ಕುಡಿವ ನೀರಿಗೆ 364 ಲಕ್ಷ ವೆಚ್ಚದ ಕ್ರಿಯಾಯೋಜನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಫೆ. 5
ಬರಪೀಡಿತ ಕಡೂರು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ 363.80 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಕಳೆದ ಮುಂಗಾರಿನಲ್ಲಿ ವಾಡಿಕೆಯಷ್ಟು ಕಡೂರು ತಾಲೂಕಿನಲ್ಲಿ ಮಳೆ ಬಂದಿರಲಿಲ್ಲ. ರಾಜ್ಯ ಸರ್ಕಾರ 2ನೇ ಹಂತದಲ್ಲಿ ಅಂದರೆ ಕಳೆದ ಡಿ.21ರಂದು 19 ಜಿಲ್ಲೆಗಳ 34 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದ್ದು, ಆ ಪಟ್ಟಿಯಲ್ಲಿ ಕಡೂರು ತಾಲೂಕು ಸಹ ಸೇರ್ಪಡೆಗೊಂಡಿದೆ.
ಕಡೂರು ತಾಲೂಕು ಸತತವಾಗಿ 5 ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿದೆ. ಇಲ್ಲಿನ ಬಹುತೇಕ ಕೃಷಿ ಪ್ರದೇಶ ಮಳೆ ಅವಲಂಬಿಸಿದೆ. ಸಕಾಲದಲ್ಲಿ ಮಳೆ ಬಾರದಿದ್ದರೆ ಬರಗಾಲ ಎದುರಾಗುವುದು ಖಚಿತ. ಈ ಬಾರಿಯೂ ಸಹ ಕಡೂರು ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.
ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಿಗೆ ಹಣ ಬಿಡುಗಡೆ ಮಾಡಬೇಕಾದರೆ ಸಂಬಂಧಿತ ಜಿಲ್ಲಾಡಳಿತ ಆಯಾಯ ತಾಲೂಕಿನ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಬೇಕು. ಅದರಂತೆ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈಎಸ್ವಿ ದತ್ತ ಅಧ್ಯಕ್ಷತೆಯಲ್ಲಿ ಜ.21ರಂದು ಅಧಿಕಾರಿಗಳ ಸಭೆಯನ್ನು ನಡೆಸಿ 256 ಕಾಮಗಾರಿಗಳಿಗೆ 363.80 ಲಕ್ಷ ರುಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾಧಿಕಾರಿಗಳು ಇದನ್ನು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ.
ಇಲಾಖೆ ವಾರು: ಪಂಚಾಯತ್ರಾಜ್ ಎಂಜಿನಿಯರಿಂಗ್ ಇಲಾಖೆ ವತಿಯಿಂದ ಕೊಳವೆಬಾವಿ ಪ್ಲಸಿಂಗ್ ಮಾಡಲು 19 ಕಾಮಗಾರಿಗಳನ್ನು ಗುರುತಿಸಲಾಗಿದೆ. ಇದರ ಅಂದಾಜು ವೆಚ್ಚ 8.20 ಲಕ್ಷ, ಕುಡಿವ ನೀರಿನ ಪೈಪ್ಲೈನ್ ಜೋಡಣೆ 71 ಕಾಮಗಾರಿಗಳಿಗೆ 154 ಲಕ್ಷ, ಜಾನುವಾರುಗಳಿಗೆ ಕುಡಿಯುವ ನೀರಿನ 13 ತೊಟ್ಟಿಗಳ ನಿರ್ಮಾಣಕ್ಕೆ 4.80 ಲಕ್ಷ, ಹೊಸದಾಗಿ ಕೊಳವೆಬಾವಿ ಕೊರೆಸಲು 125 ಕಾಮಗಾರಿಗಳಿಗೆ 126.30 ಲಕ್ಷ ಕಡೂರು ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ 3 ತಿಂಗಳವರೆಗೆ 23 ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು 7.50 ಲಕ್ಷ, 5 ಕಡೆಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು 10 ಲಕ್ಷ, ಬೀರೂರು ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್ಗಳಲ್ಲಿ ಮುಂದಿನ 3 ತಿಂಗಳವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು 11 ಲಕ್ಷ, 23 ಕಡೆಗಳಲ್ಲಿ ಕೊಳವೆಬಾವಿ ನಿರ್ಮಾಣ ಮಾಡಲು 22 ಲಕ್ಷ, ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ವಿಟಮಿನ್, ಲವಣ ಮಿಶ್ರಣ ಜಂತುನಾಶಕ ಖರೀದಿಸಲು 20 ಲಕ್ಷ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಒಟ್ಟು 256 ಕಾಮಗಾರಿಗಳಿಗೆ 363.80 ಲಕ್ಷ ಅವಶ್ಯಕತೆ ಇದೆ. ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.
ಅವಕಾಶ ಇಲ್ಲ: ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನೀರು ಬದಗಿಸಲು ಬರಪೀಡಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗುವ ಹಣ ಬಳಸಿಕೊಳ್ಳಬಹುದಾಗಿದೆ. ಅಂದರೆ, ಕೊಳವೆಬಾವಿ ಇನ್ನಷ್ಟು ಅಳಪಡಿಸಿ ನೀರು ಪಡೆಯಲು ಅವಕಾಶ ಇದೆ. ಆದರೆ, ಹೊಸದಾಗಿ ಕೊಳವೆಬಾವಿ ನಿರ್ಮಾಣಕ್ಕೆ ಹಣ ಬಳಸಿಕೊಳ್ಳುವಂತ್ತಿಲ್ಲ.
ಇದೀಗ ಕಡೂರು ತಾಲೂಕಿನಲ್ಲಿ ಸಿದ್ಧಪಡಿಸಲಾಗಿರುವ ಕ್ರಿಯಾ ಯೋಜನೆಯಲ್ಲಿ ಹೊಸದಾಗಿ ಕೊಳವೆಬಾವಿ ನಿರ್ಮಾಣಕ್ಕಾಗಿ 157 ಲಕ್ಷ ಮೀಸಲಿಡಲಾಗಿದೆ. ಅದುದರಿಂದ ಬರಪೀಡಿತ ಪ್ರದೇಶಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಯಾವುದಕ್ಕೆ ಬಳಸಿಕೊಳ್ಳಬಹುದು ಎಂಬ ಮಾರ್ಗಸೂಚಿ ಗಮನದಟ್ಟು ಕ್ರಿಯಾ ಯೋಜನೆ ಸಿದ್ಧಪಡಿಸಿದಂತೆ ಕಂಡುಬರುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

