ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ
ನರಸಿಂಹರಾಜಪುರ: ರಾಜ್ಯದಲ್ಲಿ 1ನೇ ತರಗತಿಯಿಂದ ಪಿಯುಸಿವರೆಗೆ 1.04 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ 80 ಲಕ್ಷ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಭಾನುವಾರ ತಾಲೂಕಿನ ಗಡಿ ಭಾಗದ ಸಿದ್ದರಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಬಡವರೆಂದು ಜನರೇ ತೀರ್ಮಾನಿಸಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಈಗ ಎಲ್ಲಾ ಸೌಲಭ್ಯಗಳಿದ್ದು, ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬೇಕು ಎಂದು ಆಶಯವಾಗಿದೆ. ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ಕಲಿಸಿದರೆ ಸಾಲದು. ಅವರಿಗೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದರು.
ರಾಜ್ಯದಲ್ಲಿ 5.50 ಲಕ್ಷ ಸರ್ಕಾರಿ ನೌಕರರಿದ್ದು, ಇವರಲ್ಲಿ 3.20 ಲಕ್ಷ ಶಿಕ್ಷಕರಿದ್ದಾರೆ. ಇವರಲ್ಲಿ 46 ಸಾವಿರ ಶಿಕ್ಷಕರು ವರ್ಗಾವಣೆ ಕೇಳಿದ್ದಾರೆ. ಇವರಲ್ಲಿ 14 ಸಾವಿರ ದಂಪತಿಗಳಿದ್ದು, ಇವರು ಬೇರೆ, ಬೇರೆ ಊರಿನಲ್ಲಿದ್ದು, ಒಟ್ಟಿಗೆ ಕೆಲಸ ಮಾಡಲು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಇಟ್ಟವರನ್ನೆಲ್ಲಾ ವರ್ಗಾವಣೆ ಮಾಡಿದರೆ 2 ಸಾವಿರ ಶಾಲೆಗಳನ್ನೇ ಮುಚ್ಚಬೇಕಾಗುತ್ತದೆ ಎಂದು ತಿಳಿಸಿದರು.
ಚಿಂತನೆ: ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಜೂನ್ ತಿಂಗಳ ನಂತರ ನಿವೃತ್ತಗೊಂಡ ಶಿಕ್ಷಕರನ್ನು ಮಾರ್ಚ್ 31 ರ ವರೆಗೆ ಅತಿಥಿ ಶಿಕ್ಷಕರನ್ನಾಗಿ ಮುಂದುವರಿಸಲು ಚಿಂತನೆ ನಡೆಸಲಾಗಿದೆ. ಕಳೆದ 25 ವರ್ಷಗಳಿಂದಲೂ ಶಾಲೆಗಳಲ್ಲಿ ಅಟೆಂಡರ್ ಹುದ್ದೆ ಖಾಲಿ ಇದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಜೂನ್ ತಿಂಗಳ ಹೊತ್ತಿಗೆ ಎಲ್ಲಾ ಶಾಲೆಗಳಲ್ಲೂ ಸಮವಸ್ತ್ರ, ಬ್ಯಾಗ್, ಸೈಕಲ್ ಸಿದ್ಧವಾಗಿರಬೇಕು ಎಂದು ಈಗಾಗಲೇ ಆದೇಶ ನೀಡಿದ್ದೇನೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು 3 ವರ್ಷದವರೆಗೆ ಒಂದೇ ಕಡೆ ಇದ್ದರೆ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದ್ಧೆಳಿಸಿದರು.
ಸ್ವಾಗತಾರ್ಹ: ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ ನೂತನ ಧ್ವಜಕಟ್ಟೆ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಎನ್. ಜೀವರಾಜ್, ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರಲು ಹೊರಟಿರುವುದು ಸ್ವಾಗತಾರ್ಹ. ಈ ಹಿಂದೆ ಮಕ್ಕಳಿಗೆ ಮನೆಯಲ್ಲೇ ಉತ್ತಮ ಸಂಸ್ಕಾರ ನೀಡುವ ಪರಿಪಾಠ ಇತ್ತು. ಈಗ ಟಿವಿ ಹಾಗೂ ಮೊಬೈಲ್ ಬಂದ ನಂತರ ಎಲ್ಲವೂ ಬದಲಾವಣೆ ಆಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸಿದ್ದರಮಠ ಶಾಲೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅನೇಕ ಗ್ರಾಮಸ್ಥರು ಶಾಲೆಗೆ ದಾನ ನೀಡಿದ್ದಾರೆ. ಸಿದ್ದರಮಠಕ್ಕೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಪ್ರೌಢಶಾಲೆ ಮಂಜೂರು ಮಾಡಿಸಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. 30 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹಾ ಪೋಷಕರನ್ನು ಗೌರವಿಸಲಾಯಿತು. ಶಾಲೆಗೆ ದತ್ತಿ ದಾನ ನೀಡಿದವರಿಗೆ ಅಭಿನಂದಿಸಲಾಯಿತು. ಸಿದ್ದರಮಠ ಶಾಲೆಯ ಹಳೇ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಶಂಕರ್ ವಹಿಸಿದ್ದರು. ಅತಿಥಿಗಳಾಗಿ ಕೊಪ್ಪ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ಜಿಪಂ ಸದಸ್ಯೆ ಅನ್ನಪೂರ್ಣ ಚೆನ್ನಕೇಶವ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ, ಗ್ರಾಪಂ ಅಧ್ಯಕ್ಷ ಪರಮೇಶ್ವರ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು.
ಊರುಗುಡಿಗೆ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ.ನಾಗಭೂಷಣ್ ಸ್ವಾಗತಿಸಿದರು. ಜ್ಯೋತಿ ಮತ್ತು ನವೀನ್ ನಿರೂಪಿಸಿದರು. ಕೆ.ಎಸ್. ಶ್ರೀನಿವಾಸ್ ವಂದಿಸಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಶಿಕ್ಷಕರ ಮತ್ತು ಮಕ್ಕಳ ಅನಿಸಿಕೆ, ಸಂವಾದ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

