ನೀರಿಲ್ಲ, ಮೇವಿಲ್ಲ, ಸ್ವಚ್ಛತೆಯೂ ಇಲ್ಲ
ಕಡೂರು: ಬರಗಾಲದ ತಾಲೂಕಿನ ಜಾನುವಾರು ಮೇವು ಬೇರೆ ಜಿಲ್ಲೆಗೆ, ಸ್ವಚ್ಚತೆಯಿಲ್ಲದ ಹಾಸ್ಟೆಲ್ಗಳ ಬಗ್ಗೆ ಸಮರ್ಥಿಸಿಕೊಳ್ಳಲು ಹೆಣಗಾಡಿದ ಅಧಿಕಾರಿಗಳು, ಎರಡು ಕಡೆಯಿಂದ ನೈರ್ಮಲ್ಯದ ಹಣ ಡ್ರಾ, ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡುತ್ತಿಲ್ಲ...
ಇದು ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ ಪ್ರಭಾರೆ ಅಧ್ಯಕ್ಷ ಶೃಂಗೇರಿ ಶಿವಣ್ಣ ಅಧ್ಯಕ್ಷತೆ, ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಮರುಡಪ್ಪ ಹಾಗೂ ತಾಪಂ ಅಧ್ಯಕ್ಷ ವೈ.ಕೆ.ಬಸಪ್ಪ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮುಖ ಚರ್ಚೆಗೆ ಬಂದ ವಿಷಯಗಳು.
ಸಭೆಯ ಆರಂಭದಲ್ಲೇ ಸದಸ್ಯ ಆರ್.ಶಿವಕುಮಾರ್, ಜಿ.ಪಿ. ಪ್ರಭುಕುಮಾರ್ ಮಾತನಾಡಿ, ಕೊಳವೆಬಾವಿ ವಿಫಲವಾದ್ದರಿಂದ ಗೆದ್ಲೆಹಳ್ಳಿ ಭೋವಿ ಕಾಲೋನಿ ಹಾಗೂ ಹಿರೇನಲ್ಲೂರು ಸಮೀಪ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಇ.ಒ. ಮೂಕಪ್ಪಗೌಡ ಕ್ರಮ ವಹಿಸುತ್ತಿಲ್ಲ ಎಂದರು.
ಆಗ ಅಧ್ಯಕ್ಷ ಶಿವಣ್ಣ ಟ್ಯಾಂಕರ್ ನೀರಾದರೂ ಕೊಡಿ. ಎಇಇ ಪ್ರಭಾಕರರಾವ್ ನೀಡಿರುವ ಮಾಹಿತಿಯಂತೆ ಸಮಸ್ಯೆ ಇರುವ 44 ಕಡೆಯೂ ನೀರು ನೀಡಬೇಕು ಎಂದು ಸೂಚಿಸಿದರು. ಕೆಲವೆಡೆ ಪಿಡಿಒಗಳು ಜನಪ್ರತಿನಿಧಿಗಳಿಗೆ ಸ್ಪಂದಿಸದಿದ್ದಲ್ಲಿ ಯೋಜನಾಧಿಕಾರಿಗಳಿಗೆ ದೂರು ನೀಡಬೇಕು ಎಂದರು.
ಎಷ್ಟು ಸಲ ರಕ್ಷಾ ಸಮಿತಿ ಸಭೆ ಕರೆದಿದ್ದೀರಿ: ಆಸ್ಪತ್ರೆಗಳಲ್ಲಿ ಎಷ್ಟು ಸಲ ರಕ್ಷಾ ಸಮಿತಿ ಸಭೆ ಕರೆದಿದ್ದೀರಿ ಎಂಬ ಅಧ್ಯಕ್ಷರ ಪ್ರಶ್ನೆಗೆ ತಾಲೂಕು ವೈದ್ಯಾಧಿಕಾರಿ ಡಾ. ಪ್ರಭು ವರ್ಷಕ್ಕೊಮ್ಮೆ ಎಂದಾಗ ಕಲ್ಮರುಡಪ್ಪ, ತಾಪಂ ಸದಸ್ಯೆ ರತ್ನ ರಕ್ಷಾ ಸಮಿತಿ ಎಂಬುದು ತಮಗೇ ಗೊತ್ತಿಲ್ಲ ಎಂದಾಗ ಸಿಡಿಮಿಡಿಗೊಂಡ ಅಧ್ಯಕ್ಷರು ವರ್ಷಕ್ಕೆ ನಾಲ್ಕರು ಭಾರಿ ಸಭೆ ಕರೆಯುವ ನಿಯಮವಿದೆ ಎಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.
ಸದಸ್ಯ ಮಧು ನೈರ್ಮಲ್ಯಕ್ಕಾಗಿ ಆರೋಗ್ಯ ಇಲಾಖೆಯಿಂದ ಗ್ರಾಪಂಗೆ 10 ಸಾವಿರ ನೀಡುತ್ತಿದ್ದರೂ ಗ್ರಾಪಂನಲ್ಲಿ ಯಾವುದೇ ನೈರ್ಮಲ್ಯ ಕೈಗೊಳ್ಳದೆ ಗ್ರಾಪಂ ಮತ್ತು ಆರೋಗ್ಯ ಇಲಾಖೆಯಿಂದಲೂ ಹಣ ಡ್ರಾ ಮಾಡಲಾಗುತ್ತಿದೆ ಎಂದು ಆರೋಪಿಸಿದಾಗ ಈ ಬಗ್ಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ಗಮನಹರಿಸಬೇಕು ಎಂದು ಸೂಚಿಸಿದರು.
ಕಡ್ಡಾಯ ಏಪ್ರೋನ್ ಧರಿಸಿ: ಹಾಸ್ಟೆಲ್ ಅಡುಗೆ ಕೋಣೆ ಕೊಳಕಾಗಿರುವ ಕುರಿತು ತೀವ್ರ ಅಸಮಾಧಾನಗೊಂಡ ಶಿವಣ್ಣ ಮತ್ತು ಕಲ್ಮರುಡಪ್ಪ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಮಲೆನಾಡಿನಲ್ಲಿ ಬೆಳಿಗ್ಗೆ ರಂಗೋಲಿ, ಅರಿಶಿನ ಕುಂಕುಮ ಇಡುವ ಮೂಲಕ ಹಾಸ್ಟೆಲ್ಗಳು ಕಾರ್ಯಾರಂಭ ಮಾಡುತ್ತವೆ. ಆದರೆ ಈ ಭಾಗದಲ್ಲಿ ಹಾಗೆ ನಡೆಯುತ್ತಿಲ್ಲ ಎಂದಾಗ ತಾಲೂಕು ಬಿಸಿಎಂ ಅಧಿಕಾರಿ ಚನ್ನಪ್ಪ ಇಂಗ್ಲಳ್ಳಿ ನಮ್ಮಲ್ಲೂ ಅಡುಗೆ ಮನೆಯಲ್ಲಿ ಬೆಳಿಗ್ಗೆ ಅರಿಶಿನ ಕುಂಕುಮದಿಂದ ಕಾರ್ಯಾರಂಭವಾಗುತ್ತದೆ ಎಂದು ಉತ್ತರಿಸಿದಾಗ ಕಾಟಾಚಾರಕ್ಕೆ ಹೇಳುತ್ತಿದ್ದೀರಿ ನಾನೇ ಹಾಸ್ಟೆಲ್ಗೆ ಬಂದು ನೋಡುತ್ತೇನೆ. ಎಲ್ಲ ಹಾಸ್ಟೆಲುಗಳಲ್ಲಿ ಅಡುಗೆಯವರು ಕಡ್ಡಾಯವಾಗಿ ಏಪ್ರೋನ್ ಧರಿಸಿ ಅಡುಗೆ ಮಾಡಬೇಕು ಎಂದು ಹೇಳಿದರು.
ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು ನಮ್ಮಲ್ಲಿ ದಾಸ್ತಾನಿದ್ದ ಮೇವನ್ನು ಚಿತ್ರದುರ್ಗ ಜಿಲ್ಲೆಗೆ ನೀಡಲಾಗಿದೆ ಎಂದಾಗ ಸದಸ್ಯ ನೀಲಕಂಠಪ್ಪ ಮತ್ತು ಪ್ರಭುಕುಮಾರ್ ಬರಗಾಲದಿಂದ ನಮ್ಮ ಜಾನುವಾರುಗಳಿಗೆ ಮೇವು ಇಲ್ಲದಿರುವಾಗ ಬೇರೆ ಜಿಲ್ಲೆಗೆ ಕಳುಹಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು.
ಈ ಬಾರಿ ಕಡೂರು ತಾಲೂಕಲ್ಲಿ ಮಳೆ ಕಡಿಮೆಯಾಗಿದ್ದು ದೇವನೂರು ಸೇರಿದಂತೆ ಅಗತ್ಯವಿರುವ ಕಡೆ ಮೇವು ಕೇಂದ್ರ ಆರಂಭಿಸಲು ಸಿದ್ದತೆ ಮಾಡಿ ಎಂದು ಕಲ್ಮರುಡಪ್ಪ ಸೂಚಿಸಿದರು.
ಮಕ್ಕಳ ಕೊರತೆ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಆಂಗ್ಲ ಮಾಧ್ಯಮ ತೆರೆದಿದ್ದರೂ ಶಿಕ್ಷಕರ ನೇಮಕ ಆಗುತ್ತಿಲ್ಲ ಎಂದು ಸದಸ್ಯ ಬಸವರಾಜಪ್ಪ ದೂರಿದಾಗ ಅಧ್ಯಕ್ಷರು ಕ್ರಮ ಕೈಗೊಳ್ಳುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯರಾದ ಶಶಿರೇಖಾ ಎಂ.ಆರ್.ಟಿ. ಸುರೇಶ್, ಕವಿತಾ ಬೆಳ್ಳಿ ಪ್ರಕಾಶ್, ತಾಪಂ ಸದಸ್ಯ ಶಶಿಕುಮಾರ್,ನೀಲಕಂಠಪ್ಪ, ಎ.ಇ.ರತ್ನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

