ಲೋಕಾ ದೂರು; ಶೀಘ್ರ ಕ್ರಮಕ್ಕೆ ಸೂಚನೆ
ಕ.ಪ.ವಾರ್ತೆ ಚಿಕ್ಕಮಗಳೂರು ಜೂ.24
ಸರ್ಕಾರಿ ಇಲಾಖೆಗಳ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಗಳ ವಿಲೇವಾರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ರಾವ್ ಅವರು ಕಾಲಮಿತಿಯೊಳಗೆ ಕ್ರಮಕ್ಕೆ ಸೂಚನೆ ನೀಡಿದರು.
ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ರಾವ್ ಅಧ್ಯಕ್ಷತೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳ ಬಗ್ಗೆ ಸುಮಾರು 3 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. ಬಹುತೇಕ ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತಮಗೆ ವರದಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜತೆಗೆ ತಮ್ಮ ವ್ಯಾಪ್ತಿಗೆ ಬರದೆ ಇರುವ ಅಂದರೆ, ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ, ಮಾಹಿತಿ ಹಕ್ಕಿನ ಪ್ರಕಾರ ಸಕಾಲದಲ್ಲಿ ಮಾಹಿತಿ ಕೊಡದೆ ಇರುವ, ಸರ್ಕಾರಿ ಸೇವೆಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಲು ಲೋಕಾಯುಕ್ತ ಕಾಯ್ದೆಯ ಪ್ರಕಾರ ಅವಕಾಶ ಇಲ್ಲ. ಆವುಗಳಿಗಾಗಿಯೇ ಪ್ರತ್ಯೇಕ ನ್ಯಾಯಾಲಯ ಹಾಗೂ ಇಲಾಖೆಗಳಿವೆ. ಅಲ್ಲಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು ಎಂದು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ತಿಳಿಸಿದರು.
ಅಹವಾಲು: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ನ ಗಿಡ್ಡೇಗೌಡ ಅವರು ಶಾಲೆಯ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರ ವಿರುದ್ಧ ದೂರು ನೀಡಿದ್ದರು. ಈ ಹಣ ವಸೂಲಿಗೆ ಕ್ರಮ ವಹಿಸಿ 3 ತಿಂಗಳೊಳಗೆ ವರದಿ ನೀಡಬೇಕೆಂದು ಲೋಕಾಯುಕ್ತ ನ್ಯಾಯಮೂ ರ್ತಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಕುವೆಂಪು ನಗರದ ನಿವಾಸಿ ನಂಜಪ್ಪ ಇತರರು, ತಮ್ಮ ಮನೆಯ ಮುಂದೆ ನಗರಸಭೆಯ ಕೊಳಚೆ ನೀರು ಬಂದು ನಿಲ್ಲುತ್ತಿದೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ.
ಈ ಸಂಬಂಧ ನಗರಸಭೆಗೆ ಅರ್ಜಿ ಸಲ್ಲಿಸಿದರೂ ಸಹ ಸ್ಪಂದಿಸಿಲ್ಲ ಎಂದು ಕೊಟ್ಟ ದೂರಿನನ್ವಯ, ಜನರು ತೆರಿಗೆ ಕೊಡುತ್ತಾರೆ. ಅವರಿಗೆ ಮೂಲಭೂತ ಸೌಲಭ್ಯ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಪ್ರತಿ ಎರಡು ದಿನಕ್ಕೊಮ್ಮೆ ಆ ಭಾಗದಲ್ಲಿ ಸ್ವಚ್ಛತೆ ಕೈಗೊಂಡು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಸಮಸ್ಯೆ ಮೂರು ತಿಂಗಳೊಳಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾ. ಭಾಸ್ಕರರಾವ್ ಹೇಳಿದರು.
ಬಾಸೂರು ಕಾವಲು: ಬೀರೂರು ಸಮೀಪದ ಬಾಸೂರು ಕಾವಲ್ಗೆ ಸೇರಿದ ಜಮೀನಿನಲ್ಲಿ ಸುಮಾರು 18 ಎಕರೆ ಒತ್ತುವರಿಯಾಗಿದೆ. ಇಲ್ಲಿನ ಜಾನುವಾರುಗಳಿಗೆ ಕುಡಿಯಲು ತೋಡಿರುವ ಕೊಳವೆ ಬಾವಿಗಳಿಂದ ಅಕ್ರಮ ಜಮೀನಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ ಎಂದು ಕೇದಿಗೆರೆ ಗ್ರಾಮದ ರಾಜಪ್ಪ ಕೊಟ್ಟ ದೂರಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚನೆ ನೀಡಿದರು.
ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಕಾಮಗಾರಿ ನಡೆಸದೆ ಕೆಲವು ಕಡೆಗಳಲ್ಲಿ ಹಣ ಪಡೆಯಲಾಗಿದೆ ಎಂದು ಪುಟ್ಟಸ್ವಾಮೇಗೌಡ ಹೇಳಿದಾಗ, ಈ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ತನಿಖೆ ನಡೆಸಿ 3 ತಿಂಗಳೊಳಗೆ ವರದಿ ನೀಡಬೇಕು ನ್ಯಾಯಮೂರ್ತಿ ಹೇಳಿದರು.
ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ರು. 2 ಲಕ್ಷ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡಲು ನಿರಾಕರಿಸಿದಾಗ ಬೇರೆಯವರ ಹೆಸರಿನಲ್ಲಿ ಇಲಾಖೆಗೆ ಮೂಖರ್ಜಿ ಬರೆಸಿದ್ದಾರೆ ಎಂದು ಮೇಲಿನ ಹುಲುವತ್ತಿಯ ಕೃಷ್ಣೇಗೌಡ ಹೇಳಿದರು. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್. ದೇಶಪಾಂಡೆ, ಜಿಲ್ಲಾಧಿಕಾರಿ ಶೇಖರಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಲೋಕಾಯುಕ್ತ ಎಸ್ಪಿ ವೇದಮೂರ್ತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

