ಅಕ್ರಮ ಗಣಿಗಾರಿಕೆ ತಡೆದಿದ್ದರಿಂದ ಅಧಿಕಾರ ಹೋಯ್ತು
ಕ.ಪ್ರ. ವಾರ್ತೆ, ಕಡೂರು, ಜ.14
ರಾಜ್ಯದಲ್ಲಿ ಲೂಟಿಯಾಗುತ್ತಿದ್ದ ನೈಸರ್ಗಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆಗೆ ದೇಶದಲ್ಲೇ ಮೊದಲ ಬಾರಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡ ತಮಗೆ ಅಧಿಕಾರದಿಂದ ಇಳಿಸುವಿಕೆಯ ಪಟ್ಟ ಸಿಕ್ಕಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸಿದ್ದರಾಮೇಶ್ವರ 841ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಕಳೆದ 2011ರಲ್ಲಿ ಬಂದ ಸಂಕಷ್ಟ ಮತ್ತೆಂದೂ ಬಾರದೆ ಇರಬೇಕಾಗಿದೆ ಎಂದರು.
ತಾವು ಅಧಿಕಾರದಲ್ಲಿದ್ದಾಗ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವುದನ್ನು ಸಹಿಸದೆ ಲೂಟಿ ಕುರಿತು ಕೇಂದ್ರದ ಮುಂದೆ ಇಡುವ ಮೂಲಕ ಸಾಗಾಣಿಕೆ ರದ್ದುಪಡಿಸಿದೆ. ಆದ್ದರಿಂದ ತಮಗೆ ಸಂಕಷ್ಟ ಸಿಕ್ಕಿ ಅಧಿಕಾರದಿಂದ ಇಳಿಸುವಂತಹ ಶಿಕ್ಷೆ ನೀಡಲಾಯಿತು ಎಂದು ಆರೋಪಿಸಿದರು.
ನೀರು ಸಿಗಲಿ: ದೇಶಕ್ಕೆ ಅನ್ನ ಕೊಡುವ ರೈತರಿಗೆ ನೀರು ಕೊಟ್ಟರೆ ಆತ ಈ ದೇಶಕ್ಕೆ ಅನ್ನ ನೀಡುತ್ತಾನೆ ಎಂಬ ಪರಿಕಲ್ಪನೆ ಮನಗಾಣಬೇಕಿದೆ. ಕಡೂರು ತಾಲೂಕಿನ ಭಾಗದಲ್ಲಿ ರೈತರ ಜಮೀನುಗಳಿಗೆ ನೀರಿಲ್ಲ. ಬರಗಾಲದಿಂದ ತತ್ತರಿಸುತ್ತಿರುವುದನ್ನು ಕಂಡಿದ್ದರಿಂದ ಈ ಭಾಗದ ರೈತರಿಗೆ ನೀರು ಕೊಡುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿಯಾದಾಗ ನೀರಾವರಿಗೆ ಆದ್ಯತೆ ನೀಡಿ ಹೆಬ್ಬೆ ಯೋಜನೆಗೆ 141 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಯೋಜನೆ ಜಾರಿಯಿಂದ ಈ ಭಾಗದ ಎಲ್ಲ ರೈತರ ಸಮಸ್ಯೆ ನಿವಾರಣೆಯಾಗಬೇಕಿದೆ ಎಂದರು.
ದೇಶ ರಕ್ಷಣೆ: ಐಎಸ್ಐನಂತಹ ಭಯೋತ್ಪಾದಕ ಶಕ್ತಿಗಳು ನಮ್ಮನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿವೆ. ಇದರಿಂದ ಅಭಿವೃದ್ಧಿಯ ಹರಿಕಾರರಾಗಿರುವ ನರೇಂದ್ರ ಮೋದಿ ಅವರ ಮೇಲೆ ಐಎಸ್ಐನಂತಹ ದುಷ್ಟಶಕ್ತಿಗಳು ಕಣ್ಣಿಟ್ಟಿವೆ. ಈ ಕುರಿತು ದೇಶದ ಪ್ರತಿಯೊಬ್ಬ ಪ್ರಜೆಯು ದೇಶ ರಕ್ಷಣೆ ಬಗ್ಗೆ ಯೋಚಿಸಬೇಕು.
ಸನ್ಮಾರ್ಗ: ಸಾನ್ನಿಧ್ಯ ವಹಿಸಿದ್ದ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈಗ ನಡೆದಿರುವ ತರಳಬಾಳು ಮಹೋತ್ಸವ ಹಾಗೂ ಇದೀಗ ನಡೆಯುತ್ತಿರುವ ಸಿದ್ದರಾಮ ಜಯಂತಿಗಳು ಜನರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ದು ಬೆಳಕಾಗಬೇಕು. ಸಿದ್ದರಾಮರ 68 ಸಾವಿರ ವಚನಗಳು ನಾಪತ್ತೆಯಾಗಿವೆ. ಸಿದ್ದರಾಮರು ಮತ್ತು ಸಿರಿಗೆರೆ ಶ್ರೀಗಳ ಮಧ್ಯೆ ಅವಿನಾಭಾವ ಸಂಬಂಧ ಇತ್ತು ಎಂದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕರಗಡ ಯೋಜನೆ ಮಂಜೂರಾಯಿತು. ಬಯಲು ಪ್ರದೇಶವಾಗಿರುವ ದೇವನೂರು ಹೋಬಳಿಯ ಕಾಮಗಾರಿ ಮುಗಿದಿದೆ. ಮುಂದಿನ ತಿಂಗಳಲ್ಲಿ ಬೆಳವಾಡಿಗೆ ಹಾಗೂ ದೇವನೂರು ಕೆರೆಗೆ ನೀರು ಹರಿದು ಬರಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸ್ವಾಗತ ಸಮಿತಿ ಅಧ್ಯಕ್ಷ ಬಿ. ಗುರುಪ್ರಸಾದ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಎಸ್. ಬಸವರಾಜು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತಮ್ಮಡಿಹಳ್ಳಿ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ ಜಯಂತಿಗೆ ಚಾಲನೆ ನೀಡಿದರು.
ನಂತರ ಪಟ್ಟಣದಾದ್ಯಂತ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಸಮಿತಿ ಪರವಾಗಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನೊಳಂಬ ವೀರಶೈವ ಸಮಿತಿ ಅಧ್ಯಕ್ಷ ಕೆ.ಎನ್. ಚಂದ್ರಶೇಖರಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಗುರುಪ್ರಸಾದ್, ಎಪಿಎಂಸಿ ಅಧ್ಯಕ್ಷ ಲಚ್ಚನಾಯ್ಕ, ಗೋಡೆಕೆರೆ ಮೃತ್ಯುಂಜಯ ಸ್ವಾಮೀಜಿ, ಮಾರಗೊಂಡನಹಳ್ಳಿ ಬಸವಲಿಂಗ ಸ್ವಾಮೀಜಿ, ಕೆ. ಬಿದರೆಯ ಪ್ರಭುಲಿಂಗ ಸ್ವಾಮೀಜಿ, ಬೀರೂರಿನ ರುದ್ರಮುನಿ
ಸ್ವಾಮೀಜಿ, ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್, ಬಿ.ಕೆ. ಚಂದ್ರಶೇಖರ್, ಕೆ.ಬಿ.ಬಸವರಾಜಪ್ಪ, ಕಾಮನಕೆರೆ ಶಶಿಧರ್, ಎಸ್.ವಿ. ಉಮಾಪತಿ, ಭುಜೇಂದ್ರ, ಸಂಕ್ಲಾಪುರ ಕುಮಾರ್, ಬಿಸಲೆರೆ ಕೆಂಪರಾಜು, ಬಿ.ರಾಜು, ಅರವಿಂದ ಜತ್ತಿ, ಶಿವಾನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

