ಚಿಕ್ಕಮಗಳೂರು

ಸಿಬ್ಬಂದಿ ಕೊರತೆ, ಊರಿಡೀ ಕಸದ್ದೇ ಕತೆ

Published On :

ಅನಂತ ನಾಡಿಗ್
ತರೀಕೆರೆ: ತರೀಕೆರೆ ಪಟ್ಟಣದ ಒಟ್ಟು ಜನಸಂಖ್ಯೆ 40 ಸಾವಿರಕ್ಕೂ ಹೆಚ್ಚು. 23 ವಾರ್ಡುಗಳಿಂದ ಇರುವುದು ಎರಡೇ ಎರಡು ಕಸ ವಿಲೇವಾರಿ ಟ್ರ್ಯಾಕ್ಟರ್. ಪಟ್ಟಣದ ನಾಲ್ಕು ದಿಕ್ಕಿನಲ್ಲೂ ಊರು ಬಡಾವಣೆಯಾಗಿದೆ. ಕಣ್ಣು ಹಾಯಿಸಿದತ್ತ ಜನವಸತಿ ತುಂಬಿ ತುಳುಕುತ್ತಿದೆ. ಬೀದಿ ಕಸ, ಆಸ್ಪತ್ರೆ, ಹೋಟೆಲ್, ವಸತಿ ಗೃಹ, ತರಕಾರಿ ಕಸ, ವಾರದ ಸಂತೆ, ಕಲ್ಯಾಣ ಮಂಟಪಗಳಿಂದ ಹೊರ ಬೀಳುವ ಕಸ ಎಲ್ಲವೂ ಇವೇ ಟ್ರ್ಯಾಕ್ಟರ್‌ಗಳಲ್ಲಿ ಸಾಗಾಟ.
 ಪ್ರತಿನಿತ್ಯ ಲಾರಿಗಟ್ಟೆಲೆ ಕಸ ಬಿದ್ದಿರುತ್ತದೆ. ಬೆಳಗಿನಿಂದ ಸಾಯಂಕಾಲದವರೆಗೆ ಎಷ್ಟು ಕಸ ಎತ್ತಿದರೂ ಮತ್ತೆ ಮತ್ತೆ ಕಸ ಉತ್ಪಾದನೆಯಾಗುತ್ತಿರುತ್ತದೆ. ಕಸ ವಿಲೇವಾರಿ ಮಾಡಲು ನಮಗೆ ಸಮಸ್ಯೆ ಇಲ್ಲವೇ ಇಲ್ಲ. ಕೇವಲ 26 ಮಂದಿ ಸಿಬ್ಬಂದಿ ಎಷ್ಟು ಟನ್ ಕಸವನ್ನು ಊರಿನಿಂದ ಹೊರಕ್ಕೆ ಸಾಗಿಸಿಯಾರು?  ಸಿಬ್ಬಂದಿಯ ಕೊರತೆಯೇ ನಮಗೆ ಬಹು ದೊಡ್ಡ ಸಮಸ್ಯೆಯಾಗಿದೆ.
   ಇದು, ಹಿಂದೊಂದು ಸಾರಿ ಉತ್ತಮ ಕಸ ವಿಲೇವಾರಿಗೆ-ಕಾಂಪೋಸ್ಟ್ ನಿರ್ವಹಣೆಯಲ್ಲಿ ರಾಜ್ಯ ಮಟ್ಟದಲ್ಲಿ ಸರ್ಕಾರದಿಂದ ಪುರಸ್ಕೃತವಾಗಿದ್ದ ತರೀಕೆರೆ ಪುರಸಭೆ ಮಾತು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣಕ್ಕೆ ಉಪ್ಪಾರ ಬಸವನಹಳ್ಳಿ, ಹಳೆಯೂರು, ಮಾಚೇನಹಳ್ಳಿ ಇತ್ಯಾದಿ ಅನೇಕ ಬಡಾವಣೆಗಳು ಸೇರ್ಪಡೆಯಾಗಿ ಜನವಸತಿ ಹೆಚ್ಚಾಗಿದೆ.
ಕಸ ಸಂಗ್ರಹಿಸಲು ಇರುವ ಸಿಬ್ಬಂದಿ ಮಾತ್ರ ಅತ್ಯಂತ ಕಡಿಮೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯವನ್ನೂ ನಿರ್ವಹಿಸಲಾಯಿತು. ಆದರೆ ಅದು ನಿರೀಕ್ಷಿತ ಫಲ ನೀಡಲಿಲ್ಲ ಎನ್ನುತ್ತಾರೆ ಪುರಸಭೆ ಆರೋಗ್ಯಾಧಿಕಾರಿಗಳು.
ತ್ಯಾಜ್ಯ ಸಂಗ್ರಹಕ್ಕೆ ಹೊಸ ಯೋಜನೆ: ಪಟ್ಟಣದಲ್ಲಿ ಇನ್ನು ಮಂದೆ ಕಸ ಸಂಗ್ರಹಿಸಲು ಟ್ರ್ಯಾಕ್ಟರ್ ಅಲ್ಲದೆ 12 ಆಟೋ ಟಿಪ್ಪರ್ ಖರೀದಿಸಿ, ಎರಡು ವಾರ್ಡಿಗೆ ಒಂದರಂತೆ ಆಟೋ ಟಿಪ್ಪರ್ ಒದಗಿಸಿ ಅದರಲ್ಲಿ ತ್ಯಾಜ್ಯ ಸಂಗ್ರಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಸುನೀಲ್‌ದತ್ ತಿಳಿಸಿದ್ದಾರೆ. ಮುಕ್ತ ಮಾರುಕಟ್ಟೆಗಳಿಂದ ಬಿಸಾಕಿದ ತ್ಯಾಜ್ಯ ವಸ್ತುಗಳನ್ನು ವಾರಕ್ಕೆರಡು ಬಾರಿ ಸಂಗ್ರಹಿಸಬೇಕು. ಜನವಸತಿಗಳ ಬಡಾವಣೆಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹಿಸುವ ಕಾರ್ಯ ನಿರ್ವಹಿಸಬೇಕು ಇದಕ್ಕಾಗಿ ಪುರಸಭೆಯ ಸಿಬ್ಬಂದಿ ಕೊರತೆಯನ್ನು ಸರ್ಕಾರ ನೀಗಿಸಬೇಕು. ಲೆಟ್ರಿನ್ ಪಿಟ್ ಖಾಲಿ ಮಾಡುವ ವಾಹನ ಯಂತ್ರ ನೀಡಿದ್ದು ಸಕ್ಕಿಂಗ್ ವಾಹನಕ್ಕೆ ಚಾಲಕರನ್ನು ನೇಮಕ ಮಾಡಲು ಪ್ರಯತ್ನಿಸಬೇಕೆಂದು ಮುಖ್ಯಾಧಿಕಾರಿಗಳಿಗೆ ಅವರು ಸೂಚಿಸಿದರು.
ಮನೆ ಮನೆಗೆ ತೆರಳಿ ಗಾಡಿಗಳಲ್ಲಿ ಕಸ ಸಂಗ್ರಹಿಸುವ ಕಾರ್ಯವನ್ನು ಮುಂದುವರೆಸಲಾಗುವುದು ಎಂದು ಮುಖ್ಯಾಧಿಕಾರಿ ಮುನಿಸ್ವಾಮಿ ತಿಳಿಸಿದ್ದಾರೆ.
ಪುರಸಭೆ ಸದಸ್ಯ ಟಿ.ಜಿ.ಆಶೋಕ್‌ಕುಮಾರ್ ಅವರು ಪಟ್ಟಣದಲ್ಲಿ ಹಂದಿಗಳ ಮತ್ತು ನಾಯಿಗಳ ಕಾಟ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಣ ಮಾಡುವಲ್ಲಿ ಪುರಸಭೆ ಮುಂದಾಗಬೇಕು ಎಂದರು.
ಹೆಚ್ಚು ಸಿಬ್ಬಂದಿ ಅಗತ್ಯ: ಪಟ್ಟಣದಲ್ಲಿ ಜನಸಂಖ್ಯೆ ಮತ್ತು ಬಡಾವಣೆಗಳು ಹೆಚ್ಚಾದಂತೆ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ನಿರ್ವಹಣೆಗೆ ಹಿಂದೆ ಇದ್ದಷ್ಟೆ ಸಿಬ್ಬಂದಿ ಈಗಲೂ ಇದೆ. ಬಡಾವಣೆಗಳು ಹೆಚ್ಚಾದಂತೆ ಊರು ವಿಸ್ತಾರವಾದಂತೆ ಕಸ ನಿರ್ವಹಣೆ ಸಿಬ್ಬಂದಿ ಹೆಚ್ಚಾಗಬೇಕು. ಕಸ ಸಾಗಿಸುವ ಟ್ರ್ಯಾಕ್ಟರ್ ವಾಹನ ಮತ್ತು ಅದಕ್ಕೆ ಸಿಬ್ಬಂದಿ ಕೂಡ ಹೆಚ್ಚಾಗಬೇಕು. ಈಗಿರುವ ಕಡಿಮೆ ಸೌಲಭ್ಯಗಳಿಂದ ಸಮರ್ಪಕವಾಗಿ ಕಸ ನಿರ್ವಹಣೆಯಾಗುತ್ತಿಲ್ಲ.
  ಸರ್ಕಾರ ಪುರಸಭೆಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಸಂಗ್ರಹಿಸಿದ ತ್ಯಾಜ್ಯ ಕಾಂಪೋಸ್ಟ್ ಯಾರ್ಡ್‌ಗೆ ತಲುಪುವ ವ್ಯವಸ್ಥೆಯಾಗಬೇಕು ಎಂದು ಪುರಸಭೆ ಸದಸ್ಯ ಈರಣ್ಣ, ನಾಗರಾಜ್, ರಮೇಶ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.