ಚಿಕ್ಕಮಗಳೂರು

65 ಸಾವಿರ ಮೆಟ್ರಿಕ್ ಟನ್ ರಬ್ಬರ್‌ಗೆ ಬೇಡಿಕೆ

Published On :

ನರಸಿಂಹರಾಜಪುರ: ಕರ್ನಾಟಕದಲ್ಲಿ ವರ್ಷಕ್ಕೆ 38 ಸಾವಿರ ಮೆಟ್ರಿಕ್ ಟನ್ ರಬ್ಬರ್ ಉತ್ಪಾದನೆ ಯಾಗುತ್ತಿದ್ದು ಪ್ರಸಕ್ತ 65 ಸಾವಿರ ಮೆಟ್ರಿಕ್ ಟನ್ ರಬ್ಬರ್‌ಗೆ ಬೇಡಿಕೆ ಇದೆ. 27 ಸಾವಿರ ಮೆಟ್ರಿಕ್ ಟನ್ ರಬ್ಬರ್ ಕೊರತೆ ಇದೆ ಎಂದು ಕುಂದಾಪುರ ರಬ್ಬರ್ ಮಂಡಳಿ ಉಪ ಆಯುಕ್ತ ಡಿ.ನಾರಾಯಣಸ್ವಾಮಿ ತಿಳಿಸಿದರು.
 ಅವರು ಮಂಗಳವಾರ ಸೀತೂರು ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ರಬ್ಬರ್ ಮಂಡಳಿ, ಸೀತೂರು ವಿಎಸ್‌ಎಸ್‌ಎನ್, ಕಮಾಲಾಪುರ ಸರ್ವೋದಯ ರೈತ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ರಬ್ಬರ್ ಬೆಳೆ ವಿಚಾರ ಸಂಕಿರಣದಲ್ಲಿ ಭವಿಷ್ಯದಲ್ಲಿ ರಬ್ಬರ್ ಬೆಳೆ ಹಾಗೂ ರಬ್ಬರ್ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
ರಾಜ್ಯದ 6 ಜಿಲ್ಲೆಗಳಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಉಳಿದ 3 ಜಿಲ್ಲೆಗಳು ಕಡಿಮೆ ಪ್ರಮಾಣದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ರಬ್ಬರ್ ದೇಶದ ಸಾಂಪ್ರದಾಯಿಕ ಬೆಳೆ ಅಲ್ಲ. ಆದ್ದರಿಂದ ರಬ್ಬರ್ ಬೆಳೆಗಾರರು ರಬ್ಬರ್ ಕೃಷಿ ಮಾಡಬೇಕಾದರೆ ಸರಿಯಾದ ಮಾಹಿತಿ ಪಡೆದಿರಬೇಕು. ದೇಶದಲ್ಲಿ ರಬ್ಬರ್‌ನಿಂದ 65 ಸಾವಿರ ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ಮನುಷ್ಯ ಚಪ್ಪಲಿ, ಟಯರ್ ಸೇರಿದಂತೆ 1 ಕೆ.ಜಿ. 300 ಗ್ರಾಂ ರಬ್ಬರ್ ಉಪಯೋಗಿಸುತ್ತಿದ್ದಾನೆ ಎಂದು ತಿಳಿಸಿದರು.
ಭಾರತದಲ್ಲಿ ಹೆಚ್ಚು ಇಳುವರಿ:  ಪ್ರಪಂಚದಲ್ಲಿ ಭಾರತದಲ್ಲೇ ರಬ್ಬರ್ ಅತಿ ಹೆಚ್ಚು ಇಳುವರಿ ಬರುತ್ತಿದ್ದು ಒಂದು ಹೆಕ್ಟೇರ್  ಪ್ರದೇಶದಲ್ಲಿ 1876 ಕೆ.ಜಿ. ಉತ್ಪಾದನೆ ಬರಲಿದೆ.
ಆದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ ಒಂದು ಹೆಕ್ಟೇರ್ ಪ್ರದೇಶದಲ್ಲಿ ಕೇವಲ 1400 ಕೆ.ಜಿ.ಇಳುವರಿ ಬರುತ್ತಿದೆ ಎಂದರು. 12 ನೇ ಹಣಕಾಸು ಯೋಜನೆಯಲ್ಲಿ ಒಂದು ಹೆಕ್ಟೇರ್ ತೋಟಕ್ಕೆ ರು. 75 ಸಾವಿರ ಸಹಾಯಧನ ನೀಡವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು.ಆದರೆ, ಒಂದು ಹೆಕ್ಟೇರ್ ಪ್ರದೇಶಕ್ಕೆ ರು. 35 ಸಾವಿರ ಸಹಾಯಧನ ಮಾತ್ರ ಮಂಜೂರಾಗಿದೆ ಎಂದು ವಿವರಿಸಿದರು.
 ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ದಿಲೀಪ್ ರಬ್ಬರ್ ಮಂಡಳಿಯಿಂದ ಸಿಗುವ ಸಹಾಯಧನದ ಬಗ್ಗೆ ವಿವರಿಸಿ, ಈ ವರ್ಷದಿಂದ 1 ಹೆಕ್ಟೇರ್ ತೋಟಕ್ಕೆ 3 ಕಂತಿನಲ್ಲಿ ರು. 35 ಸಾವಿರ ಸಹಾಯ ಧನ ಬರಲಿದೆ. ಸಹಾಯಧನಕ್ಕೆ ಅರ್ಜಿ  ಡಿ. 31 ರ ಒಳಗೆ ಸಲ್ಲಿಸಬೇಕು ಎಂದು ತಿಳಿಸಿದರು.
 ಅಧ್ಯಕ್ಷತೆ ವಹಿಸಿದ್ದ ಸೀತೂರು ವಿಎಸ್‌ಎಸ್‌ಎನ್ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ಮಾತನಾಡಿ, ರಬ್ಬರ್
ಬೆಳೆಗಾರರು ಸಂಘಟನೆಯಿಂದ ಹೋರಾಟ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದರೆ ರಬ್ಬರ್ ಬೆಳೆಗಾರರ ಸಮಸ್ಯೆ ಬಗೆ ಹರಿಯಬಹುದಾಗಿದೆ ಎಂದರು.
 ರಬ್ಬರ್ ಬೆಳೆಗಾರ ಎನ್.ಪಿ.ರವಿ ಸಮಾರಂಭ ಉದ್ಘಾಟಿಸಿದರು. ಕುಂದಾಪುರ ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಆನ್ಸಿ ಉಪಸ್ಥಿತರಿದ್ದರು. ಕಮಾಲಾಪುರ ಸರ್ವೋದಯ ರೈತ ಕೂಟದ ಅಧ್ಯಕ್ಷ ಎ.ಎಸ್.ವೆಂಕಟರಮಣ, ಸೀತೂರು ವಿಎಸ್‌ಎಸ್‌ಎನ್ ವ್ಯವಸ್ಥಾಪಕ ಅನಿಲ್‌ಕುಮಾರ್  ಉಪಸ್ಥಿತರಿದ್ದರು.
ಟ್ಯಾಪಿಂಗ್ ಅತಿ ಮುಖ್ಯ
ರಬ್ಬರ್ ಬೆಳೆಗೆ ಟ್ಯಾಪಿಂಗ್ ಅತಿ ಮುಖ್ಯ ಘಟ್ಟವಾಗಿದೆ. ಪ್ರತಿ 3 ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ಟ್ಯಾಪಿಂಗ್ ಮಾಡಿದರೆ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ರಬ್ಬರ್ ಗಿಡಗಳ ಆಯ್ಕೆ, ಗಿಡ ನೆಡುವ ವಿಧಾನ, ರಸಗೊಬ್ಬರ ನೀಡುವುದು ಹಾಗೂ ಸಂಸ್ಕರಣಾ ಸಹ ರಬ್ಬರ್ ಬೆಳೆಗಾರರು ಸರಿಯಾಗಿ ಕಲಿತಿರಬೇಕು.
ಒಂದು ಹೆಕ್ಚೇರ್ ಪ್ರದೇಶಕ್ಕೆ 400 ರಿಂದ 500 ರಬ್ಬರ್ ಗಿಡ ಮಾತ್ರ ನೆಡಬೇಕು. ಆದರೆ, ಕೆಲವು ರೈತರು 600 ಗಿಡ ನೆಟ್ಟಿದ್ದಾರೆ. ರಬ್ಬರ್ ಮರಗಳಿಗೆ 16 ಪೋಷಕಾಂಶದ ಅವಶ್ಯಕತೆ ಇದ್ದು ಮೊದಲು ಮಣ್ಣು ಪರೀಕ್ಷೆ ಮಾಡಿಸಿ ನಂತರ ರಸಗೊಬ್ಬರ ನೀಡಬೇಕು ಎಂದು ಸಲಹೆ ನೀಡಿದರು.
ಒಂದು ಹೆಕ್ಚೇರ್ ಪ್ರದೇಶದಲ್ಲಿ ರಬ್ಬರ್ ತೋಟ ಮಾಡಬೇಕಾದರೆ 7 ವರ್ಷಗಳಲ್ಲಿ ರು. 4 ಲಕ್ಷ ಖರ್ಚು ಬರುತ್ತದೆ. ಅಸಮರ್ಪಕ ಟ್ಯಾಪಿಂಗ್ ಮಾಡಿದರೆ ರಬ್ಬರ್ ಮರ ಹಾಳಾಗಿ  50 ವರ್ಷ ಬಾಳಿಕೆ ಬರುವ ಮರ ಕೇವಲ 15 ವರ್ಷಕ್ಕೆ ಹಾಳಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.