ಪರೀಕ್ಷೆಯನ್ನು ಹಬ್ಬದಂತೆ ಪರಿಗಣಿಸಿ ಸಂಭ್ರಮಿಸಿ
ಬಾಳೆಹೊನ್ನೂರು: ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಗಳಿಗೆ ಉಲ್ಲಸಿತರಾಗಿ ತಯಾರಾಗಿ ಅವುಗಳನ್ನು ಮನೆಯ ಹಬ್ಬದಂತೆ ಪರಿಗಣಿಸಬೇಕು ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರಿನ ಆರ್.ಎ. ಚೇತನ್ರಾಮ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಳೆಹೊನ್ನೂರು ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವಸಿದ್ಧತಾ ಶಿಬಿರದಲ್ಲಿ ಅವರು ತರಬೇತಿ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಮೊದಲು ಅವುಗಳಿಗೆ ಹೇಗೆ ಸಿದ್ಧರಾಗಿರಬೇಕು, ಹೇಗೆ ಬರೆಯಬೇಕು ಎಂಬುದನ್ನು ಅರಿತಿರಬೇಕು. ಪರೀಕ್ಷೆಯ ಕುರಿತು ಕೆಲವು ಸೂತ್ರ ಅಳವಡಿಸಿಕೊಂಡಿರಬೇಕು. ಶ್ರೇಷ್ಠ ವ್ಯಕ್ತಿಗಳಾದ ನಾವು ಜ್ಞಾನ, ಬುದ್ಧಿಮತ್ತೆ ಇರುವುದಕ್ಕೆ ಅಧ್ಯಯನದಲ್ಲಿ ತೊಡಗಬೇಕು. ಪೋಷಕರು, ಶಿಕ್ಷಕರು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಅನಗತ್ಯವಾಗಿ ಭಯ, ಒತ್ತಡ ಹಾಕಬಾರದು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸ್ಪಷ್ಟ ಗುರಿ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಇರಬೇಕು.
ಸಮಯ ನಿರ್ವಹಣೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಅಗತ್ಯವಾದ ವಿಷಯಗಳನ್ನು ಮಾತ್ರ ಬರೆದಾಗ ಉತ್ತಮ ಅಂಕ ದೊರೆಯಲು ಸಾಧ್ಯ. ಮಸ್ತಕದಿಂದ ಪುಸ್ತಕಕ್ಕೆ ತರುವ ಕ್ರಿಯೆಯೇ ಪರೀಕ್ಷೆಯಾಗಿದ್ದು, ಉತ್ಸಾಹ, ಸಕಾರಾತ್ಮಕವಾಗಿ ಅದನ್ನು ಎದುರಿಸುವಂತೆ ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳನ್ನು ವೀಕ್ಷಿಸದೆ ಓದಿನಲ್ಲಿ ತಲ್ಲೀನತೆಯನ್ನು ತೋರಬೇಕು. ಪ್ರತಿದಿನ ಓದಿನೊಂದಿಗೆ ಬರವಣಿಗೆ ಅಭ್ಯಸಿಸಿಕೊಳ್ಳಬೇಕು. ಇಂತಹ ತರಬೇತಿ ಶಿಬಿರಗಳು ವಿದ್ಯಾರ್ಥಿಗಳಲ್ಲಿನ ಭಯ ನಿವಾರಣೆಗೆ ಸಹಕಾರಿಯಾಗಿವೆ ಎಂದರು.
ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ನ.ರಾ. ಪುರ ತಾಪಂ ಸದಸ್ಯೆ ಉಮಾ ಭೀಮಯ್ಯ, ಹೇಮಲತಾ ಪ್ರಭಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮೌನೇಶಾಚಾರ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗುರುಶಾಂತಪ್ಪ, ಅಮ್ಜದ್, ತರಬೇತುದಾರ ನವೀನ್ ಲಾಲ್ಡ್ ಮಿಸ್ಕಿತ್, ಮುಖ್ಯ ಶಿಕ್ಷಕರಾದ ಕುಮಾರ್ ಸಾರಥಿ, ಕಲ್ಮರುಡಪ್ಪ, ಸುರೇಂದ್ರ ಮಾಸ್ತರ್, ರವಿಕುಮಾರ್ ಇದ್ದರು. ತರಬೇತಿ ಶಿಬಿರದಲ್ಲಿ ಬಾಳೆಹೊನ್ನೂರು ವ್ಯಾಪ್ತಿಯ ಪ್ರೌಢಶಾಲೆಯ ಒಂದು ಸಾವಿರಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

