ನಿಮ್ಮದು ದೊಡ್ಡತನ, ನನ್ನದು ದಡ್ಡತನ: ಹೆಗ್ಡೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.4
ಸಿಕ್ಕ ಅಧಿಕಾರವಧಿಯಲ್ಲಿ ಹೆಸರು ಹಾಳು ಮಾಡಿಕೊಳ್ಳದೆ, ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರಿಗೆ ಸ್ಪಂದಿಸಿದ್ದರ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅದು ಮತಗಳಾಗಿ ಪರಿವರ್ತನೆಯಾಗಿಸುವಲ್ಲಿ ವಿಫಲವಾಗಿವೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಚಾರ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರಿಗೆ ಹತ್ತಿರವಾಗಿ: ಈಗಲೂ ನೀವೇ ಸಂಸದರು ಎಂದು ನೀವು ಅಭಿಪ್ರಾಯ ವ್ಯಕ್ತ ಪಡಿಸುತ್ತಿರುವುದು ನಿಮ್ಮ ದೊಡ್ಡತನ, ಅದನ್ನು ನಾನು ಸ್ವಾಗತಿಸಿಕೊಂಡರೆ ದಡ್ಡತನವಾಗುತ್ತದೆ ಎಂದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕರಾಗಿರುವುದೇ ದೊಡ್ಡ ಸಾಧನೆ. ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಹತ್ತಿರವಾಗಬೇಕೆಂದರು.
ಕೇಂದ್ರದ ಯುಪಿಎ ಸರ್ಕಾರದ ಸಾಧನೆಯನ್ನು ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ಇಂದಿನ ಬಿಜೆಪಿ ಸರ್ಕಾರ ಬಹಳ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ, ದೂರದ ಬೆಟ್ಟವನ್ನು ನೋಡಿದ್ದೇವೆ ಅವರ ವಿರುದ್ಧ ಈಗಲೇ ದೂಷಿಸುವುದು ಬೇಡ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಇದು ಭ್ರಷ್ಟಾಚಾರದ ವಿರುದ್ಧ ಮತದಾನ ನಡೆದಿಲ್ಲ, ರಾಷ್ಟ್ರದಲ್ಲಿ ಯಾರಿಗೆ ಮತ ಹಾಕಿದ್ದೇವೆಂದು ಜನ ಯೋಚನೆ ಮಾಡಿದಾಗ ಅರ್ಥವಾಗುತ್ತದೆ ಎಂದ ಅವರು, ದೇಶದಲ್ಲಿ ಅಮೆರಿಕ ಪದ್ಧತಿ ಇಲ್ಲ. ಆದರೆ, ಅಧ್ಯಕ್ಷೀಯ ಪದ್ಧತಿಯಲ್ಲಿ ಮೋದಿ ಹೆಸರಿನಲ್ಲಿ ಚುನಾವಣೆ ನಡೆಯಿತು.
ಯಾರದ್ದೋ ಹೆಸರಿನಲ್ಲಿ ಕ್ಯಾಂಡಿಡೇಟ್ಗಳು ಮತಯಾಚನೆ ಮಾಡದೆ ಸ್ವತಃ ಆಶ್ಚರ್ಯಕರ ರೀತಿಯಲ್ಲಿ ಗೆದ್ದಿದ್ದೇನೆ ಎಂಬ ಅಭಿಪ್ರಾಯ ಬಿಜೆಪಿ ಅಭ್ಯರ್ಥಿಗಳಿಂದಲೇ ವ್ಯಕ್ತವಾಗಿದೆ ಎಂದರು.
ನನ್ನ ಅಧಿಕಾರವಧಿಯಲ್ಲಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. ನಿಮಗೆ ತೃಪ್ತಿ ಇದೆಯೋ ಇಲ್ಲವೋ ತಿಳಿದಿಲ್ಲ, ಮುಂದೆ ಪಕ್ಷವನ್ನು ಸದೃಢಗೊಳಿಸಿ ಒಗ್ಗಟಾಗಿ ಹೋರಾಡೋಣ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ಕಾರ್ಯಕರ್ತರು ಚುನಾವಣೆಯಲ್ಲಿ ಹೋರಾಟದ ರೀತಿ ಕೆಲಸ ಮಾಡಿದ್ದೀರಿ. ಸೋಲು, ಗೆಲುವಿನ ಕಾರಣ, ಚುನಾವಣೆಯ ವಿಶ್ಲೇಷಣೆಗಳನ್ನು ಹಂಚಿಕೊಳ್ಳಲು ಈ ಸಭೆ ನಡೆಸಿಲ್ಲ, ಶ್ರಮವಹಿಸಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳದವರು ನಮ್ಮೆದುರು ನಿಂತು ನಮ್ಮನ್ನು ಸೋಲಿಸಿಲ್ಲ. ಕಾಂಗ್ರೆಸ್ನವರೇ ನಮ್ಮನ್ನು ಸೋಲಿಸಿದ್ದಾರೆ. ಶೈಕ್ಷಣಿಕವಾಗಿ ಪರಾಮರ್ಶಿಸಿ ಶಕ್ತಿ ಕೊಡದ ಕಾರಣ ಕಾಂಗ್ರೆಸ್ ಸೋತಿದ್ದು, ಇದು ಹೆಗ್ಡೆಯವರ ಸೋಲಲ್ಲ ಪ್ರಾಮಾಣಿಕತೆಯ ಸೋಲು ಎಂದರು.
ಎ.ಎನ್. ಮಹೇಶ್, ಕೆ. ಮಹಮದ್, ಮಂಜುನಾಥ್, ಶ್ರೀಧರ್ ಉರಾಳ್, ವನಮಾಲ, ಶಾಂತೇಗೌಡ ಉಪಸ್ಥಿತರಿದ್ದರು.
ಸಮಸ್ಯೆಗೆ ಕಾರ್ಯಕರ್ತರು ಸ್ಪಂದಿಸಲಿ
ಮೂಡಿಗೆರೆ: ರಾಜಕೀಯವಾಗಿ ಭದ್ರವಾಗಿ ಬೇರೂರಿರುವುದಲ್ಲದೆ ಬಲಾಢ್ಯ ಶಕ್ತಿಯಾಗಿರುವ ಕಾಂಗ್ರೆಸ್ ಪಕ್ಷವನ್ನು ಯಾವ ಶಕ್ತಿಯಿಂದಲೂ ಆಂತರಿಕ ಮತ್ತು ನೈತಿಕ ನೆಲೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲವು ಸಾಮಾನ್ಯವಾದ ಸಂಗತಿ. ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ದರಿಂದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ನೈತಿಕವಾಗಿ ಕುಗ್ಗಬಾರದು.
ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟ- ನಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಯುಪಿಎ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರ ಮಟ್ಟದಲ್ಲಿ ತೋರ್ಪಡಿಸಿ ಜನಜಾಗೃತಿ ಮೂಡಿಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಳೆಯದನ್ನು ಮರೆತು ಹೊಸ ಯೋಜನೆಯೊಂದಿಗೆ ಕ್ರಿಯಾಶೀಲರಾಗಿ ಮುಂದಿನ ಹೆಜ್ಜೆ ರೂಪಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಧೃತಿಗೆಡುವ ಅಗತ್ಯವಿಲ್ಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ನಡೆಯಬೇಕಾದ ಚಟುವಟಿಕೆಗಳ ಬಗ್ಗೆ ಉಸ್ತುವಾರಿ ಮಂತ್ರಿಗಳ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗಿದೆ.
ಬೋರ್ಡ್ ನಾಮಿನೇಷನ್ಗೆ ಕೆಲವೇ ದಿನಗಳಲ್ಲಿ ಪಟ್ಟಿ ಸಿದ್ಧಪಡಿಸಲಾಗುವುದು. ಪಕ್ಷದ ಸಂಘಟನೆಗೆ ಪ್ರಮುಖ ಆದ್ಯತೆ ನೀಡಲಾಗುವುದು. ನಾವು ಹಲವು ಬಾರಿ ಗೆಲವು ನೋಡಿದ್ದೇವೆ. ಇಡೀ ದೇಶದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಕೊಂಚ ಹಿನ್ನಡೆಯಾಗಿದೆ. ಅಷ್ಟಕ್ಕೆ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಬೆಟ್ಟಗೆರೆ ಮನೋಜ್ ತಾಯಿಯವರನ್ನು ಸ್ಮರಿಸಿ ಮೌನಾಚರಣೆ ನಡೆಸಲಾಯಿತು.
ಪಕ್ಷದ ಮುಖಂಡ ಎಂ.ಎಂ. ಲಕ್ಷ್ಮಣಗೌಡ, ಜಿಲ್ಲಾ ಉಪಾಧ್ಯಕ್ಷ ರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ಹಾಲಪ್ಪ, ಪಪಂ ಸದಸ್ಯ ಟಿ.ಎ. ಮದೀಶ್, ಮುಖಂಡರಾದ ಮನೋಜ್ ಬೆಟ್ಟಗೆರೆ, ಎ.ಸಿ. ಅಯ್ಯೂಬ್, ಬಿಳಗುಳ ಅಹಮದ್ ಬಾವ, ಜಿಪಂ ಮಾಜಿ ಸದಸ್ಯ ಎಂ.ಸಿ. ಹೂವಪ್ಪ, ಬಣಕಲ್ ಸುಂದ್ರೇಶ್, ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
---
209 ಕಾಮಗಾರಿಗಳಲ್ಲಿ 7 ಕೋಟಿ ಅಕ್ರಮ: ನೀಲಕಂಠಪ್ಪ ಆರೋಪ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.4
ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರು ಯೋಜನೆಯ 209 ಕಾಮಗಾರಿಗಳಲ್ಲಿ ಸುಮಾರು 7 ಕೋಟಿ ದುರುಪಯೋಗವಾಗಿದೆ. ಜನಪ್ರತಿನಿಧಿಗಳನ್ನು ಒಳಗೊಂಡ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೆ ಕಾರ್ಯನಿರ್ವಹಣೆ ಮಾಡಿದ್ದಾರೆ. ತರೀಕೆರೆ ತಾಲೂಕಿನ ದೋರನಾಳು ಮತ್ತು ಬೇಲೇನಹಳ್ಳಿ ಗ್ರಾಮದ ಹರಿಯನಕಟ್ಟೆಕೆರೆ, ಬಾಲಗೊಂಪನಕೆರೆ, ಬಳಸುವಕೆರೆ, ದ್ಯಾಮನಕಟ್ಟೆ ಕೆರೆಗಳ ಕಾಮಗಾರಿಗಳಿಗೆ 90 ಲಕ್ಷ ದುರುಪಯೋಗವಾಗಿದೆ. ಗುತ್ತಿಗೆದಾರರಿಗೆ 15.25 ಲಕ್ಷ ಹೆಚ್ಚುವರಿ ಹಣ ಪಾವತಿಸಲಾಗಿದೆ. ಶಿಸ್ತಿನ ಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ಆದೇಶಿಸಿದ್ದು, ಆ ಆದೇಶ ಕಾರ್ಯರೂಪಕ್ಕೆ ಬರಬೇಕೆಂದು ಒತ್ತಾಯಿಸಿದರು.
ಲೆಕ್ಕಶೀರ್ಷಿಕೆ 30್ಢ54 ಅಡಿಯಲ್ಲಿ 21 ಕಾಮಗಾರಿಗಳಲ್ಲಿ 42 ಲಕ್ಷ ವೆಚ್ಚದ ಕಾಮಗಾರಿಗಳನ್ನು ತನಿಖೆ ನಡೆಸಬೇಕು. ಮಲೆನಾಡು ಅಭಿವೃದ್ಧಿಯಲ್ಲೂ 25 ಲಕ್ಷ ದುರುಪಯೋಗವಾಗಿದ್ದು ತನಿಖೆ ನಡೆಸಬೇಕು. ಜಂಬದಹಳ್ಳದಿಂದ ಸಿದ್ದರಹಳ್ಳಿವರೆಗೆ ನಿರ್ಮಿಸಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಹೆಚ್ಚುವರಿ ಹಣ ಬಿಡುಗಡೆ ಆಗಿರುವ ಆಪಾದನೆಯೂ ಇದೆ. ಹಣ ವಸೂಲಿ ಮಾಡುವುದರೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

