ಚಿಕ್ಕಮಗಳೂರು

ಭೂ ಕಂದಾಯ ವಸೂಲಿ: ಮೂಡಿಗೆರೆಗೆ ಕೊನೆ ಸ್ಥಾನ

Published On :

ಚಿಕ್ಕಮಗಳೂರು: ರೈತರು ಪ್ರತಿವರ್ಷ, ತಮ್ಮ ಭೂಮಿಯ ಕಂದಾಯವನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ, ಆದರೆ, ಕೆಲವು ರೈತರು ಸಕಾಲದಲ್ಲಿ ಕಂದಾಯ ಕಟ್ಟುತ್ತಿಲ್ಲ.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಭೂ ಕಂದಾಯ ವಸೂಲಿಯಲ್ಲಿ ಶೇ. 48 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.
ಭೂಕಂದಾಯ ಪಾವತಿಯಲ್ಲಿ ಚಿಕ್ಕಮಗಳೂರು ತಾಲೂಕು ಮೊದಲನೇ ಸ್ಥಾನದಲ್ಲಿದೆ. ಅಂದರೆ, ಈವರೆಗೆ ಶೇ. 96 ರಷ್ಟು ಕಂದಾಯ ವಸೂಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಶೇ. 16.24 ರಷ್ಟು ಕಂದಾಯ ವಸೂಲಾಗಿದೆ. ಇನ್ನುಳಿದಂತೆ ಶೃಂಗೇರಿ ತಾಲೂಕಿನಲ್ಲಿ ಶೇ. 49.19, ಕೊಪ್ಪ- ಶೇ. 65.34, ಎನ್.ಆರ್. ಪುರ- ಶೇ. 55.78, ತರೀಕೆರೆ- ಶೇ. 50.46, ಕಡೂರು ತಾಲೂಕಿನಲ್ಲಿ ಶೇ. 73.05 ರಷ್ಟು ಕಂದಾಯ ವಸೂಲಾಗಿದೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಹಿಂದಿನ ವರ್ಷದ ಬಾಕಿಯೂ ಸೇರಿದಂತೆ 46,50,927 ಕಂದಾಯ ವಸೂಲಾಗಬೇಕಾಗಿದ್ದು, ಡಿಸೆಂಬರ್ ಅಂತ್ಯದವರೆಗೆ 22,58,106 ವಸೂಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 25,691, ಮೂಡಿಗೆರೆ ತಾಲೂಕು- 13,92,279, ಶೃಂಗೇರಿ- 24,808, ಕೊಪ್ಪ- 5,259, ಎನ್.ಆರ್. ಪುರ- 46,571, ತರೀಕೆರೆ- 7,03,008, ಕಡೂರು ತಾಲೂಕಿನಲ್ಲಿ 1,95,205 ವಸೂಲಾಗಬೇಕಾಗಿದೆ.
ಜಿಲ್ಲೆಯ 7 ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಬಹಳಷ್ಟು ರೈತರು ಕಂದಾಯ ಕಟ್ಟುತ್ತಿಲ್ಲ. ಇನ್ನುಳಿದ ತಾಲೂಕುಗಳ ರೈತರು ಆಗಾಗ ಕಂದಾಯ ಪಾವತಿಸುತ್ತಿದ್ದಾರೆ.
ನೀರಿನ ಕಂದಾಯ: ಹೊಲ ಹಾಗೂ ಗದ್ದೆಗಳಿಗೆ ನೀರು ಬಳಕೆ ಮಾಡಿರುವುದಕ್ಕೆ ಪ್ರತ್ಯೇಕವಾಗಿ ಕಂದಾಯ ನಿಗದಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷದಲ್ಲಿ 22,03,587 ನೀರಿನ ಕಂದಾಯ ವಸೂಲಾಗಬೇಕಾಗಿದ್ದು, ಈವರೆಗೆ ವಸೂಲಾಗಿದ್ದು, ಕೇವಲ 2,08,989 ಮಾತ್ರ. ಅಂದರೆ ಶೇ. 11.18 ರಷ್ಟು ಪ್ರಗತಿ ಸಾಧಿಸಲಾಗಿದೆ.
ಬರಪೀಡಿತ ಕಡೂರು ತಾಲೂಕಿನ ಎಲ್ಲಾ ರೈತರು ನೀರಿನ ಕಂದಾಯ ಪಾವತಿ ಮಾಡಿದ್ದಾರೆ. ಆದರೆ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ಮಲೆನಾಡಿನ ಕೆಲವು ತಾಲೂಕುಗಳಲ್ಲಿ ಸಕಾಲದಲ್ಲಿ ನೀರಿನ ಕಂದಾಯ ವಸೂಲಾಗುತ್ತಿಲ್ಲ. ಚಿಕ್ಕಮಗಳೂರು ತಾಲೂಕಿನಲ್ಲಿ 9,32,170, ಮೂಡಿಗೆರೆ ತಾಲೂಕಿನಲ್ಲಿ 31,291, ಕೊಪ್ಪ- 12,021, ಎನ್.ಆರ್. ಪುರ- 4,46,954, ತರೀಕೆರೆ ತಾಲೂಕಿನಲ್ಲಿ 5,34,749 ವಸೂಲಾಗಬೇಕಾಗಿದೆ.
ಸಕಾಲದಲ್ಲಿ ನೀರಿನ ಕಂದಾಯ ಪಾವತಿ ಮಾಡದೆ ಹೋದರೆ ಸರ್ಕಾರ ಅದಕ್ಕೆ ದಂಡ ವಿಧಿಸುತ್ತಿದೆ. ಅದರಂತೆ ತರೀಕೆರೆ ತಾಲೂಕಿನಲ್ಲಿ 6,67,563, ಕಡೂರು ತಾಲೂಕಿನಲ್ಲಿ 3,76,297 ವಸೂಲಾಗಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ಈ ಎರಡು ತಾಲೂಕುಗಳಲ್ಲಿ ಬರ ಬಂದಿದ್ದರಿಂದ ರೈತರಿಗೆ ನೀರಿನ ಕಂದಾಯ ಕಟ್ಟಲು ಸಾಧ್ಯವಾಗಿಲ್ಲ.
ಕಂದಾಯ ಫಿಕ್ಸ್: ಚಿಕ್ಕಮಗಳೂರು ಜಿಲ್ಲೆ 7 ತಾಲೂಕು ಹೊಂದಿದ್ದು, ಈ ಪೈಕಿ ಕಡೂರು ತಾಲೂಕು ಪೂರ್ಣ ಪ್ರಮಾಣದಲ್ಲಿ ಬಯಲುಸೀಮೆ ಪ್ರದೇಶವಾಗಿದ್ದು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವು ಪ್ರದೇಶ ಬಯಲುಸೀಮೆಯಾಗಿದ್ದರೆ, ಇನ್ನು ಕೆಲವು ಪ್ರದೇಶ ಮಲೆನಾಡು. ಇನ್ನುಳಿದಂತೆ ಮೂಡಿಗೆರೆ, ಕೊಪ್ಪ- ಶೃಂಗೇರಿ ಮತ್ತು ಎನ್.ಆರ್. ಪುರ ತಾಲೂಕುಗಳು ಮಲೆನಾಡು ಪ್ರದೇಶಗಳು.
ಜಿಲ್ಲೆಯ ಎಲ್ಲಾ ಪ್ರದೇಶಗಳಿಗೆ ಒಂದೇ ರೀತಿಯ ಭೂ ಕಂದಾಯ ನಿಗದಿಗೊಂಡಿಲ್ಲ. ಆಯಾ ಪ್ರದೇಶಕ್ಕೆ ಅನುಗುಣವಾಗಿ ತೆರಿಗೆ ನಿಗದಿಪಡಿಸಲಾಗಿದೆ.
1930ರಲ್ಲಿ ಭೂಮಿಯ ಸರ್ವೆ ನಡೆಸಿ ಕಂದಾಯ ನಿಗದಿಪಡಿಸಲಾಗಿದೆ. ಅದೇ ತೆರಿಗೆ ಇಂದಿಗೂ ಮುಂದುವರಿದಿದೆ. ಇದೇ ಕಂದಾಯವನ್ನು ರೈತರು ಪಾವತಿ ಮಾಡುತ್ತಿದ್ದಾರೆ. ಸರ್ವೆಯರ್‌ಗಳ ಕೊರತೆಯಿಂದಾಗಿ ಕಳೆದ 80 ವರ್ಷಗಳಿಂದ ಭೂಮಿಯ ಮರು ಸರ್ವೆ ಕಾರ್ಯ ನಡೆದಿಲ್ಲ.
ಆದ್ದರಿಂದ ರೈತರು ಹಲವು ವರ್ಷಗಳ ಹಿಂದೆ ನಿಗದಿಪಡಿಸಿದ ಕಂದಾಯವನ್ನೇ ಪಾವತಿ ಮಾಡುತ್ತಿದ್ದಾರೆ. ಅಂದರೆ ಇದೀಗ ಪಾವತಿ ಮಾಡುತ್ತಿರುವ ತೆರಿಗೆ ಅತ್ಯಂತ ಕಡಿಮೆಯಾಗಿದೆ. ಆದರೂ ಕೆಲವು ರೈತರು ಕಾಲ ಕಾಲಕ್ಕೆ ಕಂದಾಯ ಪಾವತಿ ಮಾಡುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.