ಚಿಕ್ಕಮಗಳೂರು

ಊಟ ಪರಿಶೀಲನೆಗೆ ಬಂದ ಡಿಸಿ ಪಾಠ ಮಾಡಿದರು

Published On :

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಜ.29
- ದೇಶದ ಪ್ರಧಾನಮಂತ್ರಿಯ ಹೆಸರೇನು?
- ಕರ್ನಾಟಕದ ಮುಖ್ಯಮಂತ್ರಿಗಳ ಹೆಸರೇನು?
- ಕರ್ನಾಟಕದ ರಾಜ್ಯಪಾಲರ ಹೆಸರೇನು?
ಹೀಗೆ ಒಂದರ ಮೇಲೊಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳಿಂದ ಉತ್ತರ ಮಾತ್ರ ಇಲ್ಲ!
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಬುಧವಾರ ಬೆಳಿಗ್ಗೆ ಬಿಡುವು ಮಾಡಿಕೊಂಡು ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುವ ಊಟದ ಪದಾರ್ಥಗಳನ್ನು ಪರಿಶೀಲಿಸುವ ಜತೆಗೆ ದಿಢೀರನೆ ನಗರದ ದಂಟರಮಕ್ಕಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮೇಲಿನ ಪ್ರಶ್ನೆಯನ್ನು ಕೇಳಿದರು.
ಭಾಗಶಃ ಅಲ್ಲಿನ ಶಿಕ್ಷಕರು ಈ ರೀತಿಯ ಪರೀಕ್ಷೆ ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ.
ಶಾಲಾ ಕೊಠಡಿಯಲ್ಲಿ ಒಬ್ಬಬ್ಬರಿಗೆ ಒಂದರ ಮೇಲೋಂದರಂತೆ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪ್ರಶ್ನೆ ಕೇಳಿದಾಗ, ಕೆಲವು ವಿದ್ಯಾರ್ಥಿಗಳು ಕಷ್ಟಪಟ್ಟು ಉತ್ತರ ನೀಡಿದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ಅಕ್ಕಪಕ್ಕದಲ್ಲಿ ನೋಡಿ ನಿಂತರು. ಹೆಚ್ಚಿನ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯದ ರಾಜ್ಯಪಾಲರ ಹೆಸರೇ ಗೊತ್ತಿಲ್ಲ ಎಂಬುದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತು.
ಗುಣಮಟ್ಟದ ಶಿಕ್ಷಣ ನೀಡಿ: ಆಗ ಸ್ಥಳದಲ್ಲೇ ಇದ್ದ ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ  ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇದೇನಾ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಾದರೂ ಗುಣಮಟ್ಟದ ಶಿಕ್ಷಣ ನೀಡಿ, ಬರೀ ಪುಸ್ತಕದಲ್ಲಿರುವ ವಿಷಯವನ್ನು ಓದಿಸಿದರೆ ಸಾಲದು, ಸಾಮಾನ್ಯ ಜ್ಞಾನದ ಬಗ್ಗೆ ಶಿಕ್ಷಣ ನೀಡಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಮಧ್ಯಾಹ್ನದ ಬಿಸಿಯೂಟ, ಶಾಲೆಯ ಕೊಠಡಿ, ಆಹಾರ ದಾಸ್ತಾನು ಕೊಠಡಿ, ಶಾಲೆಯ ಸುತ್ತಮುತ್ತಲಿನ ವಾತಾವರಣವನ್ನು ಹಾಗೂ ಹಾಜರಾತಿ ಪುಸ್ತಕಗಳ ಪರಿಶೀಲನೆ ನಡೆಸಿದರು.
ಬಿಸಿಯೂಟ ಯೋಜನೆಯ ಅಡುಗೆ ಮನೆಯ ವ್ಯವಸ್ಥೆಯ ಸಮರ್ಪಕವಾಗಿ ಇಲ್ಲದಿರುವುದನ್ನು ಗಮನಿಸಿ ಆಕ್ಷೇಪವ್ಯಕ್ತಪಡಿಸಿದ ಅವರು, ಸಮನ್ವಯ ಅಧಿಕಾರಿಗಳಿಗೆ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಅಡುಗೆ ಸಿಬ್ಬಂದಿಗಳಿಗೆ, ಕಾರಣ ಕೇಳಿ ನೋಟೀಸ್ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಠಿಣ ಕ್ರಮದ ಎಚ್ಚರಿಕೆ: ಅಡುಗೆ ಮನೆಯನ್ನು ನಿಮ್ಮ ಮನೆಯಂತೆ ಶುದ್ಧವಾಗಿ ಇಟ್ಟುಕೊಳ್ಳಲು ಹಾಗೂ ಆಹಾರ ದಾಸ್ತಾನುಗಳನ್ನು ಶುಚಿಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ್ನು ನೀಡಲು ಸಲಹೆ ನೀಡಿದ ಅವರು, ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಆದರೆ, ಅದರ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ ಮುಂದಿನ ದಿನಗಳಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಇದೇ ಪುನಾರಾವರ್ತತವಾದರೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಬಿಸಿಯೂಟದ ಅಧಿಕಾರಿ ನಾಗೇಶ್ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿಗಳು ಹಾಜರಿದ್ದರು.

ಎಪಿಎಂಸಿ ಗೋದಾಮು ಪರಿಶೀಲನೆ
ನಗರದ ಹನುಮಂತಪ್ಪ ವೃತ್ತದಲ್ಲಿರುವ ಆಹಾರ ಸರಬರಾಜು ಹಾಗೂ ಹಾಗೂ ಎ.ಪಿ.ಎಂ.ಸಿ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಗೋದಾಮಿಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಹಾರ ಸರಬರಾಜು ಗೋದಾಮಿನಲ್ಲಿದ್ದ ಗೋಧಿ, ಅಕ್ಕಿ, ಸಕ್ಕರೆ ಹಾಗೂ ಅಂಗನವಾಡಿ ಗೋದಾಮಿನಲ್ಲಿ ಬೆಲ್ಲ, ಮೆಣಸಿನಕಾಯಿ, ಶೇಂಗಾ ಬೀಜ, ಎಣ್ಣೆ ಹಾಗೂ ಮತ್ತಿತರ ಧಾನ್ಯಗಳ ಶುಧ್ಧತೆ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ, ಆಹಾರ ಸರಬರಾಜು ಗೋದಾಮಿನಲ್ಲಿ ತೂಕದ ಯಂತ್ರದ ಸತ್ಯಾಪನೆಯನ್ನು ಪರಿಶೀಲಿಸಿದ ಅವರು, ಈ ದಿನದ ಆಹಾರ ಧಾನ್ಯಗಳ ದಾಸ್ತಾನಿನ ಇರುವಿಕೆ, ಇಂದು ಬಿಡುಗಡೆಯಾಗಿರುವ ಪಡಿತರುಗಳ ವಿವರದ ದಾಖಲಾತಿಗಳನ್ನು, ನಗದು ಬಿಲ್ಲುಗಳನ್ನು, ಆಹಾರ ನಿರೀಕ್ಷಕರ ಭೇಟಿ ಪುಸ್ತಕ ಒಳಗೊಂಡಂತೆ ಪ್ರತಿದಿನ ಪಡಿತರ ವಿತರಣೆಯ ಕಚೇರಿ ಅಖೈರುಗಳನ್ನು ಪರಿಶೀಲಿಸಿದರು.
ಪಡಿತರ ದಾಸ್ತಾನು ಗೋದಾಮಿನ ಶುಚಿಯಾಗಿ, ವ್ಯವಸ್ಥಿತ ರೀತಿಯಲ್ಲಿ ಇಡಲು ಸೂಚನೆ ನೀಡಿದ ಅವರು, ಆಹಾರ ನಿರೀಕ್ಷಕರು ಹಾಗೂ ಆಹಾರ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.
ಪ್ರತಿ ಮಾಹೆಯ ಪಡಿತರವನ್ನು ನಿಗಧಿತ ವೇಳೆಯಲ್ಲಿಯೇ ಸಾರ್ವಜನಿಕರಿಗೆ ಸಮರ್ಪಕವಾಗಿ ವಿತರಿಸಲು ಹಾಗೂ ಕಾಳ ಸಂತೆಯಲ್ಲಿ ಪಡಿತರ ಮಾರಾಟವಾಗದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.