ಜಿಲ್ಲೆ ಸಮಸ್ಯೆ ಸಿಎಂ ಗಮನಕ್ಕೆ ತರಲು ನಿರ್ಣಯ
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು,ಜ.2
ಜಿಲ್ಲೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ, ಅವುಗಳನ್ನು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ನಿರ್ಣಯ ಕೈಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಜಿಲ್ಲೆಯ ಐದು ಮಂದಿ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಉದ್ದೇಶಿಸಿದ್ದು, ಸದ್ಯದಲ್ಲೇ ದಿನಾಂಕವನ್ನು ನಿಗದಿ ಪಡಿಸಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಸಮಸ್ಯೆಗಳ ಬಗ್ಗೆ ಚರ್ಚೆ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳು ಪ್ರಸ್ತಾಪವಾದವು. ಇದರ ಜತೆಗೆ ಜಿಲ್ಲೆಯಲ್ಲಿ ಇತ್ತೀಚೆಗೆ ತಲೆದೋರಿದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರು ಮಾತನಾಡಿ, ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯಲಿ ಅದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ, ಕಾರ್ಯಕ್ರಮದ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇತ್ತೀಚೆಗೆ ದತ್ತಪೀಠದಲ್ಲಿ ದತ್ತಜಯಂತಿ ನಡೆಯುವ ವೇಳೆಯಲ್ಲಿ ಕೆಲವರು ಉರ್ದು ಭಾಷೆಯ ಅಕ್ಷರಗಳಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಜತೆಗೆ ಆ ಆಕ್ಷರಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಇದು, ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಘಟನೆ ಮರುಕಳಿಸದಿರಲಿ: ಚಿಕ್ಕಮಗಳೂರು ನಗರದಲ್ಲಿ ಪ್ರಾರ್ಥನಾ ಮಂದಿರವನ್ನು ಅಪವಿತ್ರಗೊಳಿಸಿದ್ದರ ಪರಿಣಾಮ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯ ಪರಿಸ್ಥಿತಿ ತಲೆದೋರಬಾರದು ಎಂದರು.
ಬಾಬಾ ಬುಡನ್ ಗಿರಿಯನ್ನು ದತ್ತಪೀಠವನ್ನಾಗಿ ಸರ್ಕಾರ ಘೋಷಣೆ ಮಾಡಿದೀಯಾ, ದತ್ತಪೀಠ ಎಂಬುದು ಅಲ್ಲಿನ ಒಂದು ಸೀಮಿತ ಸ್ಥಳವೇ. ಇತಿಹಾಸವನ್ನು ತಿರುಚುವ, ಮಸಿ ಬಳಿಯುವ ಕೆಲಸ ಆಗಬಾರದು ಎಂದು ವೈಎಸ್ವಿ ದತ್ತ ಹೇಳಿದರು.
ಡಿ.ಎನ್. ಜೀವರಾಜ್ ಮಾತನಾಡಿ, ಅಲ್ಲಿರುವುದು ಇನಾಂ ದತ್ತಾತ್ರೇಯ ಪೀಠ. ದತ್ತ ಜಯಂತಿ ವೇಳೆಯಲ್ಲಿ ಅಲ್ಲಿ ದೊಡ್ಡಮಟ್ಟದಲ್ಲಿ ಗಲಾಟೆ ನಡೆದಿಲ್ಲ. ಅಲ್ಲಿ ಆಗಾಗ ಹಸಿರು ಮತ್ತು ಕೆಂಪು ಬಣ್ಣ ಬದಲಾಗುತ್ತವೆ. ಈ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿನ ಚರ್ಚೆ ಮಾಡುವುದು ಸೂಕ್ತವಲ್ಲ. ಡಿ.28ರಂದು ಚಿಕ್ಕಮಗಳೂರಿನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರ ಮೂಲವನ್ನು ಕಂಡುಹಿಡಿಯಿರಿ ಎಂದರು.
ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಮುನ್ನ ಶಾಂತಿ ಸಭೆಯನ್ನು ನಡೆಸಲು ಸದ್ಯದಲ್ಲೇ ಶಾಂತಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶೇಖರಪ್ಪ ಹೇಳಿದರು. ಅದೇ ವೇಳೆಗೆ ಸಚಿವರು ಮಾತನಾಡಿ, ತಪ್ಪನ್ನು ಒಪ್ಪಿಕೊಳ್ಳುವ ಬದ್ಧತೆ ಜನಪ್ರತಿನಿಧಿಗಳಿಗೆ ಇರಬೇಕು ಎಂದು ಕಿವಿ ಮಾತು ಹೇಳಿದರು.
ವಿಶೇಷ ಅಧಿವೇಶನ: ಮಲೆನಾಡಿನ ಜನರ ಬದುಕನ್ನು ನಾಶ ಮಾಡಲು ಹೊರಟಿಸುವ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶವೆಂಬ ಆದೇಶವನ್ನು ಹಿಂಪಡೆಯಬೇಕು. ಈ ಸಂಬಂಧ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಡಿ.ಎನ್. ಜೀವರಾಜ್ ಆಗ್ರಹಿಸಿದರು.
ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಮಾಧವ್ ಗಾಡ್ಗೀಳ್ ವರದಿ ಜಾರಿಗೆ ತರುವ ಆರಂಭದ ಪ್ರಯತ್ನಕ್ಕೆ ಸಂಬಂಧಿಸಿದಂತೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಸದನದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಹಾಗಿದ್ದರೂ ಕೂಡ ಕೇಂದ್ರ ಪರಿಸರ ಇಲಾಖೆಯ ಮೂಲಕ ಮಾಧವ್ ಗಾಡ್ಗೀಳ್ ವರದಿಯ ಮುಂದುವರೆದ ಭಾಗವಾಗಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲಾಗಿದೆ. ಪಶ್ಚಿಮಘಟ್ಟವನ್ನು ಯುನೆಸ್ಕೋಗೆ ಸೇರ್ಪಡೆ ಮಾಡುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇಲ್ಲ. ಈ ವರದಿ ಜಾರಿ ಮಾಡಿದ್ದೇಯಾದರೆ ಬಡವರನ್ನು ಶೋಷಣೆ ಮಾಡಿದಂತಾಗುತ್ತದೆ ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಿದ್ದೇಯಾದರೆ ಬರಪೀಡಿತ ಕಡೂರು ತಾಲೂಕಿಗೆ ನೀರೊದಗಿಸುವ ಹೆಬ್ಬೆ ತಿರುವು ಯೋಜನೆಗೆ ಅಡ್ಡಿಯಾಗಲಿದೆ ಎಂದು ದತ್ತ ತಿಳಿಸಿದರು.
ಜನರನ್ನು ಅಲ್ಲಿಯೇ ಬಿಡಿ: ಶಾಸಕ ಬಿ.ಬಿ. ನಿಂಗಯ್ಯ ಅವರು ಕಳಸದ ಇನಾಂ ಭೂಮಿಯ ಬಗ್ಗೆ ಪ್ರಸ್ತಾಪಿಸಿ, ಅಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಪ್ಯಾಕೇಜ್ ನೀಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇನಾಂ ಭೂಮಿಯಲ್ಲಿ ಇರುವ ಜನರನ್ನು ಅಲ್ಲಿಯೇ ಉಳಿಸಿ, ಅರಣ್ಯ ಇಲಾಖೆಗೆ ಬೇರೆಡೆಗೆ ಕಂದಾಯ ಭೂಮಿಯನ್ನು ನೀಡಬೇಕು. ಇಲ್ಲಿನ ಜನರನ್ನು ತೆರವುಗೊಳಿಸುವಂತೆ ನ್ಯಾಯಾಲಯ ಈಗಾಗಲೇ ಹೇಳಿರುವುದರಿಂದ ನ್ಯಾಯಾಲಯಕ್ಕೆ ಸರ್ಕಾರ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಜೀವರಾಜ್, ಅಧಿಕಾರಿಗಳು ಮಾಡಿದ ತಪ್ಪಿಗೆ ಜನರಿಗೆ ತೊಂದರೆಯಾಗುತ್ತಿದೆ. ಕಳಸದ ಇನಾಂ ಭೂಮಿಯಲ್ಲಿರುವ ಜನರ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿಗೆ ಹಣ: ಕಡೂರು ತಾಲೂಕನ್ನು ಬರಪೀಡಿತ ತಾಲೂಕೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿದೆ. ಅದುದರಿಂದ ಈ ಹೋಬಳಿಯನ್ನು ಬರಪೀಡಿತ ಹೋಬಳಿ ಎಂಬುದಾಗಿ ಘೋಷಿಸಬೇಕು. ಇದರ ಜತೆಗೆ ತರೀಕೆರೆ ತಾಲೂಕಿನ ಅಜ್ಜಂಪುರ ಮತ್ತು ಶಿವನಿ ಹೋಬಳಿಗಳನ್ನು ಸಹ ಬರ ಪೀಡಿತ ಪ್ರದೇಶವನ್ನಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಆಗ್ರಹಿಸಿದರು.
ಬರಪೀಡಿತ ಪ್ರದೇಶಗಳಲ್ಲಿ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯ್ತಿಗಳಲ್ಲಿ ಹಣ ಇಲ್ಲ. ಆದುದರಿಂದ ಸರ್ಕಾರ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆಗೆ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಅಂಬಳೆ ಹೋಬಳಿಯನ್ನು ಸಹ ಬರ ಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದರು.
ಅನುದಾನ ಬಳಕೆ: ಮಾಹಿತಿಗೆ ಆಗ್ರಹ
ಚಿಕ್ಕಮಗಳೂರು: ಅತೀ ಹಿಂದುಳಿದ ತಾಲೂಕೆಂದು ಘೋಷಿಸಿರುವ ಕಡೂರು ತಾಲೂಕಿಗೆ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ಕಳೆದ ಆರು ವರ್ಷಗಳಲ್ಲಿ 66.87 ಕೋಟಿ ಬಿಡುಗಡೆಯಾಗಿದೆ. ಈ ಹಣ ಬಳಕೆಯ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಶಾಸಕ ವೈಎಸ್ ವಿ ದತ್ತ ಆಗ್ರಹಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, 2007-08ರಿಂದ 2012-13ನೇ ಸಾಲಿನ ವರೆಗೆ ಕಡೂರು ತಾಲೂಕಿಗೆ 66.87 ಕೋಟಿ ಬಿಡುಗಡೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಎಂದು ಹೇಳಿದರು.
ಈ ಹಣವನ್ನು ಇಲಾಖೆವಾರು ಬಳಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆದರೆ, ಯಾವುದಕ್ಕೆ ಎಷ್ಟೆಷ್ಟು ಹಣ ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಅದುದರಿಂದ ಈ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇಷ್ಟು ಪ್ರಮಾಣದಲ್ಲಿ ಕಡೂರಿಗೆ ಹಣ ಬಂದಿದೆ. ಆದರೂ ಸುಧಾರಣೆಯಾಗಿಲ್ಲ. ಈ ಹಣ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದಾಗ, ಈ ಕುರಿತು ತನಿಖೆ ನಡೆಸಬೇಕೆಂದು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

