'ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಲಿ'
ಚಿಕ್ಕಮಗಳೂರು: ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ಶಿಥಿಲೀಕರಣ ವ್ಯವಸ್ಥೆ ಮಾಡಿದರೆ ಗ್ರಾಮೀಣ ಬದುಕು ಹಸನಾಗುತ್ತದೆ ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ನಿರಂಜನ ಹೇಳಿದರು.
ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಮುಗುವಳ್ಳಿ ಗ್ರಾಮದಲ್ಲಿ ರಚಿಸಿರುವ ಶ್ರೀಪರಮೇಶ್ವರ ರೈತ ಮಿತ್ರಕೂಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರೈತರಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಮಧ್ಯವರ್ತಿಗಳಿಗೆ ಮಾತ್ರ ಲಾಭವಾಗುತ್ತಿದೆ. ರೈತನ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಾಗಬೇಕು. ಕಾಳುಮೆಣಸು 200 ಕೆಜಿಗೆ ಇದ್ದ ಬೆಲೆ ಈಗ 750 ವರೆಗೂ ಏರಿದೆ. ಗುಟ್ಕಾ ನಿಷೇಧದ ನಂತರವೂ ಅಡಕೆ ಕ್ವಿಂಟಲ್ಗೆ 45 ಸಾವಿರವರೆಗೂ ಏರಿಕೆಯಾಗಿದೆ. ಕಬ್ಬು 500 ನಿಂದ 2 ಸಾವಿರವರೆಗೂ ಆಗುತ್ತದೆ. ಒಟ್ಟಾರೆ ಸರಿಯಾದ ಬೆಲೆ ರೈತನ ಉತ್ಪನ್ನಕ್ಕೆ ಸಿಗುತ್ತಿಲ್ಲ. ರೈತ ಕೂಟದ ಮೂಲಕ ತಕ್ಕ ಬೆಲೆ ಪಡೆಯುವುದರ ಜೊತೆಗೆ ಸರ್ಕಾರದ ವಿವಿಧ ಇಲಾಖೆ, ಸಹಕಾರಿ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳೊಂದಿಗೆ ಸಂಬಂಧ ಸುಧಾರಿಸಿಕೊಂಡು ರೈತರು ಜೀವನಶೈಲಿ ಬದಲಿಸಿಕೊಳ್ಳಬಹುದು ಎಂದರು.
ಹಾಸನ ಆಕಾಶವಾಣಿ ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ ಅಂಗಡಿ ಮಾತನಾಡಿ, ನಮ್ಮ ಕುಲ ಕಸುಬು ಕೃಷಿ, ಹೈನುಗಾರಿಕೆ, ಜೇನು ಸಾಗಣಿಕೆ, ತೋಟಗಾರಿಕೆ ಬಗ್ಗೆ ಅಭಿಮಾನ ಮತ್ತು ಅರಿವು ನಮಗಿರಬೇಕು. ನಮ್ಮ ಸುತ್ತಲಿನ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಣ್ಣಪುಟ್ಟ ಕಾಯಿಲೆಗಳಿಗೆ ಹಣ ಸುರಿಯುವ ಬದಲು ಪ್ರಕೃತಿದತ್ತವಾಗಿ ಬರುವ ಸೊಪ್ಪು, ತರಕಾರಿ, ರಾಗಿ, ಹುರುಳಿ, ಕರಿಬೆಲ್ಲ, ಜೇನು, ನಾಟಿ ಹಸಿವಿನಹಾಲು ಸೇವನೆಯ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬಹುದೆಂದರು.
ಕಾವೇರಿ ಗ್ರಾಮೀಣ ಬ್ಯಾಂಕ್ ವಲಯ ವ್ಯವಸ್ಥಾಪಕ ಮಹಾದೇವಪ್ಪ, ಪರಮೇಶ್ವರ ರೈತ ಕೂಟದ ಪ್ರವರ್ತಕರಾದ 12 ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ, ತಂತ್ರಜ್ಞಾನದ ಬದಲಾವಣೆ, ಸಾಲದ ಮೂಲಕ ಅಭಿವೃದ್ಧಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಈ ಮೂರು ಮುಖ್ಯ ಧ್ಯೇಯಗಳನ್ನು ಇಟ್ಟುಕೊಂಡು ರೈತಕೂಟಗಳು ಕೆಲಸ ಮಾಡುತ್ತವೆ. ರೈತರ ಬದುಕಿನಲ್ಲಿ ಆರ್ಥಿಕ ಶಿಸ್ತು, ಲವಲವಿಕೆ, ಬುದ್ಧಿಯ ಜ್ಞಾನ ಹೆಚ್ಚಿಸಲು ಈ ಸಂಘಟನೆ ಸಹಕಾರಿ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಮಹೇಶ್ವರಪ್ಪ ಮಾತನಾಡಿ, ರೈತ ಮಕ್ಕಳು ಹಳ್ಳಿಗಳನ್ನು ತೊರೆಯದಂತೆ ಮಾಡುವುದೇ ರೈತಕೂಟದ ಆದ್ಯತೆ ಆಗಬೇಕುಕೆಂದರು. ನಬಾರ್ಡ್ ಸಹಾಯಕ ಮಹಾಪ್ರಬಂಧಕ ಅನುರಾಧ ನರಹರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಗುವಳ್ಳಿ ಗ್ರಾಪಂ ಅಧ್ಯಕ್ಷ ಕೆ.ವಿ. ವಿರೂಪಾಕ್ಷ, ಮಾಜಿ ಅಧ್ಯಕ್ಷ ಎಂ.ಡಿ. ರವಿ, ಉಮೇಶ್, ಕಾವೇರಿ ಗ್ರಾಮೀಣ ಬ್ಯಾಂಕಿನ ಅಧಿಕಾರಿ ಚೇತನ್, ಮುಗುವಳ್ಳಿ ಬ್ಯಾಂಕ್ ವ್ಯವಸ್ಥಾಪಕಿ ಅಮೃತಾ ಉಪಸ್ಥಿತರಿದ್ದರು.
ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ನಡೆದ ಶ್ರೀಪರಮೇಶ್ವರ ರೈತ ಮಿತ್ರಕೂಟ ಉದ್ಘಾಟನಾ ಸಮಾರಂಭದಲ್ಲಿ ಎಂ.ಎಸ್. ನಿರಂಜನ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

