ಕನ್ನಡತನದಲಿ ಬದುಕುವ ಚಿಂತನೆ ಮೂಡಲಿ
ಬಾಳೆಹೊನ್ನೂರು: ರಾಜ್ಯಾದ್ಯಂತ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಭಾಷೆಯ ಕುರಿತು ಚಿಂತನ-ಮಂಥನ ನಡೆಯಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ ಹೇಳಿದ್ದಾರೆ.
ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇಲ್ಲಿನ ಕಲಾರಂಗ ಕ್ರೀಡಾಂಗಣದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮಹಾಮಂಟಪದ ಬಿ.ಎಸ್. ವಿಠಲ್ರಾವ್ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡಿಗರು ಇತರ ಭಾಷಾ ವ್ಯಾಮೋಹವನ್ನು ತೊರೆದು ಕನ್ನಡತನದಲ್ಲಿ ಬದುಕುವ ಚಿಂತನೆ ನಡೆಸಬೇಕು. ಕಾಲ ಬದಲಾದಂತೆ ನಾವು ಬದಲಾಗಬೇಕೆ ಹೊರತು ಈ ಹಿಂದಿನಿಂದ ನಡೆದುಬಂದ ಸಂಸ್ಕೃತಿ, ಸಂಸ್ಕಾರಗಳನ್ನು ಬದಲಾಗಿಸಬಾರದು.
ಕನ್ನಡದ ಹಲವು ಕೃತಿಗಳಿಗೆ ಮನಸ್ಸನ್ನು ಬದಲಾಯಿಸುವ ಅದ್ಭುತ ಶಕ್ತಿ ಇದ್ದು, ಕವಿ ಕಂಡ ಚಿಂತನೆಗಳು ಸಾತ್ವಿಕ ನೆಲೆಗಟ್ಟಿನಲ್ಲಿ ಎಲ್ಲರ ಮನೆ ಮನ ಮುಟ್ಟಬೇಕು. ಮಲೆನಾಡಿನ ಶಾಂತಮಯ ಪರಿಸರ ಅತ್ಯಂತ ಸುಂದರವಾಗಿದ್ದು, ಕನ್ನಡದ ಸತ್ವ, ಶಕ್ತಿ ಈ ಜಿಲ್ಲೆಯಲ್ಲಿ ಅಡಗಿದೆ ಎಂದು ಹೇಳಿದರು.
ಹೊಸಕ್ರಾಂತಿ: ಇಂದು ಕೆಲವು ಮಾಧ್ಯಮಗಳು ವಿಕೃತಿಯನ್ನೇ ಹೆಚ್ಚಾಗಿ ವಿಜೃಂಭಿಸಿ ಪ್ರಸರಿಸುತ್ತಿರುವುದು ವಿಷಾದನೀಯವಾಗಿದ್ದು, ಯುವಜನತೆ ಇಂತಹ ನಕಾರಾತ್ಮಕ ವಿಷಯವನ್ನು ಕೈಬಿಡಬೇಕು. ಇಂದಿನ ರಾಜಕೀಯ ವ್ಯವಸ್ಥೆ ಸಾಧಕರು, ಮಾಧ್ಯಮದವರನ್ನು ದೂರವಿಡುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರು ಮಾಧ್ಯಮವನ್ನು ಪ್ರವೇಶಿಸಿ ಹೊಸಕ್ರಾಂತಿ ಉಂಟು ಮಾಡಬೇಕು ಎಂದರು.
ಸಮ್ಮೇಳನದ ಅಧ್ಯಕ್ಷ ಡಾ. ವಿದ್ಯಾಭೂಷಣ್ ಮಾತನಾಡಿ, ಪ್ರತಿಯೊಂದು ಕನ್ನಡ ಸಮ್ಮೇಳನಗಳಲ್ಲೂ ಅತ್ಯಮೂಲ್ಯ ವಿಚಾರಗಳು ಚರ್ಚೆಯಾಗುತ್ತಲಿವೆ. ಇಲ್ಲಿ ಕೇಳುವ ವಿಚಾರಗಳನ್ನು ಸಭಿಕರು ಮೊದಲೇ ಅರಿತುಕೊಂಡು ಬಂದಿದ್ದರೆ ಸಾಹಿತ್ಯದ ಅಧ್ಯಯನ ಮಾಡಲು ಪೂರಕವಾಗುತ್ತದೆ.
ಸಾಹಿತ್ಯ ಸಮ್ಮೇಳನಗಳು ಪ್ರತಿಭೆಗಳನ್ನು ಗುರುತಿಸಲು, ಸೃಜನಶೀಲತೆ ಬೆಳೆಸಲು, ಚಿಂತಕರಾಗಿ ಪರಿವರ್ತನೆಯಾಗಲು ಹಾಗೂ ಯುವ ಕವಿಗಳ ಉದಯಕ್ಕೆ ಪೂರಕವಾಗಿದೆ ಎಂದ ಅವರು, ಸಾರ್ಥಕ ಸಾಹಿತ್ಯದ ಪೋಷಣೆಗೆ ಕಸಾಪ ಮುಂದಾಗುವಂತೆ ಕರೆ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಮಾತನಾಡಿ, ಈ ಭಾಗದ ಜನರ ಕಷ್ಟಕರ ಪರಿಸ್ಥಿತಿಯನ್ನು ಸಭೆಯಲ್ಲಿ ಮಂಡಿಸಿ ನಿರ್ಣಯಿಸಿದ್ದು, ಕೂಡಲೇ ಸರ್ಕಾರಕ್ಕೆ ಕಳುಹಿಸಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಲಾಗುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಬಿ.ಸಿ. ಗೀತಾ, ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ, ಕಾಫಿ ಬೆಳೆಗಾರ ಎಂ.ಕೆ. ಸುಂದರೇಶ್, ನಿವೃತ್ತ ಉಪ ಪ್ರಾಚಾರ್ಯ ಟಿ.ಆರ್. ನಾಗಪ್ಪಗೌಡ, ಹೋಬಳಿ ಕಸಾಪ ಅಧ್ಯಕ್ಷರಾದ ರಾ. ವೆಂಕಟೇಶ್, ಪಿ.ಸಿ. ಮ್ಯಾಥ್ಯೂ, ಜಿಲ್ಲಾ ಕಸಾಪದ ಗುರುವೇಶ್, ಎಸ್.ಎಸ್. ವೆಂಕಟೇಶ್, ನೆ.ಲ. ಸುಬ್ರಹ್ಮಣ್ಯ, ಎನ್.ಆರ್. ಪುರದ ಶಾಂತಕುಮಾರ್, ವೈ.ಎಸ್. ಸುಬ್ರಹ್ಮಣ್ಯ, ಗೋಪಾಲರಾವ್, ಶಿಕ್ಷಕರಾದ ಎಂ.ಪಿ. ಶ್ರೀನಿವಾಸ್, ಸೋಮೇಶ್, ರಚನ್ ಉಪಸ್ಥಿತರಿದ್ದರು.
ಕವಿ ಕರಗುಂದ ರಾಮಣ್ಣ ಅವರಿಗೆ ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇನ್ನುಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಬಿ.ವಿ. ದೀಪಕ್ ಭಟ್ (ಯುವ ಕೈಗಾರಿಕೋದ್ಯಮಿ), ನಿವೇದಿತಾ ಗಜೇಂದ್ರ (ಸಂಗೀತ), ಮಣಿಕಂಠ (ಕಲೆ), ರಾಮಕೃಷ್ಣ (ಕ್ರೀಡೆ), ಬಿ.ಎ. ನಾರಾಯಣ (ಕೃಷಿ) ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನದಲ್ಲಿ ಜಯಪುರದ ನುಡಿಚಿತ್ರ ಸಂಗ್ರಾಹಕ ಶಂ.ನ. ಶೇಷಗಿರಿ ಅವರಿಂದ ಸಮ್ಮೇಳನಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯದ ಕುರಿತು ವಿಶೇಷ ನುಡಿಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಜನಪದ ಸಾಹಿತ್ಯಕ್ಕೆ ವಿಶೇಷ ಕೊಡುಗೆ
ಜಾನಪದ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ ಹೆಮ್ಮೆ ನರಸಿಂಹರಾಜಪುರ ತಾಲೂಕಿಗೆ ಇದೆ ಎಂದು ಉಪನ್ಯಾಸಕ ಜೀರುಳ್ಳಿ ನಾಗೇಶ್ ಹೇಳಿದ್ದಾರೆ.
ಏಳನೇ ತಾಲೂಕು ಕ್ಚನ್ನಡ ಸ್ಚಾಹಿತ್ಯ ಸಮ್ಮೇಳನದ ಜಾನಪದ ಗ್ಚೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಾಲೂಕಿನ ಹಲವು ಕಲಾವಿದರು ಜಾನಪದ ಸಾಹಿತ್ಯ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಈ ಲೋಕಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅಂಟಿಕೆ ಪಿಂಟಿಕೆ, ಗೀಗಿ ಪದ, ಜಾನಪದ ಗಾಯನ, ನಾಟಕ ಸೇರಿದಂತೆ ಎಲ್ಲಾ ರಂಗಗಳಲ್ಲೂ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಹರಿಕಥಾ ದಾಸ ಜಾಳ್ಮರ ಸುಬ್ರಾವ್ ಮಾತನಾಡಿ, ದಾಸ ಸಾಹಿತ್ಯವು ಧರ್ಮ ಬೆಳೆವಣಿಗೆಗೆ ಪೂರಕವಾಗಿದ್ದು, ದಾಸ ಸಾಹಿತ್ಯ ಅಧ್ಯಯನದಿಂದ, ಆಲಿಕೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಸ್. ವೆಂಕಟೇಶ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ನುಡಿಚಿತ್ರ ಸಂಗ್ರಾಹಕ ಶಂ.ನ. ಶೇಷಗಿರಿ, ಗ್ರಾ.ಪಂ. ಉಪಾಧ್ಯಕ್ಷೆ ಹೂವಮ್ಮ, ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ವೈಶಾಲಿ ಕುಡ್ವಾ, ಮೇಲ್ಪಾಲ್ ಗ್ರಾ.ಪಂ. ಉಪಾಧ್ಯಕ್ಷ ಪ್ರಸನ್ನಾ ಜಿ. ಭಟ್, ಸತೀಶ್ ಅರಳಿಕೊಪ್ಪ, ಡಿ.ವಿ. ಕೇಶವಮೂರ್ತಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

