹಾಕಲು ಅನುಮತಿ ನೀಡಬಾರದಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

