ಚಿಕ್ಕಮಗಳೂರು

ಜನಪರ ಕೆಲಸ ಮಾಡದಿದ್ದಲ್ಲಿ ಕಠಿಣ ಕ್ರಮ: ಶಾಸಕ ದತ್ತ

Published On :

ಕಡೂರು: ಗೈರು ಹಾಜರಾದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಇಂಜಿನಿಯರ್‌ಗಳ ಅಮಾನತಿಗೆ ಸೂಚನೆ,  ಮೆಸ್ಕಾಂ ಅಧಿಕಾರಿಗೆ ತರಾಟೆ, ಕ್ಷಮಾಪಣೆ ಕೇಳಿದ ಅಧಿಕಾರಿ, ಜನಪರ ಕೆಲಸ ಮಾಡದಿದ್ದಲ್ಲಿ ನಿರ್ಧ್ಯಾಕ್ಷಿಣ್ಯ ಕ್ರಮ ಇತ್ಯಾದಿ...
 ಇದು ಕಡೂರು ತಾಪಂ ಸಭಾಂಗಣದಲ್ಲಿ ಶಾಸಕ ವೈ.ಎಸ್.ವಿ.ದತ್ತ ಅಧ್ಯಕ್ಷತೆಯಲ್ಲಿ ನಡೆದ ವಸತಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಡೆದ ಸಭೆಯಲ್ಲಿ ಕಂಡು ಬಂದ ಚಿತ್ರಣ.
 ಆರಂಭದಲ್ಲಿ ಬಸವ ಹಾಗೂ ಇಂದಿರಾ ಆವಾಸ್ ವಸತಿ ಯೋಜನೆಯಲ್ಲಿ ಗ್ರಾಪಂಗಳಲ್ಲಿ ಆಗಿರುವ ಗುರಿ ಮತ್ತು ಸಾಧನೆ ಬಗ್ಗೆ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ವರ್ಷವಾದರೂ ಸರ್ಕಾರ ಆಶ್ರಯ ಸಮಿತಿ ರಚಿಸದೆ ಇರುವುದರಿಂದ ನಾನೇ ಸಭೆ ಕರೆದಿದ್ದೇನೆ. ನಿಜವಾದ ಫಲಾನುಭವಿಗಳಿಗೆ ಸವಲತ್ತು ತಲುಪುವಂತೆ  ಅಭಿವೃದ್ಧಿ ಅಧಿಕಾರಿಗಳು ಕಾಲಮಿತಿ ಹಾಕಿ ಮನೆ ಕಟ್ಟಿಸಿ ಗುರಿ ಸಾಧಿಸಬೇಕು ಎಂದು ಎಚ್ಚರಿಸಿದರು.
  ಸಭೆಗೆ ಗೈರು ಹಾಜರಾಗಿರುವ ಹುಲ್ಲೇಹಳ್ಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರಾಧ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಇ.ಒ.ಮೂಕಪ್ಪಗೌಡರಿಗೆ ಸೂಚಿಸಿದರು.
  ತಾಪಂ ಸದಸ್ಯ ಆರ್.ಶಿವಕುಮಾರ್, ತಂಗಲಿ ಗ್ರಾಪಂ ಪಿಡಿಒ ಗೋವಿಂದನಾಯ್ಕಸ್ವಾಮಿ ಪಾನಮತ್ತರಾಗಿ ಕಚೇರಿಗೆ ಬರುವ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ. ಈ ಬಗ್ಗೆ ಇ.ಒ.ಮೂಕಪ್ಪಗೌಡರಿಗೆ ತಿಳಿಸಿದರೆ ಅವರೂ ಕೂಡ ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ ಎಂದು ದೂರಿದಾಗ, ಈಗಾಗಲೇ ಆತನ ಎತ್ತಂಗಡಿಗೆ ಪತ್ರ ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು.
  ಕಡೂರು ವಿಧಾನಸಭಾ ಕ್ಷೇತ್ರವನ್ನು ವಸತಿ ರಹಿತ ಮುಕ್ತ ಕ್ಷೇತ್ರ ಮಾಡುವ ಆಸೆ ಹೊಂದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಿಮಿಸಬೇಕೆಂದು ಹೇಳಿದರು.
 ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆ ಆರಂಭದಲ್ಲಿ ಸದಸ್ಯ ಪ್ರಭುಕುಮಾರ್, ಶಿವಕುಮಾರ್, ಶಶಿ ಮಾತನಾಡಿ, ತಾಪಂ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವಾಗ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದಾಗ ಇನ್ನು ಮುಂದೆ ಗ್ರಾಪಂ ಪ್ರತೀ ಮಾಹಿತಿಯನ್ನು ಆಯಾ ತಾಪಂ ಸದಸ್ಯರ ಗಮನಕ್ಕೆ ನೀಡಬೇಕು ಎಂದು ದತ್ತ ಸೂಚಿಸಿದರು.
ಜಿಪಂ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ತಾಪಂ ಅಧ್ಯಕ್ಷ ಬಸವರಾಜ್, ಜಿಪಂ ಸದಸ್ಯೆ ಚಿಕ್ಕಮ್ಮ ಮಲ್ಲಪ್ಪ, ಸದಸ್ಯರಾದ ಶಶಿ, ಯಶೋದಮ್ಮ, ವೈ.ಕೆ.ಬಸಪ್ಪ, ತಾಪಂ ಯೋಜನಾಧಿಕಾರಿ ಮಹೇಶ್ವರಪ್ಪ, ಅರುಣ್ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.