ಮಾಹಿತಿ ನೀಡದ ಕಾಫಿ ಮಂಡಳಿ: ಬೆಳೆಗಾರರಿಗೆ ನಷ್ಟ
ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಉತ್ಪಾದನೆ ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಕುಸಿತವಾಗುವುದು ಎಂಬ ಮಾಹಿತಿಯನ್ನು ಅಂತಾರಾಷ್ಟ್ರೀಯ ಕಾಫಿ ಸಂಘಟನೆ ಮೊದಲೇ ನೀಡಿದ್ದರೂ ಆ ಬಗ್ಗೆ ಕಾಫಿ ಮಂಡಳಿಯಾಗಲಿ, ಬೆಳೆಗಾರರ ಸಂಘಟನೆಗಳಾಗಲಿ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ಆಲ್ದೂರು ಹೋಬಳಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಗುಡ್ಡದೂರು ಬೋಜೇಗೌಡ ಆರೋಪಿಸಿದ್ದಾರೆ.
2013- 14 ನೇ ಸಾಲಿನಲ್ಲಿ ಬ್ರೆಜಿಲ್, ಇಂಡೋನೇಷಿಯಾ ಹಾಗೂ ಅಮೇರಿಕಾದ ಕಾಫಿ ಉತ್ಪಾದನಾ ಪ್ರದೇಶದಲ್ಲಿ ಕಾಫಿಗೆ ಮಾರಕ ರೋಗ ತಾಗಿದ್ದು, ಈ ಹಿನ್ನೆಲೆಯಲ್ಲಿ ಕಾಫಿ ಇಳುವರಿ ಗರಿಷ್ಠ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯನ್ನು ನವೆಂಬರ್ ತಿಂಗಳಿನಲ್ಲಿ ಐಸಿಒ ತಿಳಿಸಿದ್ದು, ಈ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟವರು ವಿಫಲರಾದರೆಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಬ್ರೆಜಿಲ್ ಪ್ರವಾಸ ಕೈಗೊಂಡ ಬೆಳೆಗಾರರ ಸಂಘಟನೆಯ ಉತ್ಸಾಹಿ ಬೆಳೆಗಾರರು ಸಭೆ, ಸಮಾರಂಭ ಹಾಗೂ ಖಾಸಗಿಯಾಗಿ ಈ ಬಾರಿ ಬ್ರೆಜಿಲ್ ಮತ್ತಿತರರ ಕಾಫಿ ಉತ್ಪಾದಕ ರಾಷ್ಟ್ರಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾಫಿ ಉತ್ಪಾದನೆಯಾಗಲಿದು,್ದ ದರ ಕನಿಷ್ಠ ಪ್ರಮಾಣಕ್ಕೆ ಕುಸಿಯಲಿದೆ. ಈ ಕಾರಣಕ್ಕಾಗಿ ಬೆಳೆಗಾರರು ಅದಷ್ಟು ಬೇಗ ಕಾಫಿ ಮಾರಾಟ ಮಾಡಬೇಕೆಂದು ಪದೇ ಪದೇ ಹೇಳಿಕೆ ನೀಡಿದ ಪರಿಣಾಮ ಆತಂಕಗೊಂಡ ಶೇ. 80 ರಷ್ಟು ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಪ್ರತಿ ಚೀಲಕ್ಕೆ 6 ರಿಂದ 7 ಸಾವಿರ ದರದಲ್ಲಿ ಮಾರಾಟ ಮಾಡಿದ್ದು ಇದರಿಂದ ಭಾರಿ ನಷ್ಟ ಅನುಭವಿಸುವಂತಾಗಿದ್ದು, ಇದಕ್ಕೆ ಇಂತಹ ತಪ್ಪು ಮಾಹಿತಿ ನೀಡಿದ ಮುಖಂಡರು ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ಪಾದನೆ ಕುಸಿತ: ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಕಾಫಿ ಉತ್ಪಾದನೆ ದೇಶದಲ್ಲಿ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಈ ಅಲ್ಪ ಪ್ರಮಾಣದ ಕಾಫಿಯನ್ನು ಕನಿಷ್ಠ ಬೆಲೆಗೆ ಮಾರಿರುವ ಸಣ್ಣ ಮತ್ತು ಮಧ್ಯಮ ಬೆಳೆಗಾರರು ಸಂಕಷ್ಟಕ್ಕೆ ಸಿಕ್ಕಿದ್ದಾರೆ ಎಂದು ದೂರಿದ್ದಾರೆ.
ಕಾಫಿ ಮಂಡಳಿ ಹೊಣೆ: ಕಾಫಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮ ಹಾಗೂ ಹಳ್ಳಿ ಹಬ್ಬದಂತಹ ಕಾರ್ಯಕ್ರಮಗಳಲ್ಲಿ ಐಸಿಒ ನೀಡಿದ್ದ ಕಾಫಿ ಉತ್ಪಾದನೆ ಕುಸಿತದ ಸೂಚನೆಯ ಬಗ್ಗೆ ಬೆಳೆಗಾರರಿಗೆ ಖಚಿತ ಮಾಹಿತಿ ನೀಡುವಂತೆ ಕಾಫಿ ಮಂಡಳಿಯ ಅಧ್ಯಕ್ಷರಿಗೆ ಮನವಿ ಮಾಡಿದ್ದರೂ ಅವರು ಈ ಬಗ್ಗೆ ಮಾಹಿತಿ ನೀಡದೇ ನುಣುಚಿಕೊಂಡ ಪರಿಣಾಮ ಇಂತಹ ಪರಿಸ್ಥಿತಿ ಬೆಳೆಗಾರರಿಗೆ ಎದುರಾಗಿದೆ. ಇದರ ಹೊಣೆಯನ್ನು ಕಾಫಿ ಮಂಡಳಿ ಹೊರಬೇಕು.
ಪ್ರತಿ ಚೀಲಕ್ಕೆ 6 ರಿಂದ 7 ಸಾವಿರ ಕಳೆದುಕೊಂಡಿರುವ ಕಾಫಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಇವರನ್ನು ಸಾಲ ಮುಕ್ತರನ್ನಾಗಿಸಲು ಬೆಳೆಗಾರರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಾಗೃತಿ ಮೂಡಿಸಿಲ್ಲ: ಕಾಫಿ ಮಂಡಳಿ ದೇಶೀಯ ಮಾರುಕಟ್ಟೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಕಾಫಿ ಗಿಡಗಳಿಗೆ ತಗುಲುತ್ತಿರುವ ರೋಗ ನಿರಂತರವಾಗಿ ಉಲ್ಬಣಿಸುತ್ತಿದ್ದರೂ ಅದನ್ನು ಹತೋಟಿ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ.
ಜತೆಗೆ ಅಂತಾರಾಷ್ಟ್ರೀಯ ಕಾಫಿ ಉತ್ಪಾದನೆ ಅರಿತು ಬೆಲೆಯ ಏರಿಳಿತಗಳ ಬಗ್ಗೆ ಬೆಳೆಗಾರರಿಗೆ ಜಾಗೃತಿ ಮೂಡಿಸುವಲ್ಲೂ ವಿಫಲವಾಗಿದೆ. ಇದಕ್ಕೆಲ್ಲಾ ಕಾರಣ ಮಂಡಳಿಯ ಅಧ್ಯಕ್ಷರು ಬೆಳೆಗಾರರಲ್ಲದಿರುವುದು, ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಗೆ ಬೆಳೆಗಾರರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

