ಶಾಸಕ ಸಾಂಭಾಜಿ ಪಾಟೀಲ್ ಗಡಿಪಾರಿಗೆ ಕರವೇ ಆಗ್ರಹ
ಚಿಕ್ಕಮಗಳೂರು: ಪದೇ ಪದೇ ಕನ್ನಡಿಗರು ಮತ್ತು ಕರ್ನಾಟಕದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್ ಅವರನ್ನು ನಾಡಿನಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅವರ ನೇತೃತ್ವದಲ್ಲಿ ಹಳೇ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹನುಮಂತಪ್ಪ ವೃತ್ತದ ಬಳಿ ಸಾಂಬಾಜಿ ಪಾಟೀಲ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೇಗೂರು ಜಗದೀಶ್, ಕರ್ನಾಟಕದಲ್ಲೇ ವಾಸವಾಗಿದ್ದು ಇಲ್ಲಿನ ಎಲ್ಲಾ ಸವಲತ್ತುಗಳನ್ನೂ ಪಡೆದಿರುವ ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್ ಅವರು ಮಹಾರಾಷ್ಟ್ರದ ಪರವಾಗಿ ಮಾತನಾಡುತ್ತಾರೆ. ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡಿಗರ ಬಗ್ಗೆ ಮತ್ತು ಕರ್ನಾಟಕದ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ನಿಂದಿಸುವ ಮೂಲಕ ನಾಡದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.
ಕ್ರಮ ಏಕಿಲ್ಲ: ಸಾಂಬಾಜಿ ಪಾಟೀಲ್ ಅವರು, ಹಲವಾರು ಬಾರಿ ನಾಡವಿರೋಧಿ ಚಟುವಟಿಕೆ ನಡೆಸಿದ್ದರೂ ಸಹ ರಾಜ್ಯ ಸರ್ಕಾರ ಇದುವರೆಗೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಕನ್ನಡಪರ ಹೋರಾಟಗಾರರು ಮತ್ತು ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸುವ ರಾಜ್ಯ ಸರ್ಕಾರ ನಾಡ ದ್ರೋಹಿ ವಿರುದ್ದ ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಸಾಂಬಾಜಿ ಪಾಟೀಲ್ ಅವರ ವಿರುದ್ದ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗಟ್ಟಬೇಕು ಅಥವಾ ನಾಡಿನಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ ಅವರು, ಈ ಪ್ರತಿಭಟನೆ ರಾಜ್ಯ ಸರ್ಕಾರಕ್ಕೆ ನೀಡುತ್ತಿರುವ ಅಂತಿಮ ಗಡುವಾಗಿದ್ದು, ಇದಕ್ಕೆ ಸ್ಪಂದಿಸದಿದ್ದಲ್ಲಿ ಪಾಟೀಲ್ ಅವರ ವಿರುದ್ದ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವತಃ ಮುಂದಾಗಲಿದೆ ಎಂದು ಎಚ್ಚರಿಸಿದರು.
ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕಾರ್ಯದರ್ಶಿ ಪಂಚಾಕ್ಷರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಪರಮೇಶ್, ಪ್ರಧಾನ ಕಾರ್ಯದರ್ಶಿ ನಂದಿನಿ, ಸಂಘಟನಾ ಕಾರ್ಯದರ್ಶಿ ಕೋಟೆ ಮಲ್ಲೇಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮನೋಜ್, ನಗರಾಧ್ಯಕ್ಷ ವಿನೋದ್ ಕುಮಾರ್, ಉಪಾಧ್ಯಕ್ಷ ಇರ್ಷಾದ್ ಅಹ್ಮದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

