ಆರೋಗ್ಯ ಕೇಂದ್ರ ಶೀಘ್ರವೇ ಮೇಲ್ದರ್ಜೆಗೆ
ಬಾಳೆಹೊನ್ನೂರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರೇಮ್ಕುಮಾರ್ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಕ ಸಮಿತಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸುವುದು ವೈದ್ಯರ ಗುರಿಯಾಗಿದೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ಗಳು, ಡಿ. ದರ್ಜೆ ನೌಕರರು ಹಾಗೂ ಔಷಧಿಗಳು, ಚಿಕಿತ್ಸೆಗೆ ಬೇಕಾದ ಉಪಕರಣಗಳ ಕೊರತೆ ಇರುವುದರಿಂದ ಸರಿಯಾದ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಸಮಸ್ಯೆ ಬಗೆಹರಿಸುವಂತೆ ಮೇಲಧಿಕಾರಿಗಳಿಗೆ ಕೋರಲಾಗಿದೆ ಎಂದು ಹೇಳಿದರು.
ಉತ್ತಮ ಸೇವೆ: ವೈದ್ಯ ಫಾರೂಕ್ ಮಾತನಾಡಿ, ಸುತ್ತಮುತ್ತಲಿನ ಗ್ರಾಮದಿಂದ ಹೆಚ್ಚು ಜನರು ಈ ಆಸ್ಪತ್ರೆಗೆ ಬರುತ್ತಿದ್ದು ರೋಗಿಗಳಿಗೆ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಪೂರೈಸಲಾಗುತ್ತಿಲ್ಲ. ಉಪ ಆರೋಗ್ಯ ಕೇಂದ್ರಗಳಾದ ಮಾಗುಂಡಿ, ಮುತ್ತಿನಕೊಪ್ಪ ಹಾಗೂ ಕಟ್ಟಿನಮನೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಅಲ್ಲಿನ ಔಷಧಿಗಳನ್ನು ಪಡೆದು ಹೊಂದಾಣಿಕೆಯಿಂದ ಇರುವ ಔಷಧಿಯಲ್ಲೇ ರೋಗಿಗಳನ್ನು ಉಪಚರಿಸಲಾಗುತ್ತಿದೆ. ಸೌಲಭ್ಯಗಳು ಹೆಚ್ಚು ದೊರೆತಲ್ಲಿ ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ ಎಂದು ನುಡಿದರು.
ಬಿ.ಕಣಬೂರು ಗ್ರಾಪಂ ಸದಸ್ಯ ಜಂಶೀದ್ ಅಹಮ್ಮದ್ ಮಾತನಾಡಿ, ಆಸ್ಪತ್ರೆಯಲ್ಲಿ ಈಗಿರುವ ಮಹಿಳಾ ವೈದ್ಯರು ಸರಿಯಾಗಿ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಮತ್ತೊಬ್ಬ ಮಹಿಳಾ ವೈದ್ಯಾಧಿಕಾರಿಯನ್ನು ನೇಮಿಸಬೇಕು. ಆಸ್ಪತ್ರೆಯ ಜಾಗ ಕೊಪ್ಪ ಲೋಕಸೇವಾನಿರತ ದ್ಯಾವೇಗೌಡರ ಹೆಸರಿನಲ್ಲಿದ್ದು ಕೂಡಲೇ ಸರ್ಕಾರಕ್ಕೆ ವರ್ಗಾಯಿಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದರು.
ಶೀಘ್ರದಲ್ಲಿ ಸರ್ವಪಕ್ಷ ನಿಯೋಗ: ಜಿಪಂ ಸದಸ್ಯ ಮಹಮ್ಮದ್ ಇಫ್ತೆಕಾರ್ ಆದಿಲ್ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಲಿಕಾರ್ಮಿಕರೇ ಹೆಚ್ಚಾಗಿದ್ದು, ಸೂಕ್ತ ವೈದ್ಯರ ಅವಶ್ಯಕತೆಯಿದೆ. ಶೀಘ್ರದಲ್ಲಿ ಸರ್ವಪಕ್ಷ ನಿಯೋಗದೊಂದಿದೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷೆ ಶಾಯಿದಾ ಬಾನು ಅಧ್ಯಕ್ಷತೆ ವಹಿಸಿದ್ದರು. ನರಸಿಂಹರಾಜಪುರ ತಾಪಂ ಸದಸ್ಯೆ ಹೇಮಲತಾ ಪ್ರಭಾಕರ್, ಗ್ರಾಪಂ ಸದಸ್ಯೆ ಶಾರದಮ್ಮ, ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಅಧ್ಯಕ್ಷ ವಿಕ್ಟರ್ಪಿಂಟೋ, ಬನ್ನೂರು ಗ್ರಾಪಂ ಅಧ್ಯಕ್ಷೆ ಹೇಮಾವತಿ, ಸದಸ್ಯರಾದ ಮಹಮ್ಮದ್ ಹನೀಫ್, ಮಾಜಿ ಸದಸ್ಯ ಜಗದೀಶ್ಚಂದ್ರ, ಬಿಜೆಪಿ ಹೋಬಳಿ ಕಾರ್ಯದರ್ಶಿ ಪ್ರಭಾಕರ್, ಕರವೇ ಹೋಬಳಿ ಅಧ್ಯಕ್ಷ ನವೀನ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಪರಮೇಶ್ವರ, ಆರೋಗ್ಯ ಸಹಾಯಕಿ ಕಾವೇರಮ್ಮ, ಭಗವಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

