ಮುಖ ತೋರಿಸುವ ನೈತಿಕತೆ ಬಿಜೆಪಿಗಿಲ್ಲ
ಚಿಕ್ಕಮಗಳೂರು: ರಾಜ್ಯದ ಜನರಿಗೆ ಮುಖ ತೋರಿಸುವ ನೈತಿಕತೆ ಬಿಜೆಪಿಗಿಲ್ಲ, ಅದ್ದಕ್ಕಾಗಿ ಮೋದಿಯವರ ಪೋಸ್ಟರ್ಗಳನ್ನು ಬೀದಿಬೀದಿಗಳಲ್ಲಿ ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ತರೀಕೆರೆಯಲ್ಲಿ ಬುಧವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಮಾಡಬಾರದೆಲ್ಲಾ ಮಾಡಿ, ಸೋತು ಸುಣ್ಣವಾಗಿ ಮೂಲೆ ಸೇರಿದ್ದವರು, ಬೀದಿಯಲ್ಲಿ ಕಚ್ಚಾಡಿದವರು ಇದೀಗ ಮತ್ತೆ ಒಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಜನ ಮರೆತಿಲ್ಲ: ಜೈಲಿಗೆ ಹೋಗಿ ಬಂದಿರುವುದನ್ನು ಅವರು ಮರೆತು ಬಿಟ್ಟಿದ್ದಾರೆ. ಆದರೆ ಜನ ಮರೆತಿಲ್ಲ. ಜನತೆಗೆ ಅವರ ಮುಖ ತೋರಿಸುವ ನೈತಿಕತೆ ಇಲ್ಲದಿರುವುದರಿಂದ ಮೋದಿಯವರ ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ ಎಂದವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಅಡಕೆ ನಿಷೇಧದ ಪ್ರಸ್ತಾಪ ಇಲ್ಲ. ಅಡಕೆ ನಿಷೇಧ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿಲ್ಲ. ಅಡಕೆ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂದು ಕೇಂದ್ರದ ಆರೋಗ್ಯ ಸಚಿವರನ್ನು ಸ್ವತಃ ಭೇಟಿ ಮಾಡಿ ಆಗ್ರಹಿಸಿದ್ದೇನೆ ಎಂದರು.
ಅಡಕೆ ಬೆಳೆಗಾರರು ಆತಂಕಪಡುವ ಆಗತ್ಯವಿಲ್ಲ. ಇದು ಬಿಜೆಪಿ ಹುಟ್ಟು ಹಾಕಿದ ಗೊಂದಲ. ಈ ವಿಚಾರದಲ್ಲಿ ಬಿಜೆಪಿ ಜನರಿಗೆ ಸುಳ್ಳು ಹೇಳಲು ಹೊರಟಿದೆ. ಒಂದು ವೇಳೆ ಅಡಕೆ ನಿಷೇಧದ ಪ್ರಸ್ತಾಪ ಕೇಂದ್ರದ ಮುಂದಿದ್ದರೆ, ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಅಂತಹ ಪರಿಸ್ಥಿತಿ ಎದುರಾದರೆ ರಾಜ್ಯದಲ್ಲಿ ಅಡಕೆ ನಿಷೇಧ ಮಾಡುವುದಿಲ್ಲ ಎಂದ ಮುಖ್ಯಮಂತ್ರಿಯವರು, ಈ ವಿಚಾರದಲ್ಲಿ ಬೆಳೆಗಾರರು ಸಂಶಯ ಮತ್ತು ಆತಂಕಪಡುವ ಅಗತ್ಯವಿಲ್ಲ ಎಂದರು.
ರು. 10,000 ಕೋಟಿ: ಈ ವರ್ಷದಲ್ಲಿ ರು. 10,000 ಕೋಟಿ ನೀರಾವರಿಗೆ ಖರ್ಚು ಮಾಡಲು ಉದ್ದೇಶಿಸಲಾಗಿದ್ದು, ಪ್ರತಿ ವರ್ಷ 10 ಸಾವಿರದಂತೆ 5 ವರ್ಷದಲ್ಲಿ ರು. 50 ಸಾವಿರ ಕೋಟಿಯನ್ನು ನೀರಾವರಿ ಯೋಜನೆಗಳಿಗೆ ನೀಡಲಾಗುವುದು. ಸದ್ಯದಲ್ಲೇ ಕೃಷಿ ಬೆಲೆ ಆಯೋಗ ರಚನೆ ಮಾಡಲಾಗುವುದು. ಇದಕ್ಕೂ ಮುನ್ನ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ದುರ್ಬಲರು, ಹಿಂದುಳಿದವರು, ರೈತರು ಹಾಗೂ ದಲಿತರ ಪರವಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದ ಮುಖ್ಯಮಂತ್ರಿಯವರು ದೇವರು, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಎಲ್ಲರನ್ನೂ ಒಂದುಗೂಡಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.
ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ವಾರ್ತಾ ಸಚಿವ ರೋಷನ್ ಬೇಗ್, ಸಹಕಾರ ಸಚಿವ ಮಹಾದೇವ ಪ್ರಸಾದ್, ಸಂಸದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ತರೀಕೆರೆ ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರೀ ಶಾಂತೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

