ಕೃಷಿ ಯೋಜನೆ ಮಾಹಿತಿ ತಲುಪಿಸುವಲ್ಲಿ ಲೋಪ
ಕ.ಪ್ರ.ವಾರ್ತೆ ಭದ್ರಾವತಿ ಜ.16
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತ್ಯುತ್ತಮವಾದ ಕೃಷಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ಲೋಪವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಗಳ ಆಶ್ರಯದಲ್ಲಿ ಸರ್ ಎಂ.ವಿಶ್ವೇಶ್ವರಾಯ ವೇದಿಕೆಯಲ್ಲಿ ನಡೆದ ಕೃಷಿ ಉತ್ಸವ- 2014 ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಕರಿಗೆ ಏನು ಬೇಕೆಂಬ ಅರಿವಿಲ್ಲ ಎಂದರಲ್ಲದೆ, ಅವರಿಗೆ ಮಾಹಿತಿ ಕೊರತೆ ಇರುವುದನ್ನು ಮನಗಂಡು ಜಾಗೃತಿ ಮೂಡಿಸಿ ಕೃಷಿ ಕಸುಬನ್ನು ಲಾಭದಾಯಕವನ್ನಾಗಿಸುವ ದಿಶೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ ಎಂದರು.
ಕೃಷಿಕರ ಹಿತದೃಷ್ಟಿ: ಆಧುನಿಕ ಕೃಷಿ ಪದ್ಧತಿಯಿಂದ ಲಾಭದಾಯಕ ಕೃಷಿ ಅಳವಡಿಸಿಕೊಳ್ಳುವ ಜ್ಞಾನ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿದೆ. ಯಂತ್ರೋಪಕರಣಗಳ ಬಳಕೆಯ ಮಾಹಿತಿ ಕೃಷಿಕರಿಗೆ ತಲಪಬೇಕಾಗಿದೆ. ಆ ದಿಶೆಯಲ್ಲಿ ಈ ಕೃಷಿ ಉತ್ಸವ ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಡಾ.ವೀರೇಂದ್ರ ಹೆಗ್ಗಡೆ ನುಡಿದರು.
ಮನುಷ್ಯನಿಗೆ ಭದ್ರ ಭವಿಷ್ಯದ ಚಿಂತೆಯು ಯಾವಾಗಲೂ ಕಾಡುತ್ತದೆ. ನಾವು ಮಾಡುವ ಕರ್ಮವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದು. ಯೋಚನೆ ಮಾಡಿ ಯೋಜನೆಗಳನ್ನು ಹಾಕಿಕೊಳ್ಳಿ. ನಾನು ಎಂಬ ಪರಿಕಲ್ಪನೆ ತ್ಯಜಿಸಿ ನಾವು ಎಂಬ ಭಾವನೆಯನ್ನು ಬೆಳೆಸಿಕೊಳ್ಳಿ. ಸ್ವಸಹಾಯ ಸಂಘಗಳ ಮೂಲಕ ಪ್ರಗತಿ ಹೊಂದಿ ಬದುಕನ್ನು ಹಾಗೂ ಸಮಾಜವನ್ನು ಕಟ್ಟುವ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು.
ವಿಮೆ-ಪಿಂಚಣಿ: ದುಡಿಮೆ ಮಾಡುವ ಶಕ್ತಿ ನಿಮ್ಮಲ್ಲಿ ಮತ್ತು ನಿಮ್ಮ ಕುಟುಂಬದ ಸದಸ್ಯರಲ್ಲಿದೆ. ಆದರೆ, ಉಳಿತಾಯ ಮಾಡುವ ಮನೋಭಾವ ನಿಮ್ಮಲ್ಲಿ ಇಲ್ಲದಿದ್ದರೆ ಗಳಿಸಿದ ಹಣ ಸಾರ್ಥಕವಾಗುವುದಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಪವೃಕ್ಷವಿದ್ದಂತೆ. ಅದನ್ನು ಸದುಪಯೋಗಪಡಿಸಿಕೊಂಡು ನೀವು ಅಭಿವೃದ್ಧಿ ಹೊಂದಿ. ಭದ್ರಾವತಿಯಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಸಂಖ್ಯೆ ಕಡಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸ್ವಸಹಾಯ ಸಂಘಗಳನ್ನು ಹೆಚ್ಚಾಗಿ ಕಟ್ಟಿದರೆ ಬಡತನವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು. ಜಿಲ್ಲೆಯಲ್ಲಿ 2.2 ಲಕ್ಷ ಸ್ವಸಹಾಯ ಸಂಘಗಳ ಸದಸ್ಯರಿದ್ದಾರೆ.
ಭದ್ರಾವತಿ ತಾಲೂಕಿನಲ್ಲಿ 40 ಲಕ್ಷ ಸದಸ್ಯರಿದ್ದಾರೆ. ಪ್ರಗತಿನಿಧಿಯಿಂದ 275 ಕೋಟಿ ಸಾಲ ನೀಡಲಾಗಿದೆ. ಸಾಲ ಮರುಪಾವತಿ ಶೇ.99.70 ರಷ್ಟಾಗಿರುವುದು ಸದಸ್ಯರ ಪ್ರಾಮಾಣಿಕತೆ ಮತ್ತು ಬದ್ಧತೆ ತೋರುತ್ತದೆ. ಯೋಜನೆಯಲ್ಲಿ ವಿಮೆ ಹಾಗೂ ಪಿಂಚಣಿ ಯೋಜನೆಯನ್ನೂ ಅಳವಡಿಸಲಾಗಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಜೆ.ಅಪ್ಪಾಜಿ ಸರ್ಕಾರದ ಯೋಜನೆಗಳು ಕೇವಲ ಫಲಕಗಳಲ್ಲಿರುವುದರಿಂದ ಅವು ಯಶಸ್ವಿಯಾಗುತ್ತಿಲ್ಲ. ಶ್ರೀಕ್ಷೇತ್ರದ ಯೋಜನೆಗಳು ಯೋಜನಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಗಳ ಶ್ರಮದಿಂದ ಜನರನ್ನು ತಲಪುತ್ತಿವೆ.
ಈ ಯೋಜನೆಯಿಂದ ಭದ್ರಾವತಿಯಲ್ಲಿ ಅನೇಕ ಬಡ ಕುಟುಂಬಗಳು ಅಭಿವೃದ್ಧಿ ಕಂಡಿವೆ. ಕುಟುಂಬದ ಹೆಣ್ಣುಮಕ್ಖಳು ಈ ಯೋಜನೆಯಲ್ಲಿ ಭರವಸೆಯನ್ನು ಹೊಂದಿದ್ದಾರೆ. ಅಷ್ಟೇ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಸ್ವಸಹಾಯ ಸಂಘಗಳು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಿವೆ.
ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಅದನ್ನು ಮರುಪಾವತಿ ಮಾಡಿ ಸಾಲ ಪಡೆದವರೂ ಪ್ರಗತಿ ಹೊಂದಬೇಕೆಂದು ಅಪ್ಪಾಜಿ ಕರೆ ನೀಡಿದರು. ಶ್ರೀಕ್ಷೇತ್ರ ತನ್ನ ಯೋಜನೆಗಳಲ್ಲಿ ವಿಮೆ ಹಾಗೂ ಪಿಂಚಣಿಯನ್ನು ಜಾರಿಗೆ ತಂದಿರುವುದನ್ನು ಶಾಸಕ ಅಪ್ಪಾಜಿ ಮೆಚ್ಚಿ ಹೊಗಳಿದರು.
ತ್ರಿವಿಧ ದಾಸೋಹಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಡಾ. ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ, ಕೃಷಿ ಮತ್ತು ಆಧ್ಯಾತ್ಮಿಕಗಳ ತ್ರಿವಿಧ ದಾಸೋಹಿಗಳು ಎಂದು ತಿಳಿಸಿದರು.
ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿರುವಂತೆ ಕೃಷಿ ಬೆಳಕನ್ನು ಹೆಚ್ಚಿಸಲು ಡಾ.ವೀರೇಂದ್ರ ಹೆಗ್ಗಡೆ ಅವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕೃಷಿ ಆಧಾರಿತ ಭಾರತ ದೇಶದಲ್ಲಿ ಕೃಷಿ ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂದು ವಿಷಾದಿಸಿದ ಅವರು ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನಗಳಿದ್ದವು ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಕೃಷಿ ಉತ್ಸವದ ವಸ್ತುಪ್ರದರ್ಶನ ಮತ್ತು ಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಮತ್ತು ತಹಸೀಲ್ದಾರ್ ಸಿದ್ದಮಲ್ಲಪ್ಪ ಸಹ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಹಾಗೂ ಕೃಷಿ ಉತ್ಸವ ಸಮಿತಿ ಕೋಶಾಧ್ಯಕ್ಷ ಜಿ. ಆನಂದಕುಮಾರ್, ಧರ್ಮಸ್ಥಳದ ಯೋಜನೆಗಳ ಕಾರ್ಯಪಾಲಕ ನಿರ್ದೇಶಕ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪಾ ಸುಬ್ರಮಣ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕುಸುಮ ಕುಮಾರಿ ಮತ್ತು ತಂಡದವರು ರೈತಗೀತೆ ಹಾಡಿದರು. ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಕರುಣಾಮೂರ್ತಿ ಸ್ವಾಗತಿಸಿದರು. ಧರ್ಮಪ್ರಸಾದ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

