ಕಿಶೋರಿಯರ ಸಬಲೀಕರಣ ಯೋಜನೆ ಪ್ರಾಯೋಗಿಕ ಜಾರಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.29
ಕಿಶೋರಿಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳ್ಳುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಆರ್. ವೆಂಕಟೇಶ್ ಹೇಳಿದ್ದಾರೆ.
ಮೂಗ್ತಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಎಂ.ಎಂ.ಡಿ. ಹಳ್ಳಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಕಿಶೋರಿ ದಿವಸ್ ಆಚರಣೆ ಮತ್ತು ಸ್ಥಳೀಯ ಪಾರ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
7 ಸಾವಿರ ಕಿಶೋರಿಯರು: ಕೇಂದ್ರ ಸರ್ಕಾರ ಕಿಶೋರಿಯರ ಸಬಲೀಕರಣ ಯೋಜನೆಯನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. 11 ರಿಂದ 14 ಮತ್ತು 14 ರಿಂದ 18 ವಯೋವಾನದ ಯುವತಿಯರನ್ನು 2 ವಿಭಾಗಗಳಲ್ಲಿ ಗುರುತಿಸಲಾಗಿದೆ. ತಾಲೂಕಿನಲ್ಲಿ ಸುಮಾರು 7 ಸಾವಿರ ಕಿಶೋರಿಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಕಬ್ಬಿಣಾಂಶದ ಮಾತ್ರೆಗಳು, ಪೌಷ್ಟಿಕ ಆಹಾರ, ಧಾನ್ಯಕಾಳುಗಳನ್ನು ಕಿಶೋರಿಯರಿಗೆ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ನೀಡಲಾಗುತ್ತಿದೆ. ಸ್ನೇಹ ಕ್ಲಿನಿಕ್ನಲ್ಲಿ ಅಗತ್ಯ ಆರೋಗ್ಯ ತಪಾಸಣೆ ನಡೆಸಲಾಗುವುದು. ಪ್ರತಿ ತಿಂಗಳ 3ನೇ ಶನಿವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಿಶೋರಿ ದಿವಸ್: ಕಿಶೋರಾವಸ್ಥೆಯ ದೈಹಿಕ ಮತ್ತು ಮಾನಸಿಕ ಪರಿವರ್ತನೆಯ ಸಂದರ್ಭದಲ್ಲಿ ಪೌಷ್ಠಿಕಾಂಶದ ಕೊರತೆಯಾಗಬಾರದೆಂಬ ಆಶಯ ಹೊಂದಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಕಿಶೋರಿ ದಿವಸ್ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮೂಗ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರ ಮಹಿಳಾ ಮೀಸಲು ಶೇ.50ಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳನ್ನು ಆರಂಭಿಸಿದ ನಂತರ ಧರ್ಮಸ್ಥಳ ಯೋಜನೆ ಸೇರಿದಂತೆ ಹಲವು ಸಂಘಟನೆಗಳು ಪ್ರಾರಂಭಗೊಂಡು ಮಹಿಳೆಯರಿಗೆ ತರಬೇತಿ, ನೆರವು, ಸಾಲ ಸೌಲಭ್ಯ ಕಲ್ಪಿಸಿವೆ. ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಅವಕಾಶ ಕಲ್ಪಿಸಿದೆ ಎಂದರು.
ಪೌಷ್ಟಿಕ ಆಹಾರ ಸೇವಿಸಿ: ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಅವರು ಯುವತಿಯರು ಮತ್ತು ಮಹಿಳೆಯರು ಹಸಿ ತರಕಾರಿ, ಸೊಪ್ಪು, ನಾರು, ಬೇರು, ಹಣ್ಣು, ಮೊಳಕೆಕಾಳು ಮತ್ತಿತರ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದೆಂದು ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು.
ಗ್ರಾ.ಪಂ. ಸದಸ್ಯ ತಾರಾ, ಗ್ರಾಮ ಮುಖಂಡ ಕಾಂತರಾಜ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ಪಾರ್ವತಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ದಾಕ್ಷಾಯಣಿ, ಕಾರ್ಯದರ್ಶಿ ಮಾಲಾ ಮಾತನಾಡಿದರು. ಮುಖ್ಯ ಶಿಕ್ಷಕ ನಟರಾಜ್ ಸ್ವಾಗತಿಸಿ, ಶಿಕ್ಷಕಿ ಗಿರಿಜಾ ವಂದಿಸಿದರು. ಇದೇ ಸಂದರ್ಭದಲ್ಲಿ ಕಿಶೋರಿಯರು ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

