ಚಿಕ್ಕಮಗಳೂರು

ಸ್ತ್ರೀ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.12
ಮಹಿಳಾ ಸಬಲೀಕರಣಕ್ಕೆ ಹೆಣ್ಣು ಮಕ್ಕಳ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಸ್ತ್ರೀರೋಗ ತಜ್ಞೆ ಡಾ. ವೀಣಾ ಹೇಳಿದ್ದಾರೆ.
ಮಹಿಳಾ ಜಾಗೃತಿ ಸಂಘ ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 30ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಮಹಿಳೆಯರ ಸರ್ವತ್ತೋಮುಖ ಅಭಿವೃದ್ಧಿಗೆ ಪೂರಕವಾದ ತರಬೇತಿ, ಕಾರ್ಯಾಗಾರ ನಡೆಸಬೇಕೆಂದರು. ಯಾವುದೇ ಮಹಿಳೆಗೆ ಅನ್ಯಾಯವಾದಾಗ ಬೆಂಬಲವಾಗಿ ನಿಂತು ನ್ಯಾಯ ದೊರಕಿಸಿ ಕೊಡಲು ಹೋರಾಡಿದರೆ ಆಕೆಯ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಧೈರ್ಯದಿಂದ ಮುನ್ನುಗ್ಗಿ: ನೊಂದ ಮಹಿಳೆಗೆ ವಿಶ್ವಾಸ ತುಂಬುವ ಕೆಲಸ ಆಗಬೇಕು. ಆರ್ಥಿಕ ಸ್ವಾವಲಂಬನೆಯಿಂದ ಮಹಿಳೆ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸುವ ಕಾರ್ಯ ಸೃಷ್ಟಿಯಾಗಬೇಕೇಂದ ಅವರು, ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ಬೆಳೆಸಿಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹಿಳೆಯರು ಹೆಚ್ಚಿನ ಆಸಕ್ತಿವಹಿಸಬೇಕು.  ದೇಹದ ತೂಕ ಹೆಚ್ಚಿದಾಗ ಮಾನಸಿಕವಾಗಿ ಕುಗ್ಗುತ್ತಾಳೆ. ಒಂದು ರೀತಿಯ ಡಿಪ್ರೇಷನ್‌ಗೆ ಒಳಗಾಗಿ ಕೋಪ, ಕೂಗಾಟ, ಜಗಳ ಸಾಮಾನ್ಯವಾಗಿ ನೆಮ್ಮದಿಯನ್ನು ಹಾಳು ಮಾಡುವ ಸಂದರ್ಭ ಹೆಚ್ಚಾಗಿರುವುದರಿಂದ ದೇಹದ ತೂಕ ನಿಯಂತ್ರಿಸಲು ಆಸಕ್ತಿವಹಿಸಬೇಕು.
ಮೂಳೆಗಳು ಸವೆದು ಓಡಾಡಲು ತೊಂದರೆಯಾಗುವ ಸಾಮಾನ್ಯ ಕಾಯಿಲೆ ಮಹಿಳೆಯರಿಗೆ ಬರುತ್ತಿದ್ದು, ಪೌಷ್ಠಿಕಾಂಶದ ಆಹಾರ ಸೇವನೆಯ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಕುಟುಂಬದ ಸ್ವಾಸ್ಥ್ಯ ಸುಧಾರಿಸುವುದು ಎಂದರು.
ಆರೋಗ್ಯ ಕಾಪಾಡಿಕೊಳ್ಳಿ: ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ನೈರ್ಮಲ್ಯ, ಸ್ವಚ್ಛತೆ ಕಾಪಾಡುವಲ್ಲಿ ಮಹಿಳೆಯರು ಜಾಗೃತಿವಹಿಸಬೇಕು. ಶಿಸ್ತು, ಸಮಯಪಾಲನೆ, ಸಂಯಮ, ತಾಳ್ಮೆ ಮಹಿಳೆಯರಿಗೆ ಅಗತ್ಯ. ಯಾವುದೇ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯವನ್ನು ನಿರ್ಧಾಕ್ಷಣ್ಯವಾಗಿ ಖಂಡಿಸಿ ಪ್ರತಿಭಟಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕಾತ್ಯಾಯಿನಿ ಚಂದ್ರಶೇಖರ್, ಲೆಕ್ಕಪತ್ರವನ್ನು ಖಜಾಂಚಿ ಸುಲೋಚನಮ್ಮ ಶ್ರೀನಿವಾಸಶೆಟ್ಟಿ ಮಂಡಿಸಿದರು.  ನಿರ್ದೇಶಕರುಗಳಾದ ರೇಣುಕಾ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿ, ಶಶಿಕಲಾ ನೀಲಕಂಠ ಪ್ರಾರ್ಥಿಸಿ, ಭಾರತಿ ಶಿವರುದ್ರಪ್ಪ ಸ್ವಾಗತಿಸಿ, ಕೃಷ್ಣವೇಣಿ ಗೋಪಾಲ್ ವಂದಿಸಿದರು. ಸಹ ಕಾರ್ಯದರ್ಶಿ ಗೀತಾ ಸುಂದ್ರೇಶ್ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ಶೈಲಜಾ ಚೆಲುವಯ್ಯ, ಹೇಮಾ ಸುಲೋಚನಾ, ದಾಕ್ಷಾಯಣಿ ಶ್ರೀನಿವಾಸ್, ಗೀತಾ ಮೂರ್ತಿ, ರೇಣುಕಾ ಮೈಲಾರಿ, ಯಮುನಾ ಸಿ. ಶೆಟ್ಟಿ, ಯಶೋಧ ಶಿವಪ್ಪ, ವೇದಿಕೆಯಲ್ಲಿದ್ದರು. ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.