ಮುನಿಯಪ್ಪ ಮತಬೇಟೆಗೆ ಹಾದಿ ಕಠಿಣ
ಟೇಕಲ್: ರಾಜ್ಯದ ಕಾಂಗ್ರೆಸ್‌ನಲ್ಲಿ ತನ್ನದೆ ಆದ ಸ್ಥಾನ ಸ್ಥಾಪಿಸಿಕೊಂಡು 6 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಜಯ ಕಷ್ಟಸಾಧ್ಯವಾಗಿದೆ.
ತಮ್ಮ ರಾಜಕೀಯ ಜೀವನದಲ್ಲಿ ಉತ್ತುಂಗ ಮಟ್ಟಕ್ಕೆ ಏರಿದ ಕೆ.ಎಚ್.ಮುನಿಯಪ್ಪ ಕೇಂದ್ರದಲ್ಲಿ ಸೋನಿಯಾ ಗಾಂಧಿಯವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಚುನಾವಣಾ ಕಣ ಘಟಾನುಘಟಿಗಳ ಸಮರಕ್ಕೆ ಸಜ್ಜಾಗಿರುವುದರಿಂದ ಮುನಿಯಪ್ಪ ಗೆಲವು ಸುಲಭದ್ದಾಗಿ ಉಳಿದಿಲ್ಲ.
ಜೆಡಿಎಸ್‌ನ ಭದ್ರ ಕೋಟೆ ಮಾಲೂರು ತಾಲೂಕಿನಲ್ಲಿ ಪಕ್ಷನಿಷ್ಠೆ ಬದಲಿಸಿ ಕೆ.ಎಚ್‌ಗೆ ಮತದಾರ ಒಲವು ತೋರುತ್ತಾನಾ ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮುಖಂಡರಿಗೆ ಮಣೆ ಹಾಕುವ ರಾಜಕೀಯ ತಂತ್ರಗಾರಿಕೆಗೆ ಇವರು ಹೆಸರಾಗಿದ್ದಾರೆ ಎಂಬ ಆರೋಪ ಮುನಿಯಪ್ಪ ಅವರ ಬೆನ್ನಿಗಿದೆ. ಅಲ್ಲದೆ ಚುನಾವಣೆ ಮುಗಿದ ನಂತರ ಜನರಿಗೆ ಸಂಪರ್ಕಕ್ಕೆ ಸಿಗುವುದೂ ಇಲ್ಲ, ಸಮಸ್ಯೆ ಆಲಿಸುವುದೂ ಇಲ್ಲವೆಂಬ ದೂರು ಕೂಡಾ ಮುನಿಯಪ್ಪ ಅವರ ಮತಗಳಿಕೆಯ ಮೇಲೆ ಪ್ರಭಾವ ಬೀರಲಿದೆ.
ಈ ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರನ್ನು ಇವರೇ ಪಕ್ಷಕ್ಕೆ ವೈಯಕ್ತಿಕವಾಗಿ ಬರ ಮಾಡಿಕೊಂಡು ಇದೀಗ ಅತಂತ್ರ ಸ್ಥಿತಿಗೆ ತಲುಪಿಸಿದ್ದಾರೆ. 15 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ತಾಲೂಕಿನಲ್ಲಿ ಎಸ್‌ಎನ್‌ಕೆ ಹಿಡಿತ ಗಟ್ಟಿಯಾಗಿತ್ತು. ಆದರೆ ಇದೀಗ ಕೃಷ್ಣಯ್ಯಶೆಟ್ಟಿ ಅವರು ಎರಡು ಮೂರು ದಿನಗಳಲ್ಲಿ ಆಪ್ತರ ಸಲಹೆ ಪಡೆದು ಮುಂದಿನ ರಾಜಕೀಯ ನಡೆ ತಿಳಿಸುವುದಾಗಿ ಹೇಳಿದ್ದಾರೆ.
ಮೊನ್ನೆಯಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚನ್ನಕೇಶವ ಅವರು ಹಾಗೂ ಅವರ ಬೆಂಬಲಿಗರು ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ಲೋಕಸಭಾ ಬಿಜೆಪಿಯ ಅಭ್ಯರ್ಥಿ ಎಂ. ನಾರಾಯಣಸ್ವಾಮಿಯವರೂ ತಮ್ಮ ಮತ ಪ್ರಚಾರವನ್ನು ಮಾಲೂರಿನ ಮಾರಿಕಾಂಬ ದೇವಾಲಯದಿಂದಲೆ ಪ್ರಾರಂಭಿಸಿದ್ದು ಇದು ನನಗೆ ಶುಭಘಳಿಗೆ ಎನ್ನುತ್ತಿದ್ದಾರೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ನಿರ್ವಹಿಸಿದ ಮಾಜಿ ಶಾಸಕ ಎ.ನಾಗರಾಜು ಈ ಬಾರಿ ಚುನಾವಣಾ ಸಭೆಗಳಲ್ಲಿ ಭಾಗವಹಿಸದೆ ಇರುವುದು ಕುತೂಹಲ ಮೂಡಿಸಿದೆ. ಮಾಲೂರು ತಾಲೂಕಿನವರೆ ಆದ ಜೆಡಿಎಸ್‌ನ ಕೆ.ಕೇಶವ ಅವರು ತವರು ತಾಲೂಕಿನಲ್ಲಿ ಉತ್ತಮ ಅಭಿಪ್ರಾಯವಿದೆ ಎನ್ನುತ್ತಿದ್ದಾರೆ. ಒಟ್ಟಾರೆ ಕೆ.ಎಚ್. ಮುನಿಯಪ್ಪನವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಕಗ್ಗಂಟಾಟಾಗಿ ಪರಿಣಮಿಸಿದ್ದು ಮುಂದಿನ ತಂತ್ರಗಾರಿಕೆಗೆ ವ್ಯೂಹ ರಚನೆ ಮಾಡುತ್ತಿದ್ದಾರೆ ಎಂದು ಹಿರಿಯ ಕಾರ್ಯಕರ್ತರು ತಿಳಿಸಿದ್ದಾರೆ.
ಟೇಕಲ್ ಲಕ್ಷ್ಮೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

