ಓದುವ ಹವ್ಯಾಸದ ಮೇಲೆ ದೃಶ್ಯ ಮಾಧ್ಯಮಗಳ ಗಣನೀಯ ಪ್ರಭಾವ
ಚಿಕ್ಕಮಗಳೂರು: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜಿಲ್ಲೆಯ ಪದವಿ ಕಾಲೇಜುಗಳ ಇತಿಹಾಸದಲ್ಲೆ ಪ್ರಥಮ ಪ್ರಯೋಗವಾಗಿ ಎಸ್ಟಿಜೆ ಮಹಿಳಾ ಪದವಿ ಕಾಲೇಜಿನ ಗ್ರಂಥಾಲಯವನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಡಾ. ಎಫ್.ಜಿ. ಪಾಟೀಲ್ ಹೇಳಿದ್ದಾರೆ.
ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಕಾಲೇಜು ವತಿಯಿಂದ ನೀಡಿದ ಬೀಳ್ಕೊಡುಗೆಗೆ ಪ್ರತಿಸ್ಪಂದಿಸಿ ಮಾತನಾಡಿದ ಅವರು, ಈಜ್ಹಿಲಿಪ್ ತಂತ್ರಾಂಶದ ಮೂಲಕ ಎಲ್ಲ ಮಾಹಿತಿ ಡಾಟಾ ಎಂಟ್ರಿ- ಬಾರ್ ಕೋಡಿಂಗ್ ಮೂಲಕ ಸಂಗ್ರಹಿಸಲಾಗಿದೆ. ಗ್ರಂಥಾಲಯದ ಎಲ್ಲ ಸದಸ್ಯರ ಭಾವಚಿತ್ರ- ಜನ್ಮ ದಿನಾಂಕ ಸಹಿತ ಪೂರ್ಣ ವಿವರಗಳನ್ನು ವಿದ್ಯಾರ್ಥಿಗಳ ಮೂಲಕವೇ ಸಂಗ್ರಹಿಸಿ 6 ತಿಂಗಳಲ್ಲಿ ಕಡಿಮೆ ವೆಚ್ಚದಲ್ಲಿ ದಾಖಲಿಸಲಾಗಿದೆ. ಪದವಿ ಕಾಲೇಜು ಗ್ರಂಥಾಲಯಗಳಲ್ಲೆ ಮೊದಲನೆಯದಾಗಿರುವುದು ಹೆಮ್ಮೆಯ ಸಂಗತಿ. ಪುಸ್ತಕ ಶಾಶ್ವತವಾಗಿ ಮಾಹಿತಿ ನೀಡುವುದರಿಂದಾಗಿ ಗ್ರಂಥಾಲಯಗಳು ಸಾರ್ವಕಾಲೀಕ ಪ್ರಸ್ತುತತೆಯನ್ನು ಹೊಂದಿದೆ ಎಂದರು.
ಓದುವ ಹವ್ಯಾಸದ ಮೇಲೆ ದೃಶ್ಯ ಮಾಧ್ಯಮಗಳ ಪ್ರಭಾವ ಗಣನೀಯವಾಗಿದೆ ಎಂಬುದು ತಮ್ಮ ಸಂಶೋಧನೆಯಿಂದ ಸಾಬೀತಾಗಿದೆ. ಗ್ರಂಥಗಳು ನಿಜವಾದ ಒಳ್ಳೆಯ ಸ್ನೇಹಿತರು. ಆಸಕ್ತಿಗೆ ಅನುಗುಣವಾಗಿ, ಬಿಡುವಿನ ವೇಳೆಯಲ್ಲಿ ತಿರುವಿ ಹಾಕುವ ಪುಸ್ತಕಗಳು ಖುಷಿಯನ್ನು ಕೊಡುತ್ತದೆ ಎಂದರು.
ಪ್ರಾಂಶುಪಾಲ ಪ್ರೊ. ಕೆ.ಎನ್. ಶಿವಣ್ಣ ಅಧ್ಯಕ್ಷತೆ ವಹಿಸಿ, ಪಾಟೀಲರು 38 ವರ್ಷಗಳ ಸಾರ್ಥಕ ಸೇವೆಯನ್ನು ಸಂಸ್ಥೆಗೆ ಸಲ್ಲಿಸಿದ್ದಾರೆ. ಗ್ರಂಥಾಲಯ ಚಳುವಳಿಯಲ್ಲಿ ಪ್ರಜ್ಞಾಪೂರ್ವಕವಾಗಿ ಆಸಕ್ತಿಯಿಂದ ತೊಡಗಿಸಿಕೊಂಡಿದೆ. ಇದೇ ವಿಚಾರವಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದು ಕಾಲೇಜಿನ ಪ್ರತಿಷ್ಠೆ ಹೆಚ್ಚಿಸಲು ಸಹಕಾರಿಯಾಯಿತು ಎಂದರು.
ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಗ್ರಂಥಾಲಯದ ಸದ್ಬಳಕೆ ಕುರಿತಂತೆ ತಜ್ಞ ಪ್ರಬಂಧ ಮಂಡಿಸಿ, ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ನೀಡುತ್ತಿರುವ ಡಾ.ಪಾಟೀಲ, ಜಿಲ್ಲಾ ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿಯೂ ಕ್ರಿಯಾಶೀಲರಾಗಿದ್ದರು ಎಂದ ಪ್ರೊ.ಶಿವಣ್ಣ, ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಹಿರಿಯ ಉಪನ್ಯಾಸಕರಾದ ಡಾ.ಪ್ರಕಾಶ್, ಸರ್ವಮಂಗಳಮ್ಮ, ಪ್ರೊ. ಎಂ.ಹನುಮಂತಪ್ಪ, ಜಿ.ಕೆ.ಚನ್ನಬಸಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪಾಲಾಕ್ಷರೆಡ್ಡಿ, ನಿವೃತ್ತ ಪ್ರೊಫೆಸರ್ ರಾಮನಗೌಡ ಮಾತನಾಡಿದರು. ಪ್ರೊ. ಎಚ್.ಎಂ. ಅಂಬುಜಾಕ್ಷಿ ಸ್ವಾಗತಿಸಿ, ಲಾವಣ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

