ಪತ್ರಕರ್ತರ ಆರೋಗ್ಯ ವಿಮೆ; ಇಂದು ತೀರ್ಮಾನ
ನರಸಿಂಹರಾಜಪುರ: ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮಾರ್ಚ್ 3 ರಂದು ಬೆಂಗಳೂರಿನಲ್ಲಿ ವಾರ್ತಾ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ರಾಜ್ಯ ಹಜ್, ಮೂಲ ಭೂತ ಸೌಕರ್ಯ, ವಾರ್ತಾ ಸಚಿವ ಆರ್.ರೋಷನ್ ಬೇಗ್ ಭರವಸೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಂಗಮಂದಿರದ ಟಿ.ಎಸ್.ರಾಮಚಂದ್ರರಾವ್ ವೇದಿಕೆಯಲ್ಲಿ ಭಾನುವಾರ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಂಘದ ಅಮೃತ ಮಹೋತ್ಸವ ಸಮಾರಂಭ, ತಾಲೂಕು ಪತ್ರಕರ್ತರ ಸಂಘ ನಿರ್ಮಿಸಿದ ನೂತನ ಪತ್ರಕರ್ತರ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜ ಒಗ್ಗೂಡಿಸಿ: ಪತ್ರಕರ್ತರ ಡೈರಿ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್, ಪತ್ರಕರ್ತರಾದವರು ಸುದ್ದಿಯ ಸತ್ಯಾಸತ್ಯತೆ ಶೋಧನೆ ಮಾಡಿ ಸುದ್ದಿ ಬರೆಯಬೇಕು. ವೈಯಕ್ತಿಕ ವಿಷಯಕ್ಕಿಂತ ಸಮಾಜದ ಸಮಸ್ಯೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟು ಸುದ್ದಿ ಬರೆಯಬೇಕು. ಪತ್ರಿಕೆಗಳಲ್ಲಿ ಬರುವ ಸುದ್ದಿಯು ಸಮಾಜವನ್ನು ಒಡೆಯುವಂತಾಗದೆ ಸಮಾಜವನ್ನು ಒಗ್ಗೂಡಿಸಬೇಕು ಎಂದರು.
ವೆಬ್ಸೈಟ್ ಬಿಡುಗಡೆ: ಜಿಲ್ಲಾ ಪತ್ರಕರ್ತರ ವೆಬ್ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆ ಮಾತನಾಡಿ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರವಿದ್ದು, ವರ್ಷಕ್ಕೆ ಕೇವಲ 5 ಕೋಟಿ ಅನುದಾನ ಮಾತ್ರ ಬರುತ್ತಿದೆ. ಇದರಿಂದ ಎಲ್ಲ ಕಡೆ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಪುರುಶೋತ್ತಮ ಉಪಸ್ಥಿತರಿದ್ದರು.
ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅದ್ಯಕ್ಷ ಟಿ.ಡಿ. ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಮಾಜಿ ಜಿಪಂ ಉಪಾಧ್ಯಕ್ಷ ಪಿ.ಜೆ. ಆಂಟೋನಿ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಜೈನ್, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ರುಕ್ಮಿಣಿ ಸುರೇಶ್ ಉಪಸ್ಥಿತರಿದ್ದರು.
ಕೊಪ್ಪ ಸಹಕಾರಿ ಸಾರಿಗೆ ಸಂಸ್ಥೆ ಅಧ್ಯಕ್ಷೆ ಧರ್ಮಪ್ಪ, ಮಾಗುಂಡಿ ಪ್ರೌಢಶಾಲೆಯ ಅಂತಾರಾಷ್ಚೀಯ ಕ್ರೀಡಾಪಟು ಕು.ಕೀರ್ತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳ ಹಿರಿಯ ಪತ್ರಕರ್ತರನ್ನು ಅಭಿನಂದಿಸಲಾಯಿತು. ಯಡಗೆರೆ ಮಂಜುನಾಥ್ ಸ್ವಾಗತಿಸಿದರು. ಅಭಿನವ ಗಿರಿರಾಜ್ ಕಾರ್ಯಕ್ರಮ ನಿರೂಪಿಸಿ, ಎನ್.ಎ. ಶೇಖಬ್ಬ ವಂದಿಸಿದರು.
ಸಂವಾದ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಅಡಿಕೆ ಹಳದಿ ಎಲೆ ರೋಗ ಹಾಗೂ ಒತ್ತುವರಿ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು. ಅಡಿಕೆಗೆ ಹಳದಿ ಎಲೆ ರೋಗ ಬಂದಿದ್ದು ಮಲೆನಾಡಿನ ಕುಟುಂಬಗಳು ಗುಳೇ ಹೋಗುತ್ತಿದ್ದಾರೆ. ಶಾಶ್ವತ ಪರಿಹಾರ ಮಾಡಿಸಿಕೊಡಿ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಕೃಷಿಕರು ಆಗ್ರಹಿಸಿದರು. ರೈತರ ಒತ್ತುವರಿ ಭೂಮಿ ಅರಣ್ಯ ಇಲಾಖೆಯು ತೆರವುಗೊಳಿಸುತ್ತಿದ್ದಾರೆ. ಈಗಿರುವ ಅರಣ್ಯ ಕಾಯ್ದೆ ಬಳಸಿ ನ್ಯಾಯಾಲಯವು ನೀಡುತ್ತಿರುವ ನಿರ್ದೇಶನವನ್ನು ಅರಣ್ಯಾಧಿಕಾರಿಗಳು ಪಾಲಿಸುತ್ತಿದ್ದಾರೆ. ಮುಖ್ಯವಾಗಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಕಾಪಾಡಬೇಕು ಎಂದು ಸಂವಾದದಲ್ಲಿ ಭಾಗವಹಿಸಿದ್ದ ರೈತರು ಆಗ್ರಹಿಸಿದರು.
ಸಂಸದ ಜಯಪ್ರಕಾಶ ಹೆಗಡೆ, ಶಾಸಕ ಡಿ.ಎನ್. ಜೀವರಾಜ್ ರೈತರೊಂದಿಗೆ ಸಂವಾದದಲ್ಲಿ ಭಾಗವಹಿಸಿ ರೈತರಿಗೆ ಉತ್ತರ ನೀಡಿದರು. ಶೆಟ್ಟಿಕೊಪ್ಪ ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

