ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ
ನರಸಿಂಹರಾಜಪುರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಟ್ಟಣದ ಎಲ್ಲಾ ರಸ್ತೆಗಳು ಡಾಂಬರೀಕರಣ ಮತ್ತು ಕಾಂಕ್ರೀಟೀಕರಣ ಆಗಿರುವುದು ಪಟ್ಟಣದ ನಾಗರಿಕರಿಗೆ ಹರ್ಷ ತಂದಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಮಿನಿ ವಿಧಾನಸೌಧದಿಂದ ಬಸ್ತಿಮಠವರೆಗಿನ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಮಾತ್ರ ಆಮೆ ಗತಿಯಲ್ಲಿ ಮುಂದುವರಿಯುತ್ತಿರುವುದು ವಿಷಾದಕರ.
ಪಟ್ಟಣದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಬಿ.ಎಚ್. ಕೈಮರದಿಂದ- ಬಸ್ತಿಮಠದವರೆಗೆ ರಸ್ತೆ ಅಗಲೀಕರಣದ ಕಾಮಗಾರಿ ಕಳೆದ ಎರಡು ವರ್ಷದ ಹಿಂದೆ ಪ್ರಾರಂಭವಾಗಿತ್ತು. ಈಗ ಬಿ.ಎಚ್. ಕೈಮರದಿಂದ ಮಿನಿ ವಿಧಾನಸೌಧದವರೆಗೆ ಮಾತ್ರ ರಸ್ತೆ ಅಗಲೀಕರಣದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು ವಾಹನ ಸಂಚಾರರಿಗೆ ಖುಷಿ ಕೊಟ್ಟಿದೆ.
ಆದರೆ, ಮಿನಿ ವಿಧಾನಸೌಧದಿಂದ ಬಸ್ತಿಮಠದವರೆಗಿನ ಅಂದಾಜು ಅರ್ಧ ಕಿಮೀ ರಸ್ತೆಯ ಕಾಮಗಾರಿ ಮಾತ್ರ ಮುಗಿದಿಲ್ಲ. 6 ತಿಂಗಳ ಹಿಂದೆ ರಸ್ತೆಗೆ ಜಲ್ಲಿ ಹಾಕಲಾಗಿದೆ. ನಂತರ ಕಾಮಗಾರಿ ಪ್ರಾರಂಭಿಸಲೇ ಇಲ್ಲ. ರಸ್ತೆಯ ಒಂದು ಬದಿಯಲ್ಲಿ ಅಲ್ಲಲ್ಲಿ ಜಲ್ಲಿ ರಾಶಿ ಬಿದ್ದಿರುವುದರಿಂದ ವಾಹನವನ್ನು ಟಾರು ರಸ್ತೆಯಿಂದ ಕೆಳಗೆ ಇಳಿಸುವಂತಿಲ್ಲ. ಮತ್ತೊಂದು ಬದಿಯಲ್ಲಿ ಪಾದಚಾರಿಗಳು ಓಡಾಡುತ್ತಾರೆ. ಜತೆಗೆ ಈ ಭಾಗದಲ್ಲೇ 5 ಶಾಲೆಗಳು ಇದ್ದು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸಾವಿರಾರು ಶಾಲಾ ಮಕ್ಕಳು ಬೀದಿಗಿಳಿಯುತ್ತಾರೆ. ಆಗ ವಾಹನ ಸಂಚಾರರಿಗೆ ತೀವ್ರ ತೊಂದರೆಯುಂಟಾಗುತ್ತದೆ. ಹದಗೆಟ್ಟ ರಸ್ತೆಯಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಲೇ ಇವೆ.
ಕೂಡಲೇ ಸಂಬಂಧಪಟ್ಟವರು ಮಿನಿ ವಿಧಾನಸೌಧದಿಂದ ಬಸ್ತಿಮಠದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಬೇಕು.
ಟಿ ಎನ್.ಎ. ಶೇಖಬ್ಬ,
ಭವಾನಿ ಶಂಕರಬೀದಿ, ನರಸಿಂಹರಾಜಪುರ
ಗಾಂಧಿ ಮೈದಾನ ಸ್ವಚ್ಛತೆ ಕಾಪಾಡಿ
ಶೃಂಗೇರಿ ಪಟ್ಟಣದ ಗಾಂಧಿ ಮೈದಾನದ ಪರಿಸರ ತ್ಯಾಜ್ಯ ವಸ್ತುಗಳಿಂದ ಕೂಡಿದ್ದು, ಇಲ್ಲಿನ ಪರಿಸರ ಹಾಳಾಗಿದೆ. ಜನನಿಬಿಡ ಪ್ರದೇಶವಾಗಿರುವ ಇಲ್ಲಿ ದಿನನಿತ್ಯ ನೂರಾರು ವಾಹನ ನಿಲ್ಲುತ್ತವೆ. ಮೈದಾನ ಪ್ರದೇಶ ಕಸಕಡ್ಡಿ, ತ್ಯಾಜ್ಯದಿಂದ ಕೂಡಿದ್ದು, ನದಿ ದಡದಲ್ಲಿ ದುರ್ನಾತ ಬೀರುತ್ತಿದೆ. ಪರಿಸರ ಹಾಳಾಗಿರುವುದರ ಜೊತೆಗೆ ಈ ಪ್ರದೇಶದ ಸುತ್ತಮುತ್ತಲ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಪಾಸ್ಟಿಕ್ ವಸ್ತುಗಳನ್ನು ಹಾಗೂ ಅನಗತ್ಯ ತ್ಯಾಜ್ಯಗಳನ್ನು ಇಲ್ಲಿಯೇ ಸುರಿಯುತ್ತಾರೆ. ಇನ್ನು ಪ್ರವಾಸಿ ವಾಹನಗಳು,ಪ್ರವಾಸಿಗರಿಂದ ಸಾಕಷ್ಟು ಪರಿಸರ ಹಾಳಾಗುತ್ತಿದೆ. ಆದರೂ ಸ್ಥಳೀಯ ಆಡಳಿತ ಇಲ್ಲಿನ ಪರಿಸರ ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿದೆ. ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನಾದರೂ ಸಂಬಂಧ ಪಟ್ಟ ಸ್ಥಳೀಯ ಆಡಳಿತಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಇಲ್ಲಿನ ಪರಿಸರ ಸ್ವಚ್ಛತೆ ಕಾಪಾಡಬೇಕಿದೆ.
ಟಿ ಸುಬ್ರಮಣ್ಯ ಶೃಂಗೇರಿ
ಜಾನುವಾರು ಜಾತ್ರೆ ಮತ್ತೆ ಪ್ರಾರಂಭಿಸಲಿ
ತರೀಕೆರೆ ಪುರಸಭೆ ವತಿಯಿಂದ ಸುದೀರ್ಘ ಕಾಲದವರೆಗೆ ಸಂಭ್ರಮ ಮತ್ತು ವೈಭವದಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ದನ ಮತ್ತು ಜಾನುವಾರು ಜಾತ್ರೆ ಇದೀಗ ನಿಂತು ಹೋಗಿ ಹಲವು ವರ್ಷಗಳೇ ಸಂದು ಹೋಗಿದೆ. ಸುಗ್ಗಿ ಕಾಲ ಮುಗಿಯುತ್ತಿದ್ದಂತೆ ಪ್ರತಿವರ್ಷ ಪಟ್ಟಣದ ಸಮೀಪ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ತಾಲೂಕು ಮತ್ತು ರಾಜ್ಯಾದ್ಯಂತ ರೈತರು ತಂತಮ್ಮ ಜಾನುವಾರುಗಳೊಂದಿಗೆ, ಎತ್ತಿನ ಗಾಡಿ ಕಟ್ಟಿಕೊಂಡು ಸಂತೋಷದಿಂದ ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು.
ಜಾತ್ರೆಯಲ್ಲಿ ಜಾನುವಾರುಗಳ ಕೊಡುಕೊಳ್ಳುವಿಕೆಯಿಂದಾಗಿ ಲಕ್ಷಾಂತರ ರು. ವಹಿವಾಟು ಕೂಡ ನಡೆಯುತ್ತಿತ್ತು. ಜಾತ್ರೆಯಲ್ಲಿ ನಾಟಕ ಪ್ರದರ್ಶನ, ಕಲೆ ಮತ್ತು ಸಾಂಸ್ಕೃತಿಕ ಸಮಾರಂಭ ಯಶಸ್ವಿಯಾಗಿ ನಡೆಯುತ್ತಿತ್ತು.
ಜಾತ್ರೆಗಾಗಿ ಹಲವು ಅಂಗಡಿ ಮುಂಗಟ್ಟುಗಳು, ಫಲಹಾರ ಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುತ್ತಿತ್ತು. ತರೀಕೆರೆ ಮತ್ತು ಅಕ್ಕಪಕ್ಕದ ಊರುಗಳಿಂದ ಸಾರ್ವಜನಿಕರೂ ಭಾಗವಹಿಸುತ್ತಿದ್ದರು. ಪುರಸಭೆಗೂ ಒಳ್ಳೆಯ ಆದಾಯ ತಂದುಕೊಡುವುದರ ಸಂಗಡವೇ ಜಾನುವಾರು ಜಾತ್ರಾ ಕ್ಷೇತ್ರದಲ್ಲಿ ತರೀಕೆರೆ ಖ್ಯಾತಿ ಪಡೆದಿತ್ತು.
ಸ್ಥಳೀಯ ಪುರಸಭೆ ಆಸಕ್ತಿ ವಹಿಸಿ ತರೀಕೆರೆಯಲ್ಲಿ ಜಾನುವಾರು ಜಾತ್ರೆಯನ್ನು ಮತ್ತೆ ಪ್ರಾರಂಭಿಸುವುದರ ಮೂಲಕ ರೈತರನ್ನು ಪ್ರೋತ್ಸಾಹಿಸಲಿ.
ಟಿ ವಿನಾಯಕ, ತರೀಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

