ಚಿಕ್ಕಮಗಳೂರು

ಅಡಕೆ ನಿಷೇಧ ಗೊಂದಲಕ್ಕೆ ಎನ್‌ಡಿಎ ಕಾರಣ

Published On :

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ.2
ಗುಟ್ಕಾ, ಪಾನ್ ಮಸಾಲ ಹಾಗೂ ಅಡಕೆ ನಿಷೇಧ ಕುರಿತು ಉಂಟಾಗಿರುವ ಆತಂಕ, ಗೊಂದಲಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮೂಲ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಆರೋಪಿಸಿದ್ದಾರೆ.
ಇಂಡಿಯನ್ ಅಸ್ತಮ ಕೇರ್ ಸೊಸೈಟಿ, ಸಿಪಿಲ್ ಹಾಗೂ ಇನ್ನಿತರ ಸಂಸ್ಥೆಗಳು ಗುಟ್ಕಾ ನಿಷೇಧ ಹಾಗೂ ಪ್ರಕರಣಗಳಿಗೆ ಮೂಲ ಪ್ರೇರಣೆಯಾಗಿದೆ. ಈ ಸತ್ಯವನ್ನು ಅಡಕೆ ಬೆಳೆಗಾರರಿಂದ ಮರೆಮಾಚುವ ಸಲುವಾಗಿ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರದ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ನಾಯಕರು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಡಕೆ ಕುರಿತು(ಉತ್ಪಾದನೆ, ತಾಂತ್ರಿಕತೆ, ಬೇಡಿಕೆ, ತೆರಿಗೆ, ಸ್ವರೂಪ) ಪರಿಶೀಲಿಸಿ ವರದಿ ನೀಡಲು ಕ್ಯಾಂಪ್ಕೋ ಸಂಸ್ಥೆಯ ಅಂದಿನ ಅಧ್ಯಕ್ಷರಾದ ಎಸ್.ಆರ್. ರಂಗಮೂರ್ತಿ, ಶ್ರೀರಾಮ್ ಭಟ್, ಹಾಗೂ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ. ಪಿ.ಕೆ.ಎಸ್. ಭಟ್ ಅವರನ್ನೊಳಗೊಂಡಂತೆ 11 ಜನರ ತಜ್ಞರ ಸಮಿತಿ ನೇಮಕ ಮಾಡಿತ್ತು.
ಸದರಿ ಸಮಿತಿಯು ಅಡಕೆ ಜಗಿಯುವುದು ಕ್ಯಾನ್ಸರ್‌ಕಾರಕ, ಗುಟ್ಕಾ, ಪಾನ್ ಪರಾಗ್, ಪಾನ್ ಮಸಾಲಾ ಆರೋಗ್ಯಕ್ಕೆ ಮಾರಕ ಹಾಗೂ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಭೂಮಿಗಳನ್ನು ಅಡಕೆ ತೋಟಗಳನ್ನಾಗಿ ಪರಿವರ್ತನೆ ಮಾಡಿರುವುದನ್ನು ತಡೆಗಟ್ಟುವ ಬಗ್ಗೆ ಹಾಗೂ ಹೊಸದಾಗಿ ಅಡಕೆ ತೋಟ ವಿಸ್ತರಣೆ ಮಾಡುವುದಕ್ಕೆ ನಬಾರ್ಡ್, ಸಹಕಾರಿ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಬಾರದೆಂದು ಹಾಗೂ ಇನ್ನಿತರ ಶಿಫಾರಸು ನೀಡಿದೆ ಎಂದರು.
ಅಪಪ್ರಚಾರ: ಈ ವರದಿಯೇ ಇಂದಿನ ಅಡಕೆ ಆತಂಕ, ಅನಿಶ್ಚಿತತೆ ಹಾಗೂ ಗೊಂದಲಗಳಿಗೆ ಮೂಲ ಕಾರಣವಾಗಿದೆ. ಹಾಗೂ ಅಡಕೆ ಬೆಳೆಗಾರರಿಗೆ ಮಾರಕವಾಗಿರುವ ಮೊದಲ ವರದಿಯಾಗಿದೆ. ಈ ವರದಿಯ ಅಂಶವನ್ನು ಅಡಕೆ ಬೆಳೆಗಾರರನ್ನು ಕತ್ತಲಲ್ಲಿ ಇಡುವ ಸಲುವಾಗಿ ಬಿಜೆಪಿ ನಾಯಕರು ಕೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅಡಕೆ ನೀಷೇಧ ಕುರಿತು ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಅಪಪ್ರಚಾರದ ಅಭಿಯಾನವನ್ನು ನಿರಂತರವಾಗಿ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಬಿಜಿಪಿ ನಾಯಕರ ಈ ಅಪಪ್ರಚಾರ ನಿರಾಧಾರವಾಗಿದ್ದು, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಪ್ರಮಾಣಪತ್ರವನ್ನು ಮೇಲ್ಕಂಡಂತೆ ಸುಪ್ರೀಂಕೋರ್ಟ್‌ಗೆ ಹಾಕಿರುವುದಿಲ್ಲ. ಅಲ್ಲದೆ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಯಾವುದೇ ಸ್ವಯಂಪ್ರೇರಿತ ವರದಿ ನೀಡಿಲ್ಲ.
ಗುಟ್ಕಾ ನೀಷೇಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ವರದಿಯೆಂದು ತಪ್ಪಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಪ್ರಮಾಣಪತ್ರ ಸಲ್ಲಿಸಿಲ್ಲ: ಅಂಕೂರ್ ಗುಟ್ಕಾ ಕಂಪೆನಿ ವಿರುದ್ಧ ಇಂಡಿಯನ್ ಅಸ್ತಮಾ ಕೇರ್ ಸೊಸೈಟಿ(2007) ಪ್ರಕರಣಕ್ಕೆ ಸಂಬಂಧಿಸಿದಂತೆ ಅಡಿಷನಲ್ ಸಾಲಿಸಿಟರ್ ಜನರಲ್ ಇಂದಿರಾ ಜಯಸಿಂಗ್ ಅವರು ಮೇಲ್ಕಂಡ ಸಮಿತಿಯ ವರದಿಯ ಅಂಶಗಳನ್ನು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು ಬಿಟ್ಟರೆ ಅಡಕೆ ನಿಷೇಧ ಕುರಿತು ಯಾವುದೇ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದರು.
ದ್ವಂದ್ವ ನೀತಿ: ಬಿಜೆಪಿ ಆಡಳಿತದ ಮಧ್ಯಪ್ರದೇಶ ಸೇರಿದಂತೆ ಸುಮಾರು 23 ರಾಜ್ಯಗಳಲ್ಲಿ ಗುಟ್ಕಾ ಕಂಪನಿ ನಿಷೇಧ ಮಾಡಿದಾಗ ಮೌನವಾಗಿದ್ದ ಬಿಜೆಪಿ ನಾಯಕರು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದಾಗ ಅಡಕೆ ಬೆಳೆಗಾರರು ನಾಶವಾಗುವರೆಂದು ಬೊಬ್ಬೆ ಹೊಡೆದಿದ್ದು ಹಾಸ್ಯಾಸ್ಪದ ಎಂದರು.
2002ರಲ್ಲಿ ಶಿವಮೊಗ್ಗದಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಅಂದಿನ ಕೇಂದ್ರ ಸಚಿವರಾದ ಜಾರ್ಜ್ ಫರ್ನಾಂಡೀಸ್ ಹಾಗೂ ಅನಂತಕುಮ್ ಅವರಿಗೆ ಅಡಕೆಯನ್ನು ಹಾನಿಕಾರಕ ಪದಾರ್ಥಗಳ ಪಟ್ಟಿಯಿಂದ ಕೈಬಿಡುವಂತೆ ಮಾಡಿದ ಮನವಿಗೆ ಎನ್‌ಡಿಎ ಸರ್ಕಾರ ಸ್ಪಂದಿಸಲಿಲ್ಲ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕರ್ನಾಟಕದ ಅನೇಕ ತಜ್ಞರು 2011ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚಿಸಿದ ಸಮಿತಿಯ ವರದಿಯ ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಡಕೆ ಹಾನಿಕಾರವಲ್ಲವೆಂಬ ಅಂಶವನ್ನು ಮನದಟ್ಟು ಮಾಡಿಕೊಡುವ ಬಗ್ಗೆ ಯಾವುದೇ ಒತ್ತಡ ತಂತ್ರ ಹೇರಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.