ಚಿಕ್ಕಮಗಳೂರು

ಕೋಮುಸೌಹಾರ್ದ ಕದಡುವವರ ಬಂಧಿಸಿ: ಮನವಿ

Published On :

ಚಿಕ್ಕಮಗಳೂರು: ನಗರದಲ್ಲಿ ದರ್ಗಾ ಅಪವಿತ್ರ ಹಾಗೂ ಮೂಡಿಗೆರೆಯಲ್ಲಿ ದೇವಸ್ಥಾನದ ದ್ವಾರದ ಕಂಬ ಧ್ವಂಸಗೊಳಿಸಿ ಕೋಮು ದಳ್ಳುರಿ ಹಚ್ಚಲು ಪ್ರಯತ್ನಿಸಿದ ಕಿಡಿಕೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನೇತೃತದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಮನವಿ ಸಲ್ಲಿಸಿ ಈ ಎರಡು ಘಟನೆಗಳ ಹಿಂದೆ ರಾಜಕೀಯ ಷಡ್ಯಂತ್ರ ಇರುವುದರಿಂದ ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಮನವಿ:  ದರ್ಗಾ ಅಪವಿತ್ರಗೊಳಿಸಿದ್ದರಿಂದ ಮುಸಲ್ಮಾನರ ಒಂದು ಗುಂಪು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಚಿಕ್ಕಮಗಳೂರು ಬಂದ್‌ಗೆ ಕರೆ ನೀಡಿದ್ದರು. ಈ ಸಂದರ್ಭ ಸಂಘ ಪರಿವಾರದ ಇನ್ನೊಂದು ಗುಂಪು ಮಧ್ಯ ತಡೆಯಲು ಬಂದಿರುವುದು ಖಂಡನೀಯ. ಇದು, ಜಿಲ್ಲಾಡಳಿತದ ವೈಫಲ್ಯತೆ ಎತ್ತಿತೋರುತ್ತದೆ. ಆ ಸಂದರ್ಭದಲ್ಲಿ ಸಹಜವಾಗಿ ಲಾಠಿ ಪ್ರಹಾರ ಮಾಡಿದರೆ ಎರಡು ಗುಂಪಿಗೂ ಕೂಡ ಹೊಡೆತ ಬೀಳಬೇಕಾಗಿತ್ತು ಎಂದು ಹೇಳಿದ್ದಾರೆ.
ಆದರೆ, ಕೇವಲ ಮುಸಲ್ಮಾನ ಕೋಮಿನವರ ಮೇಲೆ ಮಾತ್ರ ಲಾಠಿ ಪ್ರಹಾರ ನಡೆಸಿ, ಸಂಘಪರಿವಾರದ ಗುಂಪನ್ನು ಬಿಜೆಪಿ ಕಚೇರಿಗೆ ಕಳುಹಿಸಿಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಪ್ರತಿಭಟನಾಕಾರರು, ಈ ಹಿಂದೆ ವಿಜಯಪುರದ ಆಂಜನೇಯಸ್ವಾಮಿ ದೇವಸ್ಥಾನವನ್ನು ಸಂಘ ಪರಿವಾರದವರು ಅಪವಿತ್ರಗೊಳಿಸಿ ಕೋಮುಗಲಭೆ ಹಚ್ಚಲು ಯತ್ನಿಸಿ ಸಿಕ್ಕಿಬಿದ್ದಿದ್ದರು.
ಈಗ ಚುನಾವಣೆ ಗುರಿಯಾಗಿಟ್ಟುಕೊಂಡು ರಾಜಕೀಯ ಷಡ್ಯಂತ್ರದಿಂದ ಕೆಲ ಕೋಮುವಾದಿ ಕಿಡಿಗೇಡಿಗಳ ಮುಖಾಂತರ ಇಂತಹ ಪ್ರಕರಣಗಳು ನಡೆಯುತ್ತಿದೆಯೇ ಎಂದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆಯ ಆರೋಪವನ್ನು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಅವರ ತಲೆಗೆ ಕಟ್ಟಿರುವುದು ವಿಷಾದನೀಯ. ತಮ್ಮ ಪಕ್ಷ ಜನಪರ ಕಾರ್ಯಗಳನ್ನು, ಹೋರಾಟಗಳನ್ನು ಮಾಡುತ್ತಾ ಬಂದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಶಾಂತಿ ಕದಡುವ ನೀಚ ಕೆಲಸಕ್ಕೆ ತಮ್ಮ ಪಕ್ಷ ಕೈ ಹಾಕುವುದಿಲ್ಲ.
ಬಿಳಗುಳದಲ್ಲಿ ನಡೆದಿರುವ ಘಟನೆಯ ಬಗ್ಗೆ ಸಿಓಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.