ಕಾಮಗಾರಿಯಲ್ಲಿ ಗುತ್ತಿಗೆದಾರರ ಕಾರುಬಾರು
ಚಿಕ್ಕಮಗಳೂರು: ಸರ್ಕಾರ ಕೊಟ್ಟ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಆಡಳಿತ ಯಂತ್ರ ನಿಷ್ಕ್ರೀಯವಾದರೆ, ಗುತ್ತಿಗೆದಾರರು ಯಾವ ರೀತಿಯಲ್ಲಿ ಆಟವಾಡುತ್ತಾರೆ ಎಂಬುದನ್ನು ನೋಡಬೇಕಾದರೆ ಚಿಕ್ಕಮಗಳೂರಿನ ಒಳ ಚರಂಡಿ ಕಾಮಗಾರಿ ನಡೆದು ಬಂದ ದಾರಿಯತ್ತ ಒಮ್ಮೆ ಕಣ್ಣು ಹಾಯಿಸಿ.
ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಸ್ವಲ್ಪ ದಿನ ತೊಂದರೆಯಾಗುತ್ತದೆ ಸುಧಾರಿಸಿಕೊಳ್ಳಬೇಕೆಂದು ಆಗಾಗ ನುಗುತ್ತಿದ್ದವರು, ಕಾಮಗಾರಿಯ ವಿಳಂಬ ಧೋರಣೆಯನ್ನು ಖಂಡಿಸಿ ಕೆಸರಿನಲ್ಲಿ ರಸ್ತೆಯಲ್ಲಿ ನಿಂತು ಧಿಕ್ಕಾರ ಹಾಕಿದವರು ಒಳ ಚರಂಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಬೇಕು.
ಯಾವುದೇ ಕಾಮಗಾರಿಯನ್ನು ಯೋಜನಾ ಬದ್ಧವಾಗಿ ಮಾಡದೆ ಹೋದರೆ, ಆ ಕೆಲಸಗಳ ಮೇಲೆ ಅಧಿಕಾರಿಗಳು ನಿಗಾ ಇಡದೇ ಹೋದರೆ, ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿಯನ್ನು ಮುಗಿಸದೆ ಹೋದರೆ ಜನರಿಗೆ ಯಾವ ಮಟ್ಟದಲ್ಲಿ ತೊಂದರೆಯಾಗುತ್ತದೆ ಎಂಬುವುದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಯೇ ಸಾಕ್ಷಿ.
40 ಕೋಟಿಯ ಕಾಮಗಾರಿ: ನಗರದ ಎಲ್ಲಾ 35 ವಾರ್ಡ್‌ಗಳಲ್ಲಿ 40 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿಯನ್ನು ಎರಡು ವರ್ಷದ ಹಿಂದೆಯೇ ಕೈಗೆತ್ತಿಕೊಳ್ಳಲಾಗಿತ್ತು.
ಪ್ರಥಮದಲ್ಲಿ ಮ್ಯಾನ್ ಹೋಲ್ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಕೆಲಸ ಈವರೆಗೆ ಪೂರ್ಣಗೊಂಡಿಲ್ಲ. ಇನ್ನುಳಿದಂತೆ ರಿಸಿವಿಂಗ್ ಛೇಂಬರ್ ಕೆಲಸ ಇದ್ದು, ಈ ಕಾಮಗಾರಿ ಶೇ.20 ರಷ್ಟು ಮಾತ್ರ ಮುಗಿದಿದೆ. ಇನ್ನು ಶೇ.80 ರಷ್ಟು ಕೆಲಸ ಬಾಕಿ ಇದೆ. ಇದರ ನಡುವೆ ನಗರೋತ್ಥಾನ ಕಾಮಗಾರಿ ಪ್ರಾರಂಭಗೊಂಡಿದ್ದು, ನಗರದಲ್ಲಿ ಪ್ರಥಮದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ.
ಡಾಂಬರೀಕರಣ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಂಡರೆ ಮಾತ್ರ ಕಳೆದ ವರ್ಷ ಮಳೆಗಾಲದಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ಆಗಿದ್ದ ಅವ್ಯವಸ್ಥೆ ಪುನಃ ತಲೆದೋರುವುದಿಲ್ಲ.
ಆದರೆ, ರಿಸಿವಿಂಗ್ ಛೇಂಬರ್ ತೆಗೆಯಲು ಈಗ ಡಾಂಬರೀಕರಣ ಮಾಡುತ್ತಿರುವ ರಸ್ತೆಯ ಬದಿಯಲ್ಲಿ ಮತ್ತೆ ಎರಡು ಅಡಿಗಳಷ್ಟು ರಸ್ತೆಯನ್ನು ಅಗೆಯಬೇಕು.
ಆಗ, ರಸ್ತೆ ಹಾಳಾಗಲಿದೆ. ರಿಸಿವಿಂಗ್ ಛೇಂಬರ್‌ಗಳ ನಿರ್ಮಾಣಕ್ಕೆ ಎರಡು ಅಡಿ ಡಾಂಬರ್ ರಸ್ತೆ ಅಗೆದರೆ ಬರೀ ಎರಡು ಅಡಿಗಳಷ್ಟು ಮಾತ್ರ ಹಾಳಾಗುವುದಿಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ ಡಾಂಬರೀಕರಣಗೊಂಡ ರಸ್ತೆಯಲ್ಲಿ ಗುಂಡಿ ತೋಡಿದರೆ ಸುಮಾರು 5 ಅಡಿಗಳಷ್ಟು ರಸ್ತೆ ಕಾಲ ಕ್ರಮೇಣ ಹಾಳಾಗಲಿದೆ. ಇದು ಸಂಬಂಧಿತ ಇಲಾಖೆಗೆ ಗೊತ್ತಿರುವ ವಿಷಯ. ಅಂದರೆ ರಿಸಿವಿಂಗ್ ಛೇಂಬರ್ ನಿರ್ಮಾಣದ ವೇಳೆಯಲ್ಲಿ ಈಗ ನಗರೋತ್ಥಾನದಡಿಯಲ್ಲಿ ನಡೆಯುತ್ತಿರುವ ಡಾಂಬರೀಕರಣಗೊಳ್ಳುತ್ತಿರುವ ರಸ್ತೆಗಳು ಹಾಳಾಗಲಿವೆ.
ಕಾಲಾವಧಿ: ಒಳ ಚರಂಡಿ ನಿರ್ಮಾಣದ ಗುತ್ತಿಗೆಯ ಎರಡು ವರ್ಷಗಳ ಕಾಲಾವಧಿ ಮುಕ್ತಾಯಗೊಂಡಿದೆ. ಆದರೆ, ರಿಸಿವಿಂಗ್ ಛೇಂಬರ್ ನಿರ್ಮಾಣ ಹಾಗೂ ಟ್ರೀಟ್ ಮೆಂಟ್ ಪ್ಲಾಂಟ್ ಕಾಮಗಾರಿ ಈವರೆಗೆ ಆರಂಭಗೊಂಡಿಲ್ಲ, ಚರಂಡಿಯ ನೀರು ಒಂದೆಡೆ ಸಂಗ್ರಹವಾಗಲು ಬಾವಿಗಳನ್ನು ತೋಡುವ ಕೆಲಸಕ್ಕೆ ಈಗ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ.
ಭೂ ಸ್ವಾಧೀನದ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ಬಳಿಕ ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು. ಈ ಕೆಲಸ ಮುಗಿದ ಬಳಿಕವೇ ರಿಸಿವಿಂಗ್ ಛೇಂಬರ್ ನಿರ್ಮಾಣ ಮಾಡಿ ಮನೆಗಳ ನೀರನ್ನು ಇಲ್ಲಿಗೆ ಬರುವಂತೆ ಪೈಪ್‌ಗಳ ಜೋಡಣಾ ಕಾರ್ಯನಡೆಯಲಿದೆ.
ಅಂದರೆ ಈ ಎಲ್ಲಾ ಕಾಮಗಾರಿಗಳು ಮುಗಿಯಲು ಕನಿಷ್ಟ ಇನ್ನೊಂದು ವರ್ಷ ಬೇಕು. ಆದರೆ, ಒಳಚರಂಡಿ ಕಾಮಗಾರಿಯ ಟೆಂಡರ್ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಅದುದರಿಂದ ಒಳ ಚರಂಡಿ ಮಂಡಳಿ ಗುತ್ತಿಗೆದಾರರಿಗೆ ದಂಡ ವಿಧಿಸುವ ಕೆಲಸವನ್ನು ಮಾಡಿದೆ. ಕಾಮಗಾರಿ ಮುಗಿದು, ನಗರಸಭೆಗೆ ಹಸ್ತಾಂತರ ಮಾಡುವವರೆಗೆ ದಂಡವನ್ನು ಹಾಕಲಾಗುವುದು.
ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ಹಾಕಿದ ಮಾತ್ರಕ್ಕೆ ಅಧಿಕಾರಿಗಳ ಜವಾಬ್ದಾರಿ ಮುಗಿಯುವುದಿಲ್ಲ. ಒಳ ಚರಂಡಿ ಕಾಮಗಾರಿ ಆರಂಭದಲ್ಲೇ ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಾಣ ಹಾಗೂ ಕೊಳಚೆ ನೀರು ಸಂಗ್ರಹಕ್ಕೆ ಬಾವಿಗಳು ತೊಡಲು ಭೂ ಸ್ವಾಧೀನ ಮಾಡಿಕೊಂಡಿದ್ದರೆ, ಕಾಮಗಾರಿ ಮುಗಿಸಲು ಇನ್ನೊಂದು ವರ್ಷ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ಹೇಳಿದಂತೆ ತಲೆ ಅಲ್ಲಾಡಿಸಿದ್ದರ ಪರಿಣಾಮವಾಗಿ ಕಾಮಗಾರಿ ಮುಗಿಸಲು ವಿಳಂಬವಾಗಿದೆ.
ಒಳ ಚರಂಡಿ ಕಾಮಗಾರಿ ವಿಳಂಬ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ನಗರೋತ್ಥಾನದಡಿ ನಡೆಯುತ್ತಿರುವ ಡಾಂಬರ್ ರಸ್ತೆಗಳು ಕೂಡ ಹಾಳಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

