ನರಸಿಂಹರಾಜಪುರ ಆಹಾರ ನಿಗಮದ ಗೋದಾಮು ಮುಗಿಯದ ಕಾಮಗಾರಿ
ಚ ಯಡಗೆರೆ ಮಂಜುನಾಥ್
ನರಸಿಂಹರಾಜಪುರ: ಜೈಲ್ ರಸ್ತೆಯಲ್ಲಿ ಆಹಾರ ನಿಗಮವು ಅಂದಾಜು 48.98 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತವಾದ ಗೋದಾಮು ನಿರ್ಮಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಪ್ರಾರಂಭಗೊಂಡು 2 ವರ್ಷವಾದರೂ ಸಂಪೂರ್ಣವಾಗಿಲ್ಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಶಾಸಕ ಡಿ.ಎನ್.ಜೀವರಾಜ್ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿದ್ದರು. ಆಗ ಖುದ್ದು ಆಸಕ್ತಿ ವಹಿಸಿ ಬಸ್ ನಿಲ್ದಾಣ ಅಗಲೀಕರಣ ಮಾಡಿ ಅಲ್ಲಿ ಆಟೋ ನಿಲ್ದಾಣ ಮಾಡುವ ಉದ್ದೇಶದಿಂದ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಕಲ್ಲಿನಿಂದ ನಿರ್ಮಿತವಾದ ಗೋದಾಮು ತೆರವುಗೊಳಿಸಲಾಯಿತು.
ಸುಸಜ್ಜಿತ ಗೋದಾಮನ್ನು ಜೈಲ್ ರಸ್ತೆಯಲ್ಲಿ ನಿರ್ಮಿಸಲು 2 ವರ್ಷಗಳ ಕೆಳಗೆ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಗೋದಾಮು ಉದ್ಘಾಟನೆ ಆಗುವವರೆಗೆ ತಾತ್ಕಾಲಿಕವಾಗಿ ಅಕ್ಕಿ, ಗೋಧಿ, ಸಕ್ಕರೆ ದಾಸ್ತಾನು ಮಾಡಲು ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಇರುವ ಟಿಎಪಿಸಿಎಂಎಸ್‌ನ 3 ಗೋದಾಮುಗಳಲ್ಲಿ 2 ಗೋದಾಮನ್ನು ಆಹಾರ ನಿಗಮಕ್ಕೆ ಬಿಟ್ಟುಕೊಡಲಾಗಿತ್ತು. ಆದರೆ, 2 ವರ್ಷ ಕಳೆದರೂ ನೂತನ ಗೋದಾಮು ಕಾಮಗಾರಿ ಸಂಪೂರ್ಣ ಮುಗಿಯದೆ ಟಿಎಪಿಸಿಎಂಎಸ್ ಅವರ ಗೋದಾಮು ತೆರವುಗೊಳಿಸದೆ ಇರುವುದರಿಂದ ಈಗ ರಸ ಗೊಬ್ಬರ ದಾಸ್ತಾನು ಮಾಡಲು ಗೋದಾಮು ಇಲ್ಲದೆ ಪರದಾಡುವಂತಾಗಿದೆ.
ತಾತ್ಕಾಲಿಕವಾಗಿ ನೀಡಲಾಗಿತ್ತು: ತಾಲೂಕಿನ ಎಲ್ಲಾ ಸಹಕಾರ ಸಂಘಗಳಿಗೆ ಪಡಿತರ ನೀಡುವ ಅಕ್ಕಿ, ಸಕ್ಕರೆ ದಾಸ್ತಾನು ಮಾಡುವ ಗೋದಾಮಿಗೆ ತಾತ್ಕಾಲಿಕವಾಗಿ ಟಿಎಪಿಸಿಎಂಎಸ್ 2 ಗೋದಾಮನ್ನು ಸೇವಾ ಮನೋಭಾವದಿಂದ ನೀಡಲಾಗಿತ್ತು ಎನ್ನುತ್ತಾರೆ ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಟಿ. ವೆಂಕಟೇಶ್. ಆದರೆ, 2 ವರ್ಷವಾದರೂ ಆಹಾರ ನಿಗಮದವರು ನೂತನ ಗೋದಾಮು ಸಂಪೂರ್ಣವಾಗಿ ಮುಗಿಸಿಲ್ಲ. ಇದರಿಂದ ರಸಗೊಬ್ಬರ ದಾಸ್ತಾನು ಮಾಡಲು ಟಿಎಪಿಸಿಎಂಎಸ್‌ಗೆ ತೊಂದರೆ ಆಗುತ್ತಿದೆ. ಈಗ ಮಳೆಗಾಲ ಪ್ರಾರಂಭವಾಗಿದೆ. ಅಗತ್ಯ ರಸಗೊಬ್ಬರ ದಾಸ್ತಾನು ಇಡಲು ಗೋದಾಮು ಬೇಕಾಗಿದೆ. ಆಹಾರ ನಿಗಮದವರು ತಕ್ಷಣ ಕಾಮಗಾರಿ ಮುಗಿಸಿ ನಮ್ಮ ಗೋದಾಮನ್ನು ತೆರವುಗೊಳಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಕಾಮಗಾರಿ ಮುಗಿದಿಲ್ಲ: ಜೈಲ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ಆಹಾರ ನಿಮಗದ ಗೋದಾಮಿನ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ ಎನ್ನುತ್ತಾರೆ ಜಿಲ್ಲಾ ಆಹಾರ ನಿಗಮದ ವ್ಯವಸ್ಥಾಪಕ ಜಯರಾಂ. ಗೋದಾಮಿಗೆ ಬೇಕಾದ ಪ್ಲಾಟ್‌ಫಾರಂ, ವೈರಿಂಗ್, ಮೆಟ್ಟಿಲು ಮುಂತಾದ ಕೆಲಸಗಳು ಬಾಕಿ ಇದೆ. ಈ ಕಾಮಗಾರಿಯನ್ನು ಬೆಂಗಳೂರಿನ ಆಹಾರ ನಿಗಮದ ಕೇಂದ್ರ ಕಚೇರಿಯಿಂದಲೇ ಎತ್ತಿಕೊಂಡಿದೆ. ಭೂ ಸೇನಾ ನಿಗಮದವರು ಕಟ್ಟಡದ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ವಿಳಂಬವಾಗಿ ಇರುವುದರಿಂದ ರಸಗೊಬ್ಬರ ದಾಸ್ತಾನಿಗೆ ತೊಂದರೆ ಆಗುತ್ತಿರುವ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಅವರಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಂಚಾರಕ್ಕೆ ತೊಂದರೆ: ಟಿಎಪಿಸಿಎಂಎಸ್‌ಗೆ ಹೋಗುವ ರಸ್ತೆಯ ಮಾರ್ಗವು ಇಕ್ಕಟ್ಟಿನ ರಸ್ತೆಯಾಗಿದೆ. ಒಂದು ವಾಹನ ಹೋದರೆ ಮತ್ತೊಂದು ವಾಹನಕ್ಕೆ ಜಾಗವೇ ಉಳಿಯುವುದಿಲ್ಲ. ಈಗ ಆಹಾರ ನಿಗಮದಿಂದ ಬರುವ ಅಕ್ಕಿ, ಸಕ್ಕರೆಯನ್ನು ತರುವ ದೊಡ್ಡ ಲಾರಿಗಳು ಈ ರಸ್ತೆಗೆ ಬಂದಾಗ ಬೇರೆ ವಾಹನಗಳು ಹೋಗಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಆಗುತ್ತದೆ. ಆದಷ್ಚು ಬೇಗ ಆಹಾರ ನಿಗಮದವರು ತಮ್ಮ ನೂತನ ಗೋದಾಮನ್ನು ಪ್ರಾರಂಭಿಸಿದರೆ. ಈ ರಸ್ತೆಯಲ್ಲಿ ಓಡಾಡುವ ವಾಹನ ಸಂಚಾರರಿಗೆ ಅನುಕೂಲವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

