ಚಿಕ್ಕಮಗಳೂರು

ಕೂಲಿ ಹೆಚ್ಚಿಸುವಂತೆ ಹಮಾಲಿಗಳ ಆಗ್ರಹ

Published On :

ಮೂಡಿಗೆರೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿವರಗೆ ಆಹಾರ ಸಾಮಗ್ರಿ ಸಾಗಣೆ ಮಾಡುವ ಹಮಾಲಿಗಳ ಕೂಲಿ ಹೆಚ್ಚಿಸುವಂತೆ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಒ.ಎಲ್.ಸುಂದರ್ ಒತ್ತಾಯಿಸಿದರು.
ಹ್ಯಾಂಡ್‌ಪೋಸ್ಟ್ ವ್ಯವಸಾಯೋತ್ಪನ್ನ ಸಹಕಾರ ಸಂಘದ ಗೋದಾಮಿನ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಸಿಗುತ್ತಿರುವ ಕೂಲಿ ತೀರಾ ಕಡಿಮೆಯಾಗಿದೆ ಎಂದರು.
ರು. 18ಕ್ಕೆ ಏರಿಸಿ: ಗ್ರಾಮೀಣ ಪ್ರದೇಶಗಳಲ್ಲಿ ನೀಡಲಾಗುತ್ತಿರುವ ಪ್ರತಿ ಕ್ವಿಂಟಲ್‌ಗೆ ರು. 6 ಕೂಲಿಯನ್ನು ಕನಿಷ್ಠ ರು. 18ಕ್ಕೆ ಏರಿಸುವು ದರೊಂದಿಗೆ, ಪ್ರತಿ ಕಾರ್ಮಿಕರಿಗೂ ಸೇವಾಭದ್ರತೆ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಪಡಿಸಿ ರಾಜ್ಯ ಸರ್ಕಾರದಿಂದಲೇ ಹಮಾಲಿಗಳನ್ನು ನೇಮಿಸಬೇಕು ಎಂದರು.
ಶ್ರಮಿಕ ಶಕ್ತಿಯ ಅಧ್ಯಕ್ಷ ಗೌಸ್ ಮೊಯಿದ್ದೀನ್ ಮಾತನಾಡಿ, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯ ಲೋಡಿಂಗ್ ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದದಿಂದ ಪ್ರತಿಭಟನೆ ನಡೆಸುತ್ತಿದ್ದು. ಕೆ.ಎಫ್,ಸಿ,ಎಸ್.ಸಿ ಮತ್ತು ಟಿ.ಎ.ಪಿ.ಸಿ.ಎಂ.ಎಸ್ ಗೋದಾಮುಗಳಲ್ಲಿನ ಕಾರ್ಮಿಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಉಗ್ರ ಹೋರಾಟ: ಆಹಾರ ಸಚಿವ ದಿನೇಶ್ ಗುಂಡುರಾವ್ ಅವರಿಗೆ ಮನವಿ ಸಲ್ಲಿಸಿ, ನಾಲ್ಕು ತಿಂಗಳು ಕಳೆದರೂ, ಯಾವುದೇ ನಿರ್ಣಯ ಕೈಗೊಂಡಿಲ್ಲ. ಇನ್ನಾದರೂ ಸಚಿವರು ಹಮಾಲಿಗಳ ಬಗ್ಗೆ ನಿರ್ಣಯ ಕೈಗೊಳ್ಳಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಹಮಾಲಿ ಸಂಘದ ತಾಲೂಕು ಅಧ್ಯಕ್ಷ ಆಭೀದ್ ಹುಸೇನ್ ಮಾತನಾಡಿ, ಸರ್ಕಾರ ಈಗಾಗಲೇ ಪಡಿತರ ಮತ್ತು ಅಕ್ಕಿ ಗಿರಣಿ ಮಾಲೀಕರ ಸಮಸ್ಯೆಯನ್ನು ಶೀಘ್ರದಲ್ಲಿ ನಿವಾರಿಸಿದೆ. ಆದರೆ ಕಾರ್ಮಿಕರ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಹ್ಯಾಂಡ್‌ಪೋಸ್ಟ್ ವ್ಯವಸಾಯೋತ್ಪನ್ನ ಸಹಕಾರ ಸಂಘದ ಗೋದಾಮಿನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಹಮಾಲಿ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಕಾರ್ಯದರ್ಶಿ ಶೇಖರ್, ಕಲೀಂ, ಈರೇಶ್, ಹರೀಶ್, ಕಾಸಿಂ, ಸದ್ದಾಂ ಹುಸೇನ್, ಬುಟ್ಟೋ ಸೇರಿದಂತೆ ಹಮಾಲಿ ಕಾರ್ಮಿಕರು ಮತ್ತು ಆಂಧ್ರ ಮೂಲದ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.