ಅಭ್ಯರ್ಥಿಗಳೇ, ಖರ್ಚಿನ ಲೆಕ್ಕ ಪಕ್ಕಾ ಕೊಡಿ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಒಂದು ನಾನ್ ವೆಜ್ ಊಟ 100, ವೆಜ್ ಊಟ 35, ಉಪಹಾರ- 20, 1 ಲೀಟರ್ ನೀರು 13, ಹೂವಿನ ಹಾರ 50, ಬೇರೆ ರೀತಿಯ ಹಾರ 100, ಒಂದು ಧ್ವಜ 10, ಶಾಲು 20, ಹ್ಯಾಲೋಜಿನ್ ಲೈಟು 150, ಟ್ಯೂಬ್ ಲೈಟು 20...
ಇದೇನಿದು ಲೆಕ್ಕಾಚಾರ ಅಂದುಕೊಂಡಿರಾ? ಚುನಾವಣಾ ಆಯೋಗವು ಪ್ರಚಾರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ವೆಚ್ಚ ಲೆಕ್ಕ ಹಾಕಲು ನಿಗದಿಪಡಿಸಿರುವ ದರವಿದು.
ಒಬ್ಬ ಅಭ್ಯರ್ಥಿ ಲೋಕಸಭೆ ಚುನಾವಣೆಗೆ ನಿಗದಿಪಡಿಸಿರುವ ಗರಿಷ್ಠ ವೆಚ್ಚ 70 ಲಕ್ಷ. ಅಭ್ಯರ್ಥಿ ಎಷ್ಟು ಖರ್ಚು ಮಾಡುತ್ತಾರೆಂದು ಲೆಕ್ಕ ಹಾಕಲು ಒಂದು ದರ ಪಟ್ಟಿಯನ್ನು ಪ್ರತಿ ಜಿಲ್ಲಾ ಚುನಾವಣಾಧಿಕಾರಿಗಳು ನಿಗದಿ ಮಾಡಿ ರಾಜಕೀಯ ಪಕ್ಷಗಳಿಗೆ ಕೊಟ್ಟಿದ್ದಾರೆ. ಅಭ್ಯರ್ಥಿ ಹಾಗೂ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಬಳಸುವ ಸುಮಾರು 29 ವಿವಿಧ ಪರಿಕರಗಳು ಹಾಗೂ ಸೌಲಭ್ಯಗಳನ್ನು ಗುರುತು ಮಾಡಿ ಅವುಗಳ ದರ ನಿಗದಿ ಮಾಡಲಾಗಿದೆ. ಈ ಎಲ್ಲಾ ಲೆಕ್ಕಾಚಾರ ಮನಸಿನಲ್ಲಿಟ್ಟುಕೊಂಡು ಅಭ್ಯರ್ಥಿಗಳು ಖರ್ಚು ಮಾಡಬೇಕಿದೆ. ಈ ದರವು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಬದಲಾಗುತ್ತದೆ. ಸಾಮಾನ್ಯ ದರಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ.
ಹೀಗಿದೆ ಪಟ್ಟಿ: ಚುನಾವಣಾ ಆಯೋಗ ನಿಗದಿಪಡಿಸಿರುವ ದರವು ಚಾಲ್ತಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ. ರಾಜಕೀಯ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಪರಿಕರ ಬಳಸುವುದರಿಂದ ವಿವಿಧ ಹಂತದ ದರಗಳನ್ನೂ ನಿಷ್ಕರ್ಷಿಸಲಾಗಿದೆ. ಹೋಟೆಲ್ ರೂಂಗಳನ್ನು ಬುಕ್ ಮಾಡಿದರೆ ಅದಕ್ಕೂ ದರ ನಿಗದಿಯಾಗಿದೆ.
ಪಕ್ಷಗಳ ತಲೆಬಿಸಿ: ಒಬ್ಬ ಅಭ್ಯರ್ಥಿ ಬೃಹತ್ ವೇದಿಕೆ ನಿರ್ಮಿಸಿ, ದೊಡ್ಡ- ದೊಡ್ಡ ಧ್ವನಿವರ್ಧಕ ಬಳಸಿ, 10 ಸಾವಿರ ಜನರಿಗೆ ವೆಜ್ ಮತ್ತು ನಾನ್ ವೆಚ್ ಊಟ ಹಾಕಿಸಿ, ಕ್ಷೇತ್ರಾದ್ಯಂತ 100 ಫ್ಲೆಕ್ಸ್ ಹಾಕಿ, ಅತಿಥಿಗಳಿಗಾಗಿ ವಸತಿ ಗೃಹಗಳಲ್ಲಿ 10 ರೂಂ ಬುಕ್ ಮಾಡಿ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು 100 ಬಸ್ ಮಾಡಿದರೆ ಶೇ. 50ರಷ್ಟು ಖರ್ಚು ಆದಂತೆಯೇ. ಇದೇ ರೀತಿಯ ಇನ್ನೊಂದು ಕಾರ್ಯಕ್ರಮ ಮಾಡಿದರೆ ಸಂಪೂರ್ಣ ವೆಚ್ಚವೇ ಮುಗಿದು ಹೋಗುತ್ತದೆ. ಅದರ ಜತೆಗೆ ಸಣ್ಣ- ಪುಟ್ಟ ಪರಿಕರಗಳಿಗೂ ಲೆಕ್ಕ ಹಾಕುವುದು ರಾಜಕೀಯ ಪಕ್ಷಗಳಿಗೆ ದೊಡ್ಡ ತಲೆಬಿಸಿಯಾಗುತ್ತದೆ.
ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಪಕ್ಷದ ಮುಖಂಡರು ಕೈಗೊಳ್ಳುವ ಯಾವುದೇ ಕೆಲಸವನ್ನು ಚುನಾವಣಾ ಕೆಲಸವೆಂದೇ ಪರಿಗಣಿಸುವುದಾಗಿ ಆಯೋಗವು ಹೇಳಿರುವುದರಿಂದ ತಲೆಬಿಸಿ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ ರಾಜಕೀಯ ಪಕ್ಷಗಳು ಒಬ್ಬ ಅಭ್ಯರ್ಥಿಯನ್ನೇ ಇಟ್ಟುಕೊಂಡು ಬೃಹತ್ ಸಮಾವೇಶ ಮಾಡಲು ಹೋಗುವುದಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿದರೆ ಬಹುತೇಕ ವೆಚ್ಚ ಆಯಾ ರಾಜಕೀಯ ಪಕ್ಷದ ಲೆಕ್ಕಕ್ಕೆ ಸೇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

