ಚಿಕ್ಕಮಗಳೂರು

ಕೊಳಾಯಿಗೆ ಮೀಟರ್

Published On :

ಕೊಪ್ಪ: ಪಟ್ಟಣದ ನೀರಿನ ಕೊಳಾಯಿಗೆ ಮೀಟರ್ ಅಳವಡಿಸುವ ಬಗ್ಗೆ ಪಪಂ ಸಾಮಾನ್ಯ ಸಭೆಯಲ್ಲಿ ದೀರ್ಘ ಚರ್ಚೆ ನಡೆದು ಮೀಟರ್ ಅಳವಡಿಕೆ ಸಾಧಕ ಬಾಧಕಗಳ ಅಧ್ಯಯನ ನಂತರ ಅಳವಡಿಸಲು ಸಭೆ ತೀರ್ಮಾನಿಸಿತು.
ಪಪಂ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಗತ್ಯ ನೀರನ್ನು ಪೋಲು ಮಾಡುತ್ತಿದ್ದು ನೀರಿನ ಮಿತ ಬಳಕೆಗೆ ಸಹಕಾರಿಯಾಗುವಂತೆ ಮೀಟರ್ ಅಳಡಿವಡಿಸುವ ಕುರಿತು ಪ್ರಸ್ತಾಪಿಸಲಾಯಿತು.
ಪಟ್ಟಣದಲ್ಲಿ 1242 ಗೃಹ ಹಾಗೂ 110 ವಾಣಿಜ್ಯ ನೀರಿನ ಕೊಳಾಯಿ ಸಂಪರ್ಕಗಳಿದ್ದು ಮೀಟರ್ ಅಳವಡಿಸಿದಲ್ಲಿ ಎಲ್ಲಾ ಭಾಗಕ್ಕೂ ಸಮರ್ಪಕ ನೀರಿನ ವಿತರಣೆ ಸಾಧ್ಯ ಎಂದು ತಿಳಿಸಿದರು. ಮೀಟರ್ ಅಳವಡಿಸಿದ ಗ್ರಾಹಕರಿಗೆ ಪ್ರಸಕ್ತ ಮಾಸಿಕ ರು. 56 ಶುಲ್ಕ ವಿಧಿಸಲಾಗುವುದು. ಶುಲ್ಕ ವಿನಾಯಿತಿ ದೊರೆಯುವುದರಿಂದ ಏಕಕಾಲದಲ್ಲಿ ಎಲ್ಲ ಸಂಪರ್ಕಗಳಿಗೆ ಮೀಟರ್ ಅಳವಡಿಸಲು ಅನುಮತಿ ನೀಡಬೇಕೆಂದರು.
ಪಪಂ ಸದಸ್ಯ ಸುಬ್ರಮಣ್ಯ ಶೆಟ್ಟಿ ಮಾತನಾಡಿ ಈ ಹಿಂದೆ ಮೀಟರ್ ಅಳವಡಿಸುವ ವಿಚಾರ ವಿಫಲವಾಗಿತ್ತು. ದಿನಕ್ಕೆ ಅರ್ಧ ಗಂಟೆ ಕೂಡಾ ಸಮರ್ಪಕ ನೀರು ಸರಬರಾಜು ಮಾಡದಿರುವಾಗ ಮೀಟರ್ ಅಳವಡಿಕೆ ಅಗತ್ಯವಿಲ್ಲ. ದಿನಕ್ಕೆ ಎರಡು ಗಂಟೆ ನೀರು ಸರಬರಾಜು ಮಾಡುವ ಸಾಧ್ಯತೆ ಇದ್ದರೆ ಮೀಟರ್ ಅಳವಡಿಸಿ ಎಂದರು.
ಪಪಂ ಸದಸ್ಯೆ ವಾಣಿಸತೀಶ್ ಮಾತನಾಡಿ ಮೀಟರ್ ಬಳಕೆಯಿಂದ ನೀರು ಪೋಲು ತಡೆಯ ಬಹುದು. ಗ್ರಾಹಕರಿಗೆ ಶುಲ್ಕ ಕಡಿಮೆಯಾಗುವುದಾದರೆ ಅಳವಡಿಸಬಹುದು. ಪ್ರಸಕ್ತ ಮೀಟರ್ ಅಳವಡಿಸಿರುವ ಭಾಗದ ಅಧ್ಯಯನದ ನಂತರ ಮೀಟರ್ ಅಳವಡಿಕೆ ಸೂಕ್ತ ಎಂದರು.
ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸಮೀಕ್ಷೆ ನಡೆಸಿ ನಿರ್ಧಿಷ್ಟ ಜಾಗದಲ್ಲಿ ವ್ಯಾಪಾರ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲು ಸರ್ಕಾರದ ನಿರ್ದೇಶನ ಬಂದಿದೆ ಎಂದು ಮುಖ್ಯಾಧಿಕಾರಿ ಶಂಕರಪ್ಪ ತಿಳಿಸಿದರು.
ನಾಗಲಾಪುರ ನೀರೆತ್ತುವ ಪಂಪ್‌ಹೌಸ್ ಸೇರಿದಂತೆ ಕುಡಿಯುವ ನೀರಿನ ಯೋಜನೆಯ ಎಲ್ಲಾ ಪಂಪ್‌ಹೌಸ್‌ಗಳ ನವೀಕರಿಸುವ ಮೂಲಕ ಪದೇ ಪದೇ ಪಂಪ್ ಕೆಡುವುದನ್ನು
ತಪ್ಪಿಸಬಹುದೆಂದು ತಜ್ಞರ ತಂಡ ಮಾಹಿತಿ ನೀಡಿದೆ ಈ ಸಂಬಂದ ಕ್ರಮವಹಿಸ ಬೇಕೆಂದರು.
ತಜ್ಞರ ಸಲಹೆ:  ಪಪಂ ಸದಸ್ಯರ ತಂಡ ಪಂಪ್ ಹೌಸ್‌ಗಳನ್ನು ಪರಿಶೀಲಿಸಿದ ಬಳಿಕ ತಜ್ಞರ ಸಲಹೆ ಪಡೆಯಲು ಸಭೆ ಸೂಚಿಸಿತು. ಹಿಂದಿನ ಸಭೆಯ ನಿರ್ಣಯ, ನಡಾವಳಿಗಳನ್ನು ತಪ್ಪಾಗಿ ಬರೆದಿರುವ ಬಗ್ಗೆ ಸದಸ್ಯ ಶ್ರೀನಿವಾಸ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಫಲಾನುಭವಿ ಆಯ್ಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿದ ಸದಸ್ಯ ಶ್ರೀನಿವಾಸ ಶೆಟ್ಟಿ ಟೆಂಡರ್ ರದ್ಧತಿಗೆ ಆಗ್ರಹಿಸಿದಾಗ ಅವರನ್ನು ಬೆಂಬಲಿಸಿದ ಸದಸ್ಯೆ ವಾಣಿ ಸತೀಶ್ ಏರು ಧ್ವನಿಯಲ್ಲಿ ಮಾತನಾಡಿದಾಗ ಅಧ್ಯಕ್ಷೆ ಮಾಲತಿ ಮಾತನಾಡದಂತೆ ಸೂಚಿಸಿದರು.
ಅಧ್ಯಕ್ಷರ ಸೂಚನೆಯಿಂದ ಕೋಪಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು. ಅಧ್ಯಕ್ಷರು ತಮ್ಮ ಮಾತಿಗೆ ಕ್ಷಮೆಯಾಚಿಸಿ ಸಭೆಗೆ ಬರುವಂತೆ ಆಹ್ವಾನಿಸಿದರು. ಬಿಜೆಪಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ ಅಂತಿಮವಾಗಿ ಸಭೆಯನ್ನು ಮುಂದೂಡಲಾಯಿತು. ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷೆ ಮಾಲತಿ ರು. 30 ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆ ಬಗ್ಗೆ ಸಭೆಯಲ್ಲಿ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಪದೇ ಪದೇ ವ್ಯಕ್ತಿಗತವಾಗಿ ಮಾತನಾಡಿದ್ದರಿಂದ ಕಟುಶಬ್ದ ಬಳಸಿದ್ದು ನಿಜ ಆ ಕುರಿತು ವಿಷಾದ ವ್ಯಕ್ತಪಡಿಸಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.