ಕುಡಿಯುವ ನೀರಿಗಾಗಿ ಗ್ರಾಪಂಗೆ ಮುತ್ತಿಗೆ
ಚಿಕ್ಕಮಗಳೂರು: ಕುಡಿಯುವ ನೀರಿಗೆ ಆಗ್ರಹಿಸಿ ಆಲ್ದೂರು ಪುರದ ದಲಿತರು ಜಾಥಾ ನಡೆಸಿ ಆಲ್ದೂರು ಗ್ರಾಮ ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.
ಡಾ. ಅಂಬೇಡ್ಕರ್ ಯುವಕ ಸಂಘ ಹಾಗೂ ಪುರದ ಸ್ತ್ರೀಶಕ್ತಿ ಸಂಘಗಳ ಆಶ್ರಯದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ಖಾಲಿ ಕೊಡ ಹಿಡಿದು ಆಲ್ದೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರದರ್ಶನ ನಡೆಸಿದರು.
ನಲ್ಲಿ ನೀರಿನ ವ್ಯವಸ್ಥೆ ಇಲ್ಲ: ವಾರ್ಡ್ ನಂ. 4ರ ವ್ಯಾಪ್ತಿಯಲ್ಲಿ ಬರುವ ಪುರದ ಸುಮಾರು 30ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ವರ್ಷದಿಂದ ನಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕಿ.ಮೀ. ದೂರದ ಕೊಳವೆ ಬಾವಿಯಿಂದ ಅಲ್ಪಸ್ವಲ್ಪ ನೀರು ತಂದು ಜೀವನ ಸಾಗಿಸಬೇಕಾಗಿದೆ. ದಲಿತರಿಗೆ ಎಲ್ಲ ಸೌಕರ್ಯ ಕಲ್ಪಿಸುವುದಾಗಿ ಹೇಳುವ ಆಡಳಿತ ವ್ಯವಸ್ಥೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕನಿಷ್ಟ ಕುಡಿಯುವ ನೀರಿಗೂ ಅಡ್ಡಿಪಡಿಸುತ್ತಿದೆ ಎಂದು ಡಿಎಸ್ಎಸ್ ಜಿಲ್ಲಾ ವಿಭಾಗೀಯ ಸಂಚಾಲಕ ಪಿ.ಟಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಅಹವಾಲು ಸ್ವೀಕಾರ: ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯಸಭೆ ನಡೆಯುತ್ತಿದ್ದು, ಪ್ರತಿಭಟನಾಕಾರರ ಕೂಗಾಟದಿಂದ ಸಭೆಗೆ ಅಡ್ಡಿಯಾಯಿತು. ಕಚೇರಿ ಮುಂಬಾಗಿಲನ್ನು ತಡೆಯುವ ಪ್ರಯತ್ನಕ್ಕೆ ಆಲ್ದೂರು ಪೊಲೀಸ್ ಠಾಣಾಧಿಕಾರಿ ಅಡ್ಡಿಪಡಿಸಿ ಸ್ವಲ್ಪ ದೂರದಲ್ಲಿ ಧರಣಿಗೆ ಮನವೊಲಿಸಿದರು. ಘೋಷಣೆ ಹೆಚ್ಚಿದಂತೆ ಪಂಚಾಯಿತಿ ಅಧ್ಯಕ್ಷೆ ಜಯಶೀಲಾ, ಉಪಾಧ್ಯಕ್ಷೆ ಹೂವಮ್ಮ, ಪಿಡಿಓ ಪರಮೇಶ್ವರ, ಸದಸ್ಯ ಪುರದ ಕವೀಶ್ ಸಭೆಯಿಂದ ಹೊರಬಂದು ಜನರ ಅಹವಾಲು ಕೇಳಿದರು.
ಗ್ರಾಮಸ್ಥರಲ್ಲೇ ಹೊಂದಾಣಿಕೆ ಇಲ್ಲದೆ ಪೈಪ್ ಲೈನ್ ಹಾಕಲು ಅವಕಾಶ ನೀಡುತ್ತಿಲ್ಲ. ಸುಖಾಸುಮ್ಮನೆ ಪಂಚಾಯಿತಿಯ ಮೇಲೆ ಆರೋಪಿಸುವುದು ಸರಿಯಲ್ಲವೆಂದು ಜಯಶೀಲಾ ಹೇಳಿದಾಗ, ಪ್ರಭಾವಿಗಳನ್ನು ರಕ್ಷಿಸಲು ಗ್ರಾಮಠಾಣಾ ಜಾಗಬಿಟ್ಟು ಹೊಸರಸ್ತೆ ಕತ್ತರಿಸಿ ಪೈಪ್ ಹಾಕುವ ಅಗತ್ಯವೇನು ಎಂದು ಜನ ಪ್ರಶ್ನಿಸಿದಾಗ ಗಲಾಟೆ ಮುಗಿಲು ಮುಟ್ಟಿತು. ಮಾಜಿ ಉಪಾಧ್ಯಕ್ಷರುಗಳಾದ ಹವ್ವಳ್ಳಿ ಕವೀಶ ಮತ್ತು ಅಶೋಕ ಮಾಜಿ ಅಧ್ಯಕ್ಷ ಇಳೇಖಾನ್ ಉಮೇಶ್ ಸೇರಿದಂತೆ ಎಲ್ಲ ಸದಸ್ಯರೂ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಖಚಿತ ಭರವಸೆ ನೀಡುವವರೆಗೂ ಜಾಗಬಿಟ್ಟು ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಹಲವರ ಅಭಿಪ್ರಾಯ ಕೇಳಿದ ಹವ್ವಳ್ಳಿ ಕವೀಶ ಮತ್ತು ಅಶೋಕ ಮಾತನಾಡಿ, ಸಭೆ ಮುಗಿದ ನಂತರ ಸಂಜೆ ಪುರಕ್ಕೆ ಬಂದು ಎಲ್ಲರ ಸಮಕ್ಷಮದಲ್ಲಿ ಚರ್ಚಿಸಿ ಗ್ರಾಮಸ್ಥರ ಅಭಿಪ್ರಾಯಕ್ಕೆ ಅನುಗುಣವಾಗಿ ಕ್ರಮಕೈಗೊಂಡು ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಚದುರಿದರು. ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಪಿ.ಟಿ. ಚಂದ್ರಶೇಖರ್ ಮತ್ತು ಸುರೇಶ್ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ಸಲ್ಲಿಸಿ ಹೊಸ ರಸ್ತೆಗೆ ಹಾನಿಯಾಗದಂತೆ ಗ್ರಾಮ ಠಾಣಾ ಜಾಗದಲ್ಲಿ ಪೈಪ್ಲೈನ್ ಅಳವಡಿಸಿ ದಲಿತರ ಮನೆಗಳಿಗೆ ನೀರು ಕೊಡಬೇಕು. ಸರ್ವೇ ನಂ. 252 ರ ಗ್ರಾಮ ಠಾಣಾ ಜಾಗವನ್ನು ಗ್ರಾಮದ ಅಭಿವೃದ್ಧಿ ಮತ್ತು ನಿವೇಶನಕ್ಕಾಗಿ ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

