ಚಿಕ್ಕಮಗಳೂರು

ವಿದ್ಯುತ್ ಕಣ್ಣಾಮುಚ್ಚಾಲೆ ಖಂಡಿಸಿ ರೈತರ ಪ್ರತಿಭಟನೆ

Published On :

ಕ.ಡ.ವಾರ್ತೆ  ತರೀಕೆರೆ  ಫೆ.17
ಕರೆಂಟ್ ಕಣ್ಣಾಮುಚ್ಚಾಲೆ ಖಂಡಿಸಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ, ನೀರಿಲ್ಲದೆ ಬೆಳೆಗಳೆಲ್ಲಾ ಒಣಗಿ ಹೋಗುತ್ತಿವೆ, ವೋಲ್ಟೇಜ್ ಕೂಡ ಇಲ್ಲ, ರಾತ್ರಿ ಹೊತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಸರ್ಕಾರ ವಿದ್ಯುತ್ ನೀಡಿದರೂ ಆಧಿಕಾರಿಗಳು ಅದನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂದು ತಾಲೂಕಿನ ರೈತರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಪಟ್ಟಣದ ಎಂಯುಎಸ್‌ಎಸ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ, ಧರಣಿ ನಡೆಸಿದರು.
ಸಮರ್ಪಕ ವಿದ್ಯುತ್ ನೀಡಿ: ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಟಿ.ಜೆ. ಗೋಪಿಕುಮಾರ್ ಮಾತನಾಡಿ, ತೋಟಗಳಲ್ಲಿ ಬೆಳೆಗಳೆಲ್ಲಾ ನೀರಿಲ್ಲದೆ ಒಣಗಿ ಹೋಗುತ್ತಿವೆ. ನೀವು ಕೊಡುವ ವಿದ್ಯುತ್‌ನಲ್ಲಿ ವೋಲ್ಟೇಜ್ ಇಲ್ಲದ್ದರಿಂದ ನೀರು ಕೂಡ ಬರುವುದಿಲ್ಲ, ವಿದ್ಯುತ್ ಕಣ್ಣಾಮುಚ್ಚಾಲೆಯಾಗುತ್ತಿದೆ, ಕನಿಷ್ಠ ಆರು ಗಂಟೆಗಳ ಕಾಲವಾದರೂ ಸಮರ್ಪಕವಾದ ವಿದ್ಯುತ್ ಕೊಡಿ ಎಂದು ಒತ್ತಾಯಿಸಿದರು.
ವೋಲ್ಟೇಜ್ ಇಲ್ಲ: ನವೀನ್‌ರಾಜ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವೋಲ್ಟೇಜ್ ಇಲ್ಲ. ಪರೀಕ್ಷೆಯ ಸಮಯ ವಿದ್ಯಾರ್ಥಿಗಳು ಓದುವುದಾದರೂ ಹೇಗೆ, ವಿದ್ಯಾಭ್ಯಾಸಕ್ಕೆ ವಿದ್ಯುತ್ ಇಲ್ಲವೆಂದರೆ ಹೇಗೆ, ಸಂಜೆ ಹೋದ ಕರೆಂಟು ಬೆಳಗಾದರೂ ಬರುವುದೇ ಇಲ್ಲ, ಸರಿಯಾಗಿ ವಿದ್ಯುತ್ ಸರಬರಾಜು ಮಾಡಿ ಎಂದು ಒತ್ತಾಯಿಸಿದರು.
10 ವರ್ಷವಾಯಿತು: ಗಂಗಣ್ಣ ಮಾತನಾಡಿ, ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದಲೂ ಇದೇ ನೆಪ ಹೇಳುತ್ತಿದ್ದಾರೆ.
 ಕೇವಲ ಆಶ್ವಾಸನೆ ಕೊಡುತ್ತಿದ್ದಾರೆ. ಸಮರ್ಪಕವಾದ ವಿದ್ಯುತ್ ಕೊಡುತ್ತಿಲ್ಲ. ಬೆಳೆಗಳೆಲ್ಲಾ ನೀರಿಲ್ಲದೆ ಒಣಗಿ ಹೋಗುತ್ತಿವೆ. ಮಕ್ಕಳು ಓದುವುದಕ್ಕೂ ಸರಿಯಾದ ಬೆಳಕಿನ ವಿದ್ಯುತ್ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಎಪಿಎಂಸಿ ಸದಸ್ಯ ಬೇಲೇನಹಳ್ಳಿ ಸೋಮಶೇಖರ್ ಮಾತನಾಡಿ, ತಾಲೂಕಿನ ಲಕ್ಕವಳ್ಳಿಯಿಂದ ಬರುವ ವಿದ್ಯುತ್ತನ್ನು ಬೇರೆಡೆಗೆ ಯಾಕೆ ಕೊಡುತ್ತೀರಿ, ಇಲ್ಲೇ ವಿದ್ಯುತ್ತಿನ ಕೊರತೆ ತುಂಬಾ ಇದೆ. ಮೊದಲು ಅದನ್ನು ಸರಿಪಡಿಸಿ ಎಂದು ಆಗ್ರಹಿಸಿದರು.
ಪುರಸಭಾ ಮಾಜಿ ಸದಸ್ಯರಾದ ಟಿ.ಜೆ. ಗೋಪಿಕುಮಾರ್, ಜಿಯಾವುಲ್ಲಾ, ರವಿ, ರೈತ ಸಂಘದ ಮಹೇಶ್, ಎಪಿಎಂಸಿ ಸದಸ್ಯ ಬೇಲೇನಹಳ್ಳಿ ಸೋಮಶೇಖರ್, ಮಹೇಂದ್ರಕುಮಾರ್, ಗಂಗಾಧರಪ್ಪ, ಶಿವಮೂರ್ತಿ, ಗಂಗಣ್ಣ, ಉಮಾಪತಿ, ನವೀನ್‌ರಾಜ್, ಬೇಲೇನಹಳ್ಳಿ,ಸಿದ್ದರಹಳ್ಳಿ ದುಗ್ಲಾಪುರ, ಅತ್ತಿಗನಾಳು, ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಧಿಕಾರಿಗಳಾದ ಇ.ಇ. ಕರಿಸಿದ್ದಯ್ಯ, ಎಸ್.ಇ. ವಿಜಯಕುಮಾರ್, ಶಿವಮೊಗ್ಗ ಇ.ಇ. ಲಕ್ಷ್ಮಣ್ ನಾಯಕ್, ಬಾಲು ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.