ಚಿಕ್ಕಮಗಳೂರು

ತಂದೆಗೂ ಬೇಡವಾದ ನನಗೆ ಜನಸೇವೆ ಭಾಗ್ಯ ದಕ್ಕಿತು

Published On :

ಕ.ಪ್ರ.ವಾರ್ತೆ ್ಣ ಆಲ್ದೂರು ್ಣ ಮಾ. 4
ಸ್ತ್ರೀಶಕ್ತಿ ಸಂಘಟನೆಗಳು ಸ್ವಾಭಿಮಾನಿಗಳಾಗಬೇಕು. ಉಪಕಾರ ಸ್ಮರಣೆ ಮರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಹೇಳಿದರು.
ಬಿಜಾಪುರ ಮಹಿಳಾ ವಿಶ್ವವಿದ್ಯಾನಿಲಯ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ಮೋಟಮ್ಮ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ಹಿನ್ನೆಲೆಯಲ್ಲಿ ಆಲ್ದೂರಿನ ನಾಗರಿಕ ಸಮಿತಿ ಆಲ್ದೂರು ಅಬ್ಬಾಸಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ನಾಗರಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬಾಗಿನ ಅರ್ಪಿಸಿ, ಉಂಗುರ ತೊಡಿಸಿ ಸನ್ಮಾನ:  ಕಾಲೋನಿಯ ಬಡ ಕುಟುಂಬದಲ್ಲಿ ಜನಿಸಿದ ತಾನು ತಂದೆಗೂ ಬೇಡವಾದ 2ನೇ ಹೆಣ್ಣು ಮಗಳು. ಹೆಸರು ಇಲ್ಲದ ಮನೆಯಲ್ಲಿ ಕರೆಯುತ್ತಿದ್ದ ಮೋಟು ಎಂಬ ಪ್ರೀತಿಯ ಕರೆಯೇ ಶಾಲೆಯಲ್ಲಿ ಹೆಸರಾಗಿದೆ. ಮುಂದೆ ಛಲದಿಂದ ಎಂ.ಎ.ವರೆಗೂ ಓದಿದ್ದನ್ನು ಮೆಲುಕುಹಾಕಿದರು. ಮನೆಬಾಗಿಲಿಗೆ ಎಂ.ಎಲ್.ಎ. ಟಿಕೆಟ್ ಅನ್ನು ಡಿಬಿಸಿ ತಂದುಕೊಡುವ ಮೂಲಕ ಅನಾಯಾಸವಾಗಿ ರಾಜಕೀಯ ಪ್ರವೇಶಿಸಬೇಕಾಯಿತು. ಸೋಲು-ಗೆಲುವು ಸಮಾನವಾಗಿ ಕಂಡು ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಪರಿಯನ್ನು ಬಿಚ್ಚಿಟ್ಟ ಡಾ. ಮೋಟಮ್ಮ, ಜನಪ್ರೀತಿ ಅಭಿಮಾನ ತಂದಿದೆ. ಆಲ್ದೂರು ತವರು ಮನೆಯಂತೆ ಸದಾ ಬೆಂಬಲಿಸುತ್ತಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದ ಮೋಟಮ್ಮ ಅವರನ್ನು ಬಾಗಿನ ನೀಡಿ ಅರಿಶಿಣ- ಕುಂಕುಮ ಹಚ್ಚಿ ಉಂಗುರ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗೌರವ ತಂದಿದೆ:  ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ, ಸಮಾಜ ಸ್ತ್ರೀಶಕ್ತಿ ಗುರುತಿಸುವ ಕೆಲಸ ಮಾಡಬೇಕು. ಸಾಮರ್ಥ್ಯ ಹೊಂದಿರುವ ಮೋಟಮ್ಮ ಅವರನ್ನು ಮಂತ್ರಿಯಾಗಿಸಿ ಜಿಲ್ಲೆಯನ್ನೂ ಗೌರವಿಸಬೇಕು. ಮೀಸಲಾತಿ ಇಲ್ಲದ ಸಂದರ್ಭದಲ್ಲಿ ಇವರನ್ನು ಶಾಸಕಿಯಾಗಿಸಿದ ಕೀರ್ತಿ ಮೂಡಿಗೆರೆಗೆ ಸಲ್ಲುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಮಹಿಳೆಯರಲ್ಲಿ ಮೌನಕ್ರಾಂತಿಗೆ ಕಾರಣೀಭೂತರಾಗಿ ಸಮ್ಮೋಹನ ಮಾಡಿರುವ ಮೋಟಮ್ಮ ಅವರಿಗೆ ಮಹಿಳಾ ವಿ.ವಿ. ಡಾಕ್ಟರೇಟ್ ನೀಡುವ ಮೂಲಕ ಗೌರವ ಹೆಚ್ಚಿಸಿಕೊಂಡಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮೋಟಮ್ಮ ಮೂಡಿಗೆರೆಯ ಹೆಮ್ಮೆ ಮತ್ತು ಸ್ವಾಭಿಮಾನದ ಪ್ರತೀಕ. ಪರಿಶಿಷ್ಟ ಸಮೂಹದಲ್ಲಿ ಎಂ.ಎ. ಓದಿದ 2ನೇ ವ್ಯಕ್ತಿ. ಅನೇಕ ಪರಿಶಿಷ್ಟರಿಗೆ ಉನ್ನತ ಶಿಕ್ಷಣ ಪಡೆಯಲು ಆಸರೆ-ಸ್ಫೂರ್ತಿ ಎಂದು ಹೇಳಿದರು.
ಸಾಹಿತಿ ಬೆಳವಾಡಿ ಮಂಜುನಾಥ ಅಭಿನಂದನಾ ಭಾಷಣದಲ್ಲಿ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮೋಟಮ್ಮ ಮಾನ್ಯರಾಗಿದ್ದಾರೆ ಎಂದರು.
ಹಿರಿಯ ಕಾಫಿ ಬೆಳೆಗಾರ ಬಿ.ಬಿ. ರೇಣುಕಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಸವಿತಾ ರಮೇಶ್, ಆಲ್ದೂರು ಗ್ರಾಪಂ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಹೂವಮ್ಮ ಉಪಸ್ಥಿತರಿದ್ದರು. ನಾಗರಿಕ ಸಮಿತಿ ಅಧ್ಯಕ್ಷ ಸಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಚ್.ಎಲ್. ರವಿಕುಮಾರ ನಿರೂಪಿಸಿ, ಸಂಚಾಲಕ ನವರಾಜ್ ಸ್ವಾಗತಿಸಿ, ನಾರಾಯಣಾಚಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.