ಎಸ್ಸಿ, ಎಸ್ಟಿ ಹಾಸ್ಟೆಲ್ ಕಟ್ಟಡ: ಜೂನ್ಗೆ ಪೂರ್ಣ
ಚಿಕ್ಕಮಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 7.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರದ ಬೇಲೂರು ರಸ್ತೆ ಎಸ್.ಸಿ., ಎಸ್.ಟಿ. ವಿದ್ಯಾರ್ಥಿನಿಲಯದ ಕಾಮಗಾರಿ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಭಾನುವಾರ ಕಾಮಗಾರಿ ಪರಿಶೀಲಿಸಿ ನಂತರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿ ಪ್ಲಸ್-2 ಹಾಸ್ಟೆಲ್ ಕಟ್ಟಡಕ್ಕೆ ಅನುದಾನ ಮಂಜೂರಾಗಿತ್ತು. ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ನಾರಾಯಣಸ್ವಾಮಿ ಅವರು ಜಿಲ್ಲೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ತಾವೇ ಅವರನ್ನು ಹಾಸ್ಟೆಲ್ಗೆ ಕರೆದೊಯ್ದು ಕಿಷ್ಕಿಂಧೆಯಂತಿದ್ದ ಕಟ್ಟಡ ಹಾಗೂ ಅಲ್ಲಿನ ಅವ್ಯವಸ್ಥೆಗಳನ್ನು ಗಮನಕ್ಕೆ ತಂದಿದ್ದೆವು ಈ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ನಾರಾಯಣಸ್ವಾಮಿ ಅವರು 7.5 ಕೋಟಿ ಮಂಜೂರು ಮಾಡಿದ್ದರು ಎಂದು ತಿಳಿಸಿದರು.
600 ಮಕ್ಕಳಿಗೆ ಅವಕಾಶ: ಇದರ ಪರಿಣಾಮ 600 ಮಕ್ಕಳು ಉಳಿಯಬಹುದಾದ ಸುಸಜ್ಜಿತ ಹಾಸ್ಟೆಲ್ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಉತ್ತಮ ಗಾಳಿ, ಬೆಳಕು, ಆರೋಗ್ಯ, ನೀರು, ನೈರ್ಮಲ್ಯ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
66 ಕೊಠಡಿಗಳನ್ನು ಒಳಗೊಂಡ ಈ ಕಟ್ಟಡದಲ್ಲಿ ವ್ಯವಸ್ಥಿತ ಊಟದ ಹಾಲ್, ಮಳೆ ನೀರು ಕೊಯ್ಲು, ಸೋಲಾರ್ ಸೌಲಭ್ಯ, ಬಿಸಿ ನೀರಿನ ಸೌಲಭ್ಯವನ್ನೂ ಕಟ್ಟಡ ಒಳಗೊಂಡಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ನಲ್ಲೂರಿನಲ್ಲಿ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ 5 ಕೋಟಿ ಹಾಗೂ ಎಐಟಿ ಕಾಲೇಜಿನ ವಾಲ್ಮೀಕಿ ಭವನಕ್ಕೆ 2 ಕೋಟಿ ಅನುದಾನ ಮಂಜೂರು ಮಾಡಿ ಹಣವನ್ನೂ ಬಿಡುಗಡೆ ಮಾಡಿದೆ. ಆದರೆ, ಜಿಲ್ಲಾಡಳಿತ ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ವಿಳಂಬ ಮಾಡದೆ ಕಾಮಗಾರಿ ಆರಂಭಿಸಬೇಕು ಇಲ್ಲವಾದಲ್ಲಿ ಸಮಾಜದ ಜನರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ವೆಂಕಟೇಶ್, ನಿಂಗೇಗೌಡ ಹಾಜರಿದ್ದರು.
ದರ್ಗಾ: ಸತ್ಯಾಂಶ ಹೊರ ಬರಲಿ
ಚಿಕ್ಕಮಗಳೂರು: ಸತ್ಯ ಮುಚ್ಚಿಡಲು ಸಾಧ್ಯವಿಲ್ಲ, ಕೆಲವೇ ದಿನಗಳಲ್ಲಿ ಬಹಿರಂಗವಾಗುತ್ತದೆ. ತನಿಖೆ ಪೂರ್ಣಗೊಂಡ ನಂತರ ಅಪರಾಧಿ ಸ್ಥಾನದಲ್ಲಿ ಯಾರೇ ಇದ್ದರೂ ಅವರನ್ನು ರಕ್ಷಿಸುವ ಕೆಲಸ ನಾನಾಗಲಿ ಅಥವಾ ನನ್ನ ಪಕ್ಷವಾಗಲಿ ಮಾಡುವುದಿಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ನಗರದ ಎಂ.ಜಿ. ರಸ್ತೆಯ ದರ್ಗಾ ಅಪವಿತ್ರ ಪ್ರಕರಣ ಕುರಿತಂತೆ ಗೌಸ್ ಮೊಹಿದ್ದೀನ್ ತಮ್ಮ ವಿರುದ್ಧ ಮಾಡಿರುವ ಆರೋಪ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಪರಾಧಿಗಳ ರಕ್ಷಣೆ ಸಂಬಂಧ ನಾನು ಪೊಲೀಸ್ ಇಲಾಖೆಗೆ ಒತ್ತಡ ಹೇರಿಲ್ಲ. ಪ್ರಕರಣದ ಸಂಬಂಧ ಎಲ್ಲ ಕಡೆಗಳಿಂದಲೂ ತನಿಖೆಗೆ ಆಗ್ರಹಿಸಿದ್ದೇನೆ. ಇಂದಿಗೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು. ನಾನು ಸೇರಿದಂತೆ ರಾಜಶೇಖರ್ ಹಾಗೂ 2 ಜನ ಬಂಧಿತರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಬಯಲಾಗಿ ಬಿಜೆಪಿ ಹೆಸರು ಕೆಡಿಸಲು ರಾಜಕೀಯ ಪಿತೂರಿ ನಡೆಸಿರುವವರ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು.
ನಿಷ್ಪಕ್ಷಪಾತ ತನಿಖೆಯಾಗಲಿ: ಮೂಡಿಗೆರೆಯಲ್ಲಿ ದೇವಸ್ಥಾನದ ಕಟ್ಟೆ ಒಡೆದಿರೋದು ದರ್ಗಾಕ್ಕೆ ಆದ ಅಪಮಾನದಷ್ಟೆ ಅಕ್ಷಮ್ಯ ಅಪರಾಧ. ಪೊಲೀಸರು ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

