ಆಸ್ಪತ್ರೆ ನಿರ್ಮಾಣಕ್ಕೆ 7.5 ಕೋಟಿ ಮಂಜೂರು
ಕ.ಪ್ರ. ವಾರ್ತೆ, ಕಡೂರು, ಜ3.
ಕಡೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ 7.5 ಕೋಟಿ ಮಂಜೂರಾಗಿದೆ. ಕಡೂರು ಪ್ರವಾಸಿ ಮಂದಿರದ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ. ಪ್ರತ್ಯೇಕ ಬಾಲಕಿಯರ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಿ, 60 ಲಕ್ಷ ವೆಚ್ಚದಲ್ಲಿ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಪ್ರಯೋಗಾಲಯ ಕಟ್ಟಡ ಮತ್ತು 8 ಲಕ್ಷ ವೆಚ್ಚದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಧುನಿಕ ಶೌಚಾಲಯ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಸವಲತ್ತು ತರಲು ಕಡೂರು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಆದ್ದರಿಂದ 30 ಹಾಸಿಗೆಯ ಈ ಮಹಿಳಾ ಮಕ್ಕಳ ಆಸ್ಪತ್ರೆ ಮುಂದೆ 100 ಹಾಸಿಗೆಗೆ ಮೇಲ್ದರ್ಜೆಗೆ ಏರುವ ಸಾಧ್ಯತೆ ಇರುವುದರಿಂದ ಜಾಗದ ಕೊರತೆಯಿಂದ ಪ್ರವಾಸಿ ಮಂದಿರದ ಸಂಪೂರ್ಣ ಜಾಗ ಆಸ್ಪತ್ರೆಗೆ ಬಳಸಿ ಪ್ರವಾಸಿ ಮಂದಿರವನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರ ಕೊರತೆಯಿದೆ. ಕಡೂರು ಆಸ್ಪತ್ರೆಯಲ್ಲಿ 12 ವೈದ್ಯರ ಬದಲಾಗಿ 7 ವೈದ್ಯರಿದ್ದಾರೆ. 5 ವೈದ್ಯರ ಕೊರತೆಯಿದೆ. ಸದ್ಯಕ್ಕೆ ಪ್ರಸೂತಿ ತಜ್ಞರನ್ನು ಹಾಕಿಸುವ ಪ್ರಯತ್ನ ನಡೆದಿದೆ. ಶೀಘ್ರದಲ್ಲೇ ವೈದ್ಯರ ನೇಮಕಾತಿಯಾಗಲಿದೆ. ಕಡೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕಡೂರಿಗೆ ಬಾಲಕಿಯರ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಮಂಜೂರಾಗಲಿದೆ ಎಂದರು.
ಕಡೂರು ತಾಲೂಕು ಡಾ ಡಿ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಎಂದು ಕಳೆದ 2007 ರಿಂದ 2013 ರವರೆಗೆ ಘೋಷಿಸಿ 66 ಕೋಟಿ ಬಿಡುಗಡೆಯಾಗಿದೆ ಎಂದು ವಿಧಾನಸಭೆಯಲ್ಲಿ ತಮ್ಮ ಪ್ರಶ್ನೆಗೆ ಉತ್ತರ ನೀಡಿರುವ ಪ್ರಕಾರ ದೊರಕಿದೆ. 66 ಕೋಟಿ ಬಿಡುಗಡೆಯಾಗಿದ್ದಲ್ಲಿ ಕಡೂರು ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಸಾಗಬೇಕಿತ್ತು. ಆದರೆ, ಬಿಡುಗಡೆಯಾದ ಅನುದಾನದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಸಾಧಿಸಲಾಗಿದೆ ಎಂದು ಆಡಳಿತ ನಡೆಸಿದ ಶಾಸಕರಿಗೆ ತಿಳಿದಿದೆ. 66 ಕೋಟಿಯಲ್ಲಿ ಎಷ್ಟು ಚೆಕ್ ಡ್ಯಾಂ ನಿರ್ಮಿಸಲಾಗಿದೆ, ಡ್ರೈನ್ಸ್ ಅಭಿವೃದ್ಧಿಯಾಗಿವೆ ಎಂಬುದು ಜನರಿಗೆ ತಿಳಿಯಬೇಕು ಎಂದರು.
ತಾವು ಶಾಸಕರಾಗಿ ಕೇವಲ 6 ತಿಂಗಳಲ್ಲಿ 10.50 ಕೋಟಿ ಅನುದಾನ ತರಲಾಗಿದೆ. ಉತ್ತಮ ರಸ್ತೆ ನಿರ್ಮಾಣ, ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆ. ಪಟ್ಟಣಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸೌಲಭ್ಯ ಕೇಳಲಾಗಿದೆ. ಕಡೂರನ್ನು ಈಗಾಗಲೇ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಬೇಸಿಗೆ ಸಮೀಪಿಸುತ್ತಿರುವುದರಿಂದ ಕೆರೆ-ಕಟ್ಟೆಗಳ ದುರಸ್ತಿ ಸೇರಿದಂತೆ ಕುಡಿಯುವ ನೀರು, ದನಕರುಗಳಿಗೆ ಮೇವು ನೀರಿಗೆ ತೊಂದರೆ ಆಗದಂತೆ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿ ಅಗತ್ಯ ಅನುದಾನಕ್ಕೆ ಕ್ರಿಯಾಶೀಲ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಅಡಕೆ ಬೆಳೆಗಾರರ ನಿರ್ಧಾರಗಳಿಂದಾಗಿ ಹೆಬ್ಬೆ ಯೋಜನೆ ಆಸಕ್ತಿ ಕಡಿಮೆಯಾಗಿದೆ. ಮದಗದಕೆರೆಯು ಅಡಕೆ ಬೆಳೆಗಾರರ ಕೆರೆಯೇ ಎಂದು ಪ್ರಶ್ನಿಸಿದ ಅವರು, ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲ ದೃಷ್ಟಿಯಿಂದ ಅಡಕೆ ಬೆಳೆಗಾರರು ಯೋಜನೆಗೆ ಸಹಕರಿಸಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಮಂಜುನಾಥ ಪ್ರಸನ್ನ, ಡಿ.ಪ್ರಶಾಂತ್, ತಿಮ್ಮೇಗೌಡ, ಕಾಲೇಜಿನ ಪ್ರಾಂಶುಪಾಲರಾದ ರಾಜಕುಮಾರ್ ಕಂಗ್ಲಾಪುರ, ಡಾ. ಕೊಟ್ರೇಶಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಕೆ. ಪ್ರಭು, ಡಾ. ಪರಪ್ಪ, ಡಾ. ತೀರ್ಥನಾಥ್, ತಾಪಂ ಪ್ರಭಾರೆ ಅಧ್ಯಕ್ಷೆ ಶೋಭಾ ವೆಂಕಟೇಶ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

