ಕೇಸ್ ಹಿಂಪಡೆಯಲು ಹಿಂದೂಪರ ಸಂಘಟನೆಗಳ ಆಗ್ರಹ
ಕ.ಪ್ರ.ವಾರ್ತೆ, ಶೃಂಗೇರಿ, ಮೇ 3
ತನಿಕೋಡು ಚೆಕ್ಪೋಸ್ಟ್ನಲ್ಲಿ ನಡೆದ ಕಬೀರ್ ಶೂಟೌಟ್ ಪ್ರಕರಣದಲ್ಲಿ ಎಎನ್ಎಫ್ ಸಿಬ್ಬಂದಿ ನವೀನ್ನಾಯಕ್ ವಿರುದ್ಧ ದಾಖಲಾಗಿರುವ ಕೊಲೆ ಮೊಕದ್ದಮೆ ಹಾಗೂ ಪಟ್ಟಣದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೊಲೆ ಪ್ರಯತ್ನ ದಾಖಲಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ಬಿಜೆಪಿ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ನೂತನ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಲಾಯಿತು. ಮೆರವಣಿಗೆಯು ಸಂತೆ ಮಾರುಕಟ್ಟೆ ಸಭಾಂಗಣದಲ್ಲಿ ಸಮಾವೇಶಗೊಂಡಿತು.
ಶಾಸಕ ಡಿ.ಎನ್. ಜೀವರಾಜ್ ಈ ಸಂದರ್ಭ ಮಾತನಾಡಿ, ಸರ್ಕಾರದ ಮಂತ್ರಿಗಳು, ಶಾಸಕರೊಬ್ಬರು ಗೋಕಳ್ಳರ ಬೆಂಬಲವಾಗಿ ನಿಂತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ವಾಹನದ ಚಾಲಕನಿಗೆ ಸುಳ್ಳು ಹೇಳುವಂತೆ ಶಾಸಕರೊಬ್ಬರು ಒತ್ತಡ ಹೇರಿದ್ದಾರೆ. ಪೊಲೀಸರು ಅವರ ವಿರುದ್ಧ ಸುಳ್ಳು ಹೇಳಿಕೆ, ಬೆದರಿಕೆ ಪ್ರಕರಣ ದಾಖಲಿಸಬೇಕು. ಅವರನ್ನು ತನಿಖೆಗೆ ಒಳಪಡಿಸಬೇಕು ಎಂದರು.
ಎಎನ್ಎಫ್ ಸಿಬ್ಬಂದಿ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಆತನಿಗೆ ಗೋಕಳ್ಳರ ಬಗ್ಗೆ ಮಾಹಿತಿ ಇರಲಿಲ್ಲ. ನಿಷೇಧಿತ ಪ್ರದೇಶದಲ್ಲಿ ಎಎನ್ಎಫ್ ಪಡೆ ಇರುವುದು ಸಹಜ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕೊಲೆ ಪ್ರಕರಣ ದಾಖಲಿಸಿ ಸಿಬ್ಬಂದಿಯನ್ನು ಜೈಲಿಗೆ ಹಾಕಿರುವುದು ಸರಿಯಲ್ಲ ಎಂದರು.
ಪೊಲೀಸರು ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಇದರ ಅವಶ್ಯಕತೆ ಇಲ್ಲ. ಪೊಲೀಸರಾಗಿ ಒಬ್ಬ ಅನ್ಯಾಯಕ್ಕೆ ಒಳಗಾದ ಪೊಲೀಸ್ ಸಿಬ್ಬಂದಿಗೆ ನ್ಯಾಯಕೊಡಿಸಬೇಕು. ಚೆನ್ನೈ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬೆಂಗಳೂರಿನ ಅಮಾಯಕ ಯುವತಿ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವ ಸರ್ಕಾರ ಒಬ್ಬ ದನಕಳ್ಳನಿಗೆ 10 ಲಕ್ಷ ಪರಿಹಾರ ನೀಡುತ್ತಿದೆಯೆಂದರೆ, ನಮ್ಮ ಸರ್ಕಾರ, ವ್ಯವಸ್ಥೆ ಯಾವ ಪರಿಸ್ಥಿತಿಗೆ ತಲುಪಿದೆ ಎಂದು ಚಿಂತಿಸಬೇಕಿದೆ ಎಂದರು.
ಬಜರಂಗದಳ ಮಂಗಳೂರು ವಿಭಾಗದ ಶರಣ ಪಂಪವೇಲ್ ಮಾತನಾಡಿ, ರಾಜ್ಯ ಸರ್ಕಾರ ಒತ್ತಡಕ್ಕೆ ಸಿಲುಕಿದೆ. ಕಬೀರ್ ದೇಶದ್ರೋಹಿ. ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ಮೇಲಿರುವ ಕೊಲೆ ಪ್ರಕರಣ, ಸಂಘ ಪರಿವಾರದ ಕಾರ್ಯಕರ್ತರ ಮೇಲೆ ದಾಖಲಿಸಿರುವ ಕೊಲೆ ಪ್ರಯತ್ನ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ನ ಶ್ರೀಕಾಂತ್ ಮಾತನಾಡಿದರು. ಹಿಂದೂ ಜಾಗರಣ ವೇದಿಕೆ ರಾಜ್ಯ ಸಹಸಂಚಾಲಕ ಸತ್ಯಜಿತ್ ಸುರತ್ಕಲ್, ವಿಶ್ವ ಹಿಂದೂ
ಪರಿಷತ್ನ ರಾಘವೇಂದ್ರ, ಬಜರಂಗದಳದ ಸುನೀಲ್ ಶೆಟ್ಟಿ, ರಾಜ್ಗೋಪಾಲ್ ಸೇರಿದಂತೆ ಪಕ್ಷದ ಮುಖಂಡರು, ಹಿಂದೂ ಪರ ಸಂಘಟನೆಗಳ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

