ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ

Published On :

ಚಿಕ್ಕಮಗಳೂರು: ಇಂದಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕಿಂತ ಮೊಬೈಲ್ ಸಾಂಕ್ರಾಮಿಕ ರೋಗವಾಗಿರುವುದರ ಜೊತೆಗೆ ಇಂತಹ ಇತರೆ ವಸ್ತುಗಳು ಅವರಿಗೆ ಮಾದಕ ವಸ್ತುವಿನಂತಾಗಿವೆ ಎಂದು ತಹಸೀಲ್ದಾರ್ ಶಿವೇಗೌಡ ವಿಷಾದ ವ್ಯಕ್ತಪಡಿಸಿದರು.
ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ನಗರದ ಲಯನ್ಸ್ ಭವನದಲ್ಲಿ ನಡೆದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧಿಕ ಶಿಕ್ಷಣ ಅಗತ್ಯ: ಇಂದಿನ ಮಕ್ಕಳಿಗೆ ಕೇವಲ ಭೌತಿಕ ವಿದ್ಯೆ ನೀಡಲಾಗುತ್ತಿದೆಯೇ ಹೊರತು ಬೌದ್ಧಿಕ ಶಿಕ್ಷಣ ನೀಡುತ್ತಿಲ್ಲ, ಹೀಗಾಗಿ ಭವಿಷ್ಯದ ಪ್ರಜೆಗಳನ್ನು ಮೌಲ್ಯಾಧಾರಿತವಾಗಿ ಬೆಳೆಸಲು ಪಠ್ಯದ ಜೊತೆಗೆ ಬೌಧ್ಧಿಕ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಹಲವು ಸವಲತ್ತು: ಹಿಂದೆ ಹತ್ತಾರು ಕಿ.ಮೀ. ಕ್ರಮಿಸಿ ಶಾಲೆಗೆ ಹೋಗುವ ಪರಿಸ್ಥಿತಿ ಇತ್ತು. ಅದರೆ, ಇಂದು ಶಾಲೆಗೆ ಹೋಗಲು ಎಲ್ಲಾ ರೀತಿಯ ಸವಲತ್ತುಗಳಿವೆಯಾದರೂ, ಮಕ್ಕಳು ಮಾತ್ರ ಜಾಗತೀಕರಣದ ತಂತ್ರಜ್ಞಾನಕ್ಕೆ ಜೋತು ಬಿದ್ದು, ತಮ್ಮತನ ಕಳೆದುಕೊಳ್ಳುತ್ತಿದ್ದಾರೆಂದರು.
ವಿಶೇಷ ಉಪನ್ಯಾಸ ನೀಡಿದ ಮಾನಸಿಕ ತಜ್ಞರಾದ ಮಮತಾ ಮಹೇಶ್, ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯದ ವಿಷಯಗಳನ್ನು ಬೋಧಿಸಿದರೆ ಸಾಲದು, ಸಮಾಜದ ಆಗುಹೋಗುಗಳನ್ನು ತಿಳಿದು ಆ ಕುರಿತು ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಬಲ, ಶಕ್ತಿ, ಶ್ರಮದ ಜೊತೆಗೆ ತಿರುಗಿ ಬೀಳುವ ಮನೋಸ್ಥಿತಿಯೂ ಇರುವುದರಿಂದ ಪೋಷಕರು ಮತ್ತು ಶಿಕ್ಷಕರು ಅವರಿಗೆ ತಪ್ಪು ಸರಿಗಳ ಕುರಿತು ತಿಳಿ ಹೇಳುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಮಕ್ಕಳು ಬೆಳೆಯಲು ಸಾಧ್ಯವೆಂದರು.
ಶಿಕ್ಷಕರಿಗೆ ಸಾಕಷ್ಟು ಒತ್ತಡಗಳಿರುವುದು ಸಹಜವಾದರೂ ಅದನ್ನು ಸ್ವಲ್ಪಮಟ್ಟಿಗೆ ಬದಿಗೊತ್ತಿ ಶಿಕ್ಷಕರು ಮಕ್ಕಳತ್ತ ಗಮನಹರಿಸಿದರೆ ಬಹಳಷ್ಟು ಸಮಸ್ಯೆಗಳು ಕರಗಿ ಹೋಗುತ್ತದೆ. ಹಾಗಾಗಿ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಶಿಕ್ಷಣ ನೀಡಲು ಸಮಾಜದ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಉಪಸ್ಥಿತರಿದ್ದರು. ಲಯನ್ಸ್ ಅಧ್ಯಕ್ಷೆ ನೇತ್ರಾವತಿ ವೆಂಕಟೇಶ್ ಸ್ವಾಗತಿಸಿ, ಅನುಸೂಯ ಜಗದೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.