6 ಕೊಳಚೆ ಪ್ರದೇಶಗಳಲ್ಲಿ 1753 ಮನೆ ನಿರ್ಮಾಣ: ಗಾಯತ್ರಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.5
ನಗರದ 6 ಕೊಳಚೆ ಪ್ರದೇಶಗಳನ್ನು ರಾಜೀವ್ ಆವಾಸ್ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ತಿಳಿಸಿದ್ದಾರೆ.
ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ರಾಜೀವ್ ಆವಾಸ್ ಯೋಜನೆ ಜಾರಿಗೆ ತಂದಿದೆ. ಚಿಕ್ಕಮಗಳೂರು ಜಿಲ್ಲೆ ಈ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಂಡಿರಲಿಲ್ಲ. ಈ ವಿಚಾರ ಗಮನಕ್ಕೆ ಬಂದಾಗ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮೊದಲ ಹಂತದಲ್ಲಿ ಚಿಕ್ಕಮಗಳೂರು ನಗರದ 6 ಕೊಳಚೆ ಪ್ರದೇಶಗಳನ್ನು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ವಸ್ತಾರೆ ಟೋಲ್ಗೇಟ್, ಲೆಂಡಿ ತಲಾಬ್, ಸಂತೆ ಮೈದಾನ, ದಂಟರನಮಕ್ಕಿಯ ಫಕೀರ್ ಕಾಲೋನಿ, ಹಿರೇಮಗಳೂರು, ಶಂಕರಪುರ ಮುತ್ತಿನಮ್ಮ ದೇವಸ್ಥಾನ ಪ್ರದೇಶವನ್ನು ಕೊಳಚೆ ಪ್ರದೇಶಗಳನ್ನು ರಾಜೀವ್ ಆವಾಸ್ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಪ್ರದೇಶಗಳಲ್ಲಿ 1753 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಮನೆ ನಿರ್ಮಾಣಕ್ಕೆ 4 ಲಕ್ಷ ವೆಚ್ಚವಾಗಲಿದ್ದು, ಅದರಲ್ಲಿ 30 ಸಾವಿರಗಳನ್ನು ಫಲಾನುಭವಿಯ ವಂತಿಕೆಯಾಗಿ ಕಟ್ಟಬೇಕು. ಇನ್ನುಳಿದ 3.70 ಲಕ್ಷ ಯೋಜನೆಯಿಂದ ಸರ್ಕಾರ ಭರಿಸಲಿದೆ. ಈ ಯೋಜನೆಯಿಂದ ಒಟ್ಟು 70 ಕೋಟಿ ವೆಚ್ಚ ಮಾಡಲಾಗುತ್ತದೆ. ಫಲಾನುಭವಿಗಳ ವಂತಿಕೆಯನ್ನು ಸ್ಥಳೀಯ ಸಂಸ್ಥೆಯ ಶೇ.22.75 ಮತ್ತು ಶೇ.7.25 ರಡಿ ಭರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಎರಡನೇ ಹಂತದಲ್ಲಿ ನಗರಸಭೆ ವ್ಯಾಪ್ತಿಯ ಸಣ್ಣ ನೀರಾವರಿ ಕಾಲುವೆ ಪ್ರದೇಶ, ಶಂಕರಪುರ ಕಾಲುವೆ ಪ್ರದೇಶ, ಕ್ರಿಶ್ಚಿಯನ್ ಕಾಲೋನಿ, ಗೌರಿಕಾಲುವೆಯ ತರಗಿನಪೇಟೆ, ಪಾಲಿಟೆಕ್ನಿಕ್ ಹಿಂಭಾಗ, ಸೋಮೇಶ್ವರ ದೇವಸ್ಥಾನ ಹತ್ತಿರದ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರದೇಶಗಳಲ್ಲಿ ಒಟ್ಟು 572 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಅಂದಾಜು ತಯಾರಿಸಲು ಸರಕಾರ ಖಾಸಗಿ ಏಜೆನ್ಸಿಯನ್ನು ನೇಮಕ ಮಾಡಿದ್ದು, ಸ್ಥಳ ಪರಿಶೀಲನೆ, ಸಮೀಕ್ಷೆ ನಡೆಸಿ ಅಂದಾಜು ತಯಾರಿಸಿ ಸರಕಾರಕ್ಕೆ ಸಲ್ಲಿಸುತ್ತದೆ. ಈ ಯೋಜನೆಯಿಂದಾಗಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

