ಚಿಕ್ಕಮಗಳೂರು

ತಡೆಗೋಡೆಯಿಲ್ಲದ ಕೆರೆ, ಅಪಾಯಕ್ಕೆ ಆಹ್ವಾನ

Published On :

ಕನ್ನಡಪ್ರಭ ವಾರ್ತೆ, ಶೃಂಗೇರಿ, ಮೇ4: ಪಟ್ಟಣದ ಹೊರವಲಯದಲ್ಲಿರುವ ಮಂಗಳೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚೌಡೇಶ್ವರಿ ದೇವಾಲಯ ಸಮೀಪದಲ್ಲಿರುವ ತಡೆಗೋಡೆಯಿಲ್ಲದ ಕೆರೆಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಅತಿ ಪುರಾತನವಾಗಿರುವ ಈ ಕೆರೆಯ ದಡದಲ್ಲಿರುವ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ಕೆರೆಯ ದಡದುದ್ದಕ್ಕೂ ತಡೆಗೋಡೆಯೇ ಇರುವುದಿಲ್ಲ. ನಿಯಂತ್ರಣ ತಪ್ಪಿದರೆ ಇಲ್ಲಿ ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸಬಹುದು.
ರಸ್ತೆಯ ಒಂದು ಬದಿಯಲ್ಲಿ ಕೆರೆ, ಇನ್ನೊಂದು ಬದಿಯಲ್ಲಿ ಗುಡ್ಡವಿದೆ. ರಸ್ತೆ ಅಪಾಯಕಾರಿ ತಿರುವುಗಳಿಂದ ಕೂಡಿದ್ದು, ಇಲ್ಲಿ ಸಾಕಷ್ಟು ಸರಣಿ ಅಪಘಾತಗಳು ಸಂಭವಿಸಿ ಇದೊಂದು ಅಪಾಯಕಾರಿ ವಲಯವಾಗಿ ಪರಿಣಮಿಸಿದೆ. ಕೆರೆಯ ಹೂಳೆತ್ತೆದೆ ಬಹಳ ವರ್ಷಗಳೇ ಕಳೆದಿವೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಬಿಡುವೇ ಇಲ್ಲ. ಮಳೆಗಾಲದಲ್ಲಿ ಈ ಕೆರೆಯು ತುಂಬಿರುವುದರಿಂದ ಇನ್ನಷ್ಟು ಅಪಾಯ. ಪಟ್ಟಣದ ಹೊರವಲಯದಲ್ಲಿದ್ದರೂ ಇದು ಜನನಬಿಡ ಪ್ರದೇಶವಾಗಿದೆ.
ಸಮೀಪದಲ್ಲಿಯೇ ತಾಲೂಕು ಕಚೇರಿ ಕಟ್ಟಡ, ನ್ಯಾಯಾಲಯ ಕಟ್ಟಡವಿದ್ದು, ಶಾಲಾ ಕಾಲೇಜು, ಕಚೇರಿಗಳಿಗೆ ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಕೆರೆಗೆ ತಡೆಗೋಡೆ ಇಲ್ಲದಿರುವುದರಿಂದ ವಾಹನಗಳು ನಿಯಂತ್ರಣ ತಪ್ಪಿ ಕೆರೆಗುರುಳುವುದರಲ್ಲಿ ಸಂಶಯವಿಲ್ಲ. ಇಲ್ಲಿ ರಸ್ತೆಯೂ ಕಿರಿದಾಗಿದ್ದು, ಏಕಕಾಲದಲ್ಲಿ ಎರಡು ವಾಹನಗಳು ಎದುರು ಬದುರಾದರೆ ನಿಯಂತ್ರಣಮಾಡಿಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ಇದೆ.
ದಡದಲ್ಲಿ ಯಾವುದೇ ತಡೆಗೋಡೆಗಳಿಲ್ಲ. ಇನ್ನೊಂದು ಕಡೆಯಲ್ಲಿ ಗುಡ್ಡವಿದೆ. ಮಳೆಗಾಲದಲ್ಲಿ ಮಳೆಯ ನೀರಿನಿಂದ ಕೆರೆ ತುಂಬಿದರೆ ಕೆರೆಯ ದಡದಲ್ಲಿ ಸಂಚರಿಸುವ ಪಾದಚಾರಿಗಳಿಗೂ ಅಪಾಯ.
 ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಹೆಚ್ಚಾಗಿ ಸಂಚರಿಸುತ್ತಾರೆ. ವಾಹನಗಳು ಸಂಚರಿಸುವಾಗ ರಸ್ತೆಯ ಬದಿಯಲ್ಲಿ ಹೋಗುವುದು ಅನಿವಾರ್ಯ. ಆದರೆ ತೀರದಲ್ಲಿ ಯಾವುದೇ ಆಧಾರವಿಲ್ಲ ಕೆರೆ ದಡದಲ್ಲಿ ಜೀವ ಕೈಲಿಟ್ಟುಕೊಂಡು ಸಂಚರಿಸುವ ಅನಿವಾರ್ಯ ಇದೆ.
ಆಗಾಗ ಸರಣಿ ಅವಘಡಗಳು ಸಂಭವಿಸುತ್ತಾ ಇದೊಂದು ಅಪಾಯಕಾರಿ ವಲಯವಾಗಿ ಪರಿಣಮಿಸಿದ್ದರೂ ಹೆದ್ದಾರಿ ಪ್ರಾಧಿಕಾರದವರಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲೀ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೆರೆಯ ದಡ ಕುಸಿಯುತ್ತಿದ್ದರೂ ಅದರ ದುರಸ್ತಿಗೆ ಮುಂದಾಗಿಲ್ಲ. ತಡೆಗೋಡೆ ನಿರ್ಮಿಸಲು ಮುಂದಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರಾದ ಕೆ.ಆರ್. ಅವಿನಾಶ್ ಈ ಬಗ್ಗೆ ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ.
ಕೆರೆಯ ಹೂಳೆತ್ತಿ, ತಡೆಗೋಡೆ ನಿರ್ಮಿಸಿದರೆ ಸುತ್ತಮುತ್ತಲಿನ ಜನರಿಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಈಗಾಗಲೇ ಇಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹವಾಗುವುದರ ಜೊತೆಗೆ ಕೆರೆ ಹಾಳಾಗುತ್ತಿದೆ. ಜನಪ್ರತಿನಿಧಿಗಳು, ಸರ್ಕಾರ ಇತ್ತಗಮನ ಹರಿಸಿ ಕೆರೆಯ ದುರಸ್ತಿಗೆ ಮುಂದಾಗ ಬೇಕಿದೆ, ಹೆದ್ದಾರಿ ಪ್ರಾಧಿಕಾರ ತಡೆಗೋಡೆ ನಿರ್ಮಿಸಬೇಕಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಕೂಡಲೇ ಕೆರೆ ದುರಸ್ತಿ, ತಡೆಗೋಡೆ ನಿರ್ಮಿಸಲು ಮುಂದಾಗಿ ಆಗುವ ಅನಾಹುತಗಳನ್ನು ತಪ್ಪಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.