ಮನೆ- ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ
ಚಿಕ್ಕಮಗಳೂರು: ಅಂಗೈಯಲ್ಲಿ ಮನೆ- ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ ಇರುತ್ತದೆ. ಪ್ರಾಚೀನ ಋಷಿ- ಮುನಿಗಳ ಶ್ರೇಷ್ಠ ಪರಂಪರೆಯಲ್ಲಿ ಬಂದ ಸಾರಾಮೃತ ಮನೆಮದ್ದು ಎಂದು ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ನಿರ್ದೇಶಕ ಪರಿಸರವಾದಿ ಗಜೇಂದ್ರ ಗೊರಸುಕುಡಿಗೆ ಹೇಳಿದ್ದಾರೆ.
ಕೊಪ್ಪ ತಾಲೂಕಿನ ಭಂಡಿಗಡಿಯ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನ ಹಾಗೂ ತಾಲೂಕು ಪಾರಂಪರಿಕ ವೈದ್ಯ ಪರಿಷತ್ ಆಶ್ರಯದಲ್ಲಿ ಹರಿಹರಪುರದ ಮಲ್ಲೇಶಯ್ಯನವರ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ ಮತ್ತು ಮನೆಮದ್ದು ಔಷಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಮ್ಮೆಯ ವಿಜ್ಞಾನಿ: ಅನ್ನ, ವಿದ್ಯೆ, ನೀರು, ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದ ಪರಂಪರೆ ಭಾರತದ್ದು. ವೈದ್ಯರನ್ನು ನಾರಾಯಣ ಸದೃಶವಾಗಿ ಕಾಣಲಾಗುತ್ತಿತ್ತು. ಹಿಂದಿನ ಋಷಿ- ಮುನಿಗಳು ಬರಿ ಸಂತರಲ್ಲ. ಅವರು ನಮ್ಮ ಹೆಮ್ಮೆಯ ವಿಜ್ಞಾನಿಗಳೂ ಹೌದು. ಪತಂಜಲಿಯ ಯೋಗ, ಧನ್ವಂತರಿಯ ಆಯುರ್ವೇದ, ಪಾಲಿನಿಯ ವ್ಯಾಕರಣ, ಶುಶ್ರೂಶನ ಶಸ್ತ್ರಚಿಕಿತ್ಸೆ, ಜಗತ್ತನ್ನು ಗೆಲ್ಲಲು ಕೆಲ ಉದಾಹರಣೆಗಳೆಂದರು.
ನಮ್ಮ ಆಯುರ್ವೇದ- ಗಿಡಮೂಲಿಕೆಗಳ ಬಗ್ಗೆ ನಮಗೆ ಮೊದಲು ವಿಶ್ವಾಸ ಮೂಡಬೇಕು. ಇದರಿಂದ ಹಣ, ಆರೋಗ್ಯ, ನೆಮ್ಮದಿ ಎಲ್ಲವೂ ನಮ್ಮದಾಗುತ್ತದೆ. ಕಣ್ಣೆದುರಿನ ಮಬ್ಬು ದೂರ ಮಾಡಲು ಇಂಥ ಜಾಗೃತಿ ಶಿಬಿರಗಳು ಅಗತ್ಯ ಎಂದ ಗಜೇಂದ್ರ, ಕೈಲಿರುವ ಅಪ್ಪಟ ಬಂಗಾರ ಬಿಟ್ಟು, ಕಾಗೆ ಬಂಗಾರದತ್ತ ನಾವು ಕೈಚಾಚುತ್ತಿದ್ದೇವೆಂದು ವಿಷಾದಿಸಿದರು.
ಅಮೆರಿಕ ಮತ್ತಿತರೆ ದೇಶಗಳಲ್ಲಿ ಅರೆಬರೆ ಬಟ್ಟೆಯ ಯೋಗಪಟು ಲಕ್ಷಾಂತರ ರು. ಹಣ ಗಳಿಸುವ ಸ್ಥಿತಿ ಇರುವಂತೆ ಮುಂದೆ ನಮ್ಮ ಅಳಲೆಕಾಯಿ ಪಂಡಿತರ ಮುಂದೆ ಜಗತ್ತೆ ಮಂಡಿಯೂರಿ ಗೌರವಿಸುವ ಕಾಲ ಬಂದೇ ಬರುತ್ತದೆ. ಅಡುಗಲಜ್ಜಿ ಔಷಧಿಯೆಂದು ಮನೆಮದ್ದನ್ನು ದೂರವ ಕಾಲ ಹೋಗುತ್ತಿದೆ. ಅಡ್ಡ ಪರಿಣಾಮ ಇಲ್ಲದೆ ಕಾಸು ಖರ್ಚಿಲ್ಲದೆ ಸುತ್ತಲಿನ ಸಾಮಾನ್ಯ ಸಸ್ಯ ಅಡುಗೆ ಮನೆ ಡಬ್ಬಿಯ ವಸ್ತು ಬಳಸಿ ಸಾಮಾನ್ಯ ಕಾಯಿಲೆ ದೂರ ಮಾಡಿಕೊಳ್ಳಬಹುದೆಂದರು.
ಅಡ್ಡ ಪರಿಣಾಮವಿಲ್ಲ: ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಅಧ್ಯಕ್ಷ ಶಿವನಗರದ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಆರೋಗ್ಯವೇ ಭಾಗ್ಯ. ಆಯುರ್ವೇದ ಮನುಷ್ಯನಿಗೆ ಸಂಜೀವಿನಿ. ಅನೇಕ ಕಾಯಿಲೆಗಳನ್ನು ಬೇರು ಸಹಿತ ಕಿತ್ತುಗೆಯೋ ಶಕ್ತಿ ಇದಕ್ಕಿದೆ. ಒಂದೊಮ್ಮೆ ಅದಾಗದಿದ್ದರೂ ಅಡ್ಡ ಪರಿಣಾಮ ಖಂಡಿತ ಇಲ್ಲ ಎಂದರು.
ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ತು ಅಧ್ಯಕ್ಷ ಹುಣಸಘಟ್ಟ ಸದಾಶಿವಯ್ಯ ಮಾತನಾಡಿ, ನಾಟಿ ವೈದ್ಯರಿಗೆ 4,500 ವರ್ಷಗಳ ಇತಿಹಾಸವಿದ್ದರೂ ನಾಟಿ ವೈದ್ಯರನ್ನು ಕೆಲವರು ವಿಶೇಷವಾಗಿ ಚಿತ್ರೋದ್ಯಮ ಖಳನಾಯಕ- ಜೋಕರ್ ಆಗಿ ಬಿಂಬಿಸುತ್ತಿದೆ. ಡಬ್ಲ್ಯೂಎಚ್ಒ ನಶಿಸುತ್ತಿರುವ ಈ ವಿದ್ಯೆ ದಾಖಲಿಸುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಕೇಂದ್ರ ಸರ್ಕಾರ 14 ವರ್ಷಗಳ ಹಿಂದೆ ಪಾರಂಪರಿಕ ವೈದ್ಯ ಪರಿಷತ್ತು ಎಂಬ ಎನ್ಜಿಓ ಹುಟ್ಟುಹಾಕಿದೆ ಎಂದು ಹೇಳಿದರು.
ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜು, ಕೊಪ್ಪ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಪ್ರಿಯಾ, ಡಾ. ಶಿಲ್ಪಾ, ಲಕ್ಷ್ಮೀಕಾಂತ್, ತಾಲೂಕು ಪಾ.ವೈ.ಪ. ಕಾರ್ಯದರ್ಶಿ ಸುಬ್ರಮಣ್ಯ ಮಾತನಾಡಿದರು. ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಸ್ಥಾಪಕ ಪ್ರವರ್ತಕ ಬಿ.ಎಚ್. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರವರ್ತಕ ರವಿಪ್ರಸಾದ್ ಸ್ವಾಗತಿಸಿದರು, ವ್ಯವಸ್ಥಾಪಕ ಪ್ರವರ್ತಕ ಡಾ. ಬಿ.ಆರ್. ಅಂಬರೀಷ್ ವಂದಿಸಿದರು.
ಕಣಕುಟ್ಲು ಶಿವಣ್ಣ, ಕೆ.ಎನ್. ವೆಂಕಟರಾವ್, ಎ.ಎಂ. ಶ್ರೀಧರರಾವ್, ಬಿ.ಎಚ್. ದಿವಾಕರ, ಬಡಿಯಣ್ಣ, ರಾಮಯ್ಯ, ನಾಗರಾಜ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

