ಚಿಕ್ಕಮಗಳೂರು

ದೂಷಣೆ, ಘೋಷಣೆ ಬದಲು ಪೋಷಣೆ ಬೇಕು

Published On :

ಬಾಳೆಹೊನ್ನೂರು: ಸಾಹಿತಿಗಳು ಸಾಹಿತ್ಯದ ಸಿರಿದೇವಿಯಾಗಿ ಸಾರಸ್ವತ ಲೋಕದ ಸಂಸ್ಕೃತಿಯ ಅಮೃತವನ್ನು ಜನರಿಗೆ ಉಣಿಸಬೇಕು ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಕರೆ ನೀಡಿದ್ದಾರೆ.
 ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಕಲಾರಂಗ ಕ್ರೀಡಾಂಗಣದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮಹಾಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಆಶಯ ನುಡಿಯನ್ನಾಡಿದರು.
ಕೆಟ್ಟತನ ತೊಳೆಯಬೇಕು: ಧರ್ಮ, ಕಲೆ, ಸಾಹಿತ್ಯದ ಭಾವ ತ್ರಿವೇಣಿ ಸಂಗಮವೇ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿಯಲ್ಲಿ ಮಿಂದೆದ್ದು, ನಮ್ಮ ಒಳ ಮನಸ್ಸನ್ನು ತೊಳೆಯಬೇಕಿದೆ. ನಮಗೆ ಇಂದು ಮನಸ್ಸನ್ನು ತೊಳೆಯುವ ಗುರುಗಳು ಬೇಕಾಗಿದ್ದಾರೆ. ಸಾಹಿತಿಗಳು, ಬುದ್ಧಿಜೀವಿಗಳು, ಸಾಹಿತ್ಯದ ಅಭಿಮಾನಿಗಳು ನಮ್ಮಲ್ಲಿರುವ ಕೆಟ್ಟತನವನ್ನು ತೊಳೆಯಬೇಕು ಎಂದರು.
 ಮಾಧ್ಯಮಗಳು ಇಂದು ಕೆಟ್ಟ ಸುದ್ದಿಯನ್ನೇ ವೈಭವೀಕರಿಸಿ ಪ್ರಸರಿಸುತ್ತಿರುವುದು ವಿಷಾದನೀಯ. ಅದನ್ನು ಬಿಟ್ಟು ಉತ್ತಮ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದರು.
ಕನ್ನಡ ಇಂದು ಉಳಿಯುವುದು ದೂಷಣೆ, ಘೋಷಣೆ ಬದಲಾಗಿ ಅದರ ಪೋಷಣೆಯಿಂದ. ಕನ್ನಡ ಭಾಷೆಯು ಸುಡುವ ಕಿಡಿಯಾಗಿ, ಸಿಡಿಲಾಗಿ, ನಕ್ಷತ್ರ ಪುಂಜವಾಗಿ ಬೆಳೆದು ಅಮೃತಬಿಂದುವಾಗಬೇಕು. ಕನ್ನಡಿಗರು ಕಚ್ಚಾಟವನ್ನು ನಿಲ್ಲಿಸಿ ಒಟ್ಟಾಗಿ ಬಾಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ಭಾಷೆಯ ಬೆಳವಣಿಗೆ ಆಗುತ್ತಿಲ್ಲ. ಅವರಲ್ಲಿ ಇಚ್ಛಾಶಕ್ತಿ ಮೂಡಿದಾಗ ಭಾಷೆ ಬೆಳೆದು ಉಳಿಯಲು ಸಾಧ್ಯ ಎಂದ ಅವರು, ಲೋಕಸಭಾ ಚುನಾವಣೆ  ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ಮಾ. 7 ರಿಂದ ಕಡೂರಿನಲ್ಲಿ ನಡೆಯಬೇಕಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
 ಹರಿದಾಸ ಸಾಹಿತ್ಯ ಗಾಯಕ ಡಾ. ವಿದ್ಯಾಭೂಷಣ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಬಿ.ಸಿ. ಗೀತಾ, ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಜಯಮ್ಮ, ಬಿ. ಕಣಬೂರು ಗ್ರಾ.ಪಂ. ಅಧ್ಯಕ್ಷೆ ಶಾಹಿದಾ ಬಾನು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್. ರುದ್ರಪ್ಪಗೌಡ, ಜಿಲ್ಲಾ ಕಸಾಪದ ನೆ.ಲ. ಸುಬ್ರಹ್ಮಣ್ಯ, ಶೃಂಗೇರಿ ಸುಬ್ಬಣ್ಣ, ಎಸ್.ಎಸ್. ವೆಂಕಟೇಶ್, ಭಾಗ್ಯ ನಂಜುಂಡಸ್ವಾಮಿ, ಸುರೇಂದ್ರ ಮಾಸ್ತರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.