ಬಿ ಫಾರಂ ಸಹಿತ ಬಂಡಾರಿ ನಾಮಪತ್ರ ಸಲ್ಲಿಕೆ
ಶಿವಮೊಗ್ಗ: ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಶುಕ್ರವಾರ ಮತ್ತೊಮ್ಮೆ ಎ ಮತ್ತು ಬಿ ಫಾರಂ ಸಹಿತ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅದ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಬಲ್ಕಿಷ್ ಭಾನು, ಕಾನೂನು ಸಲಹೆಗಾರ ಪ್ರವೀಣ್ ಕುಮಾರ್ ಜತೆಗಿದ್ದರು. ಇವರು ಸಹಾಯಕ ಚುನಾವಣಾಧಿಕಾರಿ ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ಅವರು ಒಂದೆರಡು ದಿನದಲ್ಲಿ ಎಲ್ಲಾ ಭಿನ್ನಮತ ಮರೆತು ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಅಶೋಕ್ ಮೂರ್ತಿ ಬಿಜೆಪಿ ಸೇರ್ಪಡೆ
ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬೆಜ್ಜವಳ್ಳಿ ಅಶೋಕ್ ಮೂರ್ತಿ ಅವರು ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶುಕ್ರವಾರ ಕೋಣಂದೂರಿನಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು. ಇದೇ ವೇಳೆ ಬೆಜ್ಜವಳ್ಳಿ ಗ್ರಾ.ಪಂ. ಅಧ್ಯಕ್ಷ ಜಯಂತ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಗದೀಶ್, ಎಪಿಎಂಸಿ ಮಾಜಿ ಸದಸ್ಯ ಹೆದ್ದೂರು ರಾಮಕೃಷ್ಣ, ರೈತ ಮುಖಂಡರಾದ ವಾಸಣ್ಣಗೌಡ ಹಾಗೂ ನೂರಾರು ಬೆಂಬಲಿಗರು ಸಹ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಾಲೆಕೊಪ್ಪ ರಾಮಚಂದ್ರ, ಜಿಲ್ಲಾ ಬಿಜೆಪಿ ಮುಖಂಡರಾದ ಕೆ.ಪಿ. ಪುರುಷೋತ್ತಮ, ತೀರ್ಥಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಬಿ. ಈಶ್ವರ್, ಬಿಜೆಪಿ ತಾಲೂಕು ಅಧ್ಯಕ್ಷ ಚಕ್ಕೋಡುಬೈಲು ರಾಘವೇಂದ್ರ, ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯರಾದ ಹೆಚ್.ಆರ್. ವೆಂಕಟೇಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮೋಹನ್ ಹಾಗೂ ಹಲವರು ಉಪಸ್ಥಿತರಿದ್ದರು.
ಆಮ್ ಆದ್ಮಿ ಪಕ್ಷದಿಂದ ವಂತಿಕೆ ಸಂಗ್ರಹ...
ಸಾಗರ: ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುವ ಕೆ.ಜಿ. ಶ್ರೀಧರ್ ಕಲ್ಲಹಳ್ಳ ಮಾ. 22ರಂದು ನಾಮಪತ್ರ ಸಲ್ಲಿಸಲಿದ್ದು, ಇದಕ್ಕೆ ಅಗತ್ಯವಾದ ಠೇವಣಿ ಹಣವನ್ನು ಶುಕ್ರವಾರ ಪಕ್ಷದ ಸಾಗರ ಘಟಕದ ವತಿಯಿಂದ ಸಾಗರ್ ಹೋಟೆಲ್ ವೃತ್ತದಲ್ಲಿ ಸಾರ್ವಜನಿಕರಿಂದ ವಂತಿಗೆ ರೂಪದಲ್ಲಿ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ತಾಲೂಕು ಘಟಕದ ಸಂಚಾಲಕ ಎನ್.ಡಿ. ವಸಂತಕುಮಾರ್, ದೇಶವನ್ನು ಭ್ರಷ್ಟಾಚಾರಮುಕ್ತಗೊಳಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಯತ್ನಿಸುತ್ತಿದ್ದಾರೆ. ಸಭ್ಯರು ಹಾಗೂ ಪ್ರಾಮಾಣಿಕರು, ರಾಜಕೀಯ ಅಧಿಕಾರದ ಮೂಲಕ ಜನಸೇವೆ ಮಾಡುವ ಮನಸ್ಸಿದ್ದವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿದೆ. ರಾಜಕೀಯ ಧೃವೀಕರಣದ ಈ ಹೊತ್ತಿನಲ್ಲಿ ಮತದಾರರು ಕೈಬಾಯಿ ಶುದ್ಧವಾಗಿರಿಸಿಕೊಂಡವರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಉಳಿಸಬೇಕು ಎಂದು ಹೇಳಿದರು. ಪಕ್ಷದ ಮುಖಂಡ ಅಮೃತ ರಾಸ್ ಮಾತನಾಡಿ, ಶ್ರೀಧರ್ ಕಲ್ಲಹಳ್ಳ ಅವರು ಅನೇಕ ವರ್ಷದಿಂದ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡ ಜನಪರ ಕಾಳಜಿ ಇರಿಸಿಕೊಂಡ ವ್ಯಕ್ತಿ. ಇಂತಹ ಅಭ್ಯರ್ಥಿಯನ್ನು ಚುನಾಯಿಸುವುದರಿಂದ ರಾಜಕೀಯದ ಮೌಲ್ಯ ಉಳಿಯುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

