ಚಿಕ್ಕಮಗಳೂರು

ನೀರು ಕೊಡಿ, ಇಲ್ಲವೇ ಊರು ಬಿಡಿ...

Published On :

ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರಗಡ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ರೈತರು ಸಣ್ಣ ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.
ಮೆರವಣಿಗೆಯ ಮೂಲಕ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ತೆರಳಿದ ರೈತರು ಅಲ್ಲಿ ಹೊರಭಾಗದಲ್ಲಿ ಧರಣಿ ಕುಳಿತು, ಕಾಮಗಾರಿ ನಿಧಾನಗತಿಯಲ್ಲಿ ನಡೆಯುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಘೋಷಣೆ ಕೂಗಿದರು.
60 ಹಳ್ಳಿ ಗ್ರಾಮಸ್ಥರ ಹೋರಾಟದ ಫಲ:  ಕಳೆದ ಹಲವು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿದ್ದ ದೇವನೂರು, ಬೆಳವಾಡಿ, ಕಳಸಾಪುರ ಸೇರಿದಂತೆ ಸುಮಾರು 60 ಹಳ್ಳಿಗಳ ಗ್ರಾಮಸ್ಥರು ನಡೆಸಿದ ಹೋರಾಟದ ಫಲವಾಗಿ ಕಳೆದ ವರ್ಷ ರು. 10 ಕೋಟಿ  ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದರು. ಸ್ಥಳೀಯ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಪ್ರತಿಭಟನಾ ಸಭೆಯಲ್ಲಿ ಮುಖಂಡರು ಹೇಳಿದರು.
ಮುಗುಳುವಳ್ಳಿ ಪಿಕಪ್‌ನಿಂದ ಮುಗುಳುವಳ್ಳಿ ಗಡಿಯವರೆಗೆ 7 ಕಿ.ಮೀ. ಚಾನಲ್ ಹಾಗೂ ಸಿಮೆಂಟ್ ಲೈನಿಂಗ್ ಕಾಮಗಾರಿ ಮುಗಿದಿದ್ದು, ಬೇಲೂರು ತಾಲೂಕಿನ ಶಿರಘಟ್ಟದಿಂದ ದೇವಿಕೆರೆಗೆ ಐದಾರು ಕಿ.ಮೀ.ನಷ್ಟು ಚಾನಲ್ ಕಾಮಗಾರಿ ಕೈಗೆತ್ತಿಕೊಂಡಿಲ್ಲ, ಈ ಕಾಮಗಾರಿ ಪ್ರಾರಂಭಿಸದೇ ಇರುವುದರಿಂದ ಚಾನಲ್ ನಲ್ಲಿ ಹರಿಯುವ ನೀರು ದೇವೀಕೆರೆ ಸೇರದೆ ವ್ಯರ್ಥವಾಗಿ ಹಳ್ಳ ಸೇರುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತಂದರು.
ನೀರು ಕೊಡಿ, ಇಲ್ಲವೇ ಊರು ಬಿಡಿ: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯಲು ಬೇಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮಸ್ಥರು ಕಾಮಗಾರಿಗೆ ಅಡ್ಡಿಪಡಿಸಿರುವುದು ಕಾರಣ. ಕಾಲುವೆ ಹರಿದು ಹೋಗುವ ಜಾಗದಲ್ಲಿರುವ ಕಲ್ಲುಗಳನ್ನು ಸ್ಫೋಟಿಸಲು ಜನರು ಬಿಡುತ್ತಿಲ್ಲ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರ ಗಮನಕ್ಕೂ ಈ ವಿಷಯ ತರಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ  ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನುಡಿದರು.
ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ತಡವಾಗಬಹುದು. ಆದರೆ, ಇನ್ನು ಐದು ದಿನದೊಳಗೆ ದೇವಿಕೆರೆಗೆ ನೀರು ಹರಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಹೇಳಿದರು. ಆಗ ಐದು ದಿನದೊಳಗೆ ನೀರು ಕೊಡಿ, ಇಲ್ಲದೆ ಹೋದರೆ ಊರು ಬಿಡಿ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಮುಖಂಡ ರವೀಶ್ ಕ್ಯಾತನಬೀಡು, ಗುರುಶಾಂತಪ್ಪ, ಬಿ. ಅಮ್ಜದ್, ಎಚ್.ಎಂ. ರೇಣುಕಾರಾಧ್ಯ, ಎಚ್.ಕೆ. ಶಶಿಧರ್, ಕೆಂಗೇಗೌಡ, ಕೆಂಚಪ್ಪ ಹಾಗೂ ರೈತರು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನೀರಿಲ್ಲದೆ ಈ ಬಾರಿಯೂ ಬವಣೆ
ಪ್ರಸಕ್ತ ಸಾಲಿನಲ್ಲಿ ನೀರು ಹರಿಯುವ ವ್ಯವಸ್ಥೆ ಮಾಡಿದ್ದರೆ ಈಗಾಗಲೇ ಸುರಿದ ಮಳೆಯ ನೀರಿನಿಂದ ಕಳಸಾಪುರ, ಈಶ್ವರಹಳ್ಳಿ ಕೆರೆಗಳು ತುಂಬಿ ಹೋಗುತ್ತಿದ್ದವು. ಆದರೆ, ನೀರಾವರಿ ಇಲಾಖೆಯ ತಾತ್ಸಾರ ಮನೋಭಾವ ಹಾಗೂ ಕಾಮಗಾರಿ ಉಸ್ತುವಾರಿ ವಹಿಸಿರುವ ಅಧಿಕಾರಿಯ ಬೇಜವಾಬ್ದಾರಿತನದ ನಿರ್ವಹಣೆಯಿಂದ ರೈತರು ನೀರಿಲ್ಲದೇ ಮತ್ತೆ ಬವಣೆಗೆ ಸಿಲುಕಿದ್ದಾರೆ.
ದೇವಿಕೆರೆಯಿಂದ ಕಳಸಾಪುರ ಕೆರೆಗೆ ಹೋಗುವ ಚಾನಲ್ ಕಾಮಗಾರಿ ಪೂರ್ಣಗೊಂಡಿಲ್ಲ, ಇನ್ನು  ಸೇತುವೆ ಕಾಮಗಾರಿ ಪ್ರಾರಂಭವೇ ಆಗಿಲ್ಲ, ಆದುದರಿಂದ ಸೇತುವೆ ನಿರ್ಮಾಣದ ಜಾಗದಲ್ಲಿ ತಾತ್ಕಾಲಿಕವಾಗಿ ಪೈಪ್ ಜೋಡಣೆ ಮಾಡಿ ದೇವಿಕೆರೆಗೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.