ಭದ್ರೆಗಾಗಿ ಶಬರಿಯಂತೆ ಕಾಯುತ್ತಿರುವ ತರೀಕೆರೆ
ಅನಂತ ನಾಡಿಗ್
ತರೀಕೆರೆ: ತಾಲೂಕಿನ ದಡದಲ್ಲೇ ಭದ್ರಾ ನದಿ ಹರಿಯುತ್ತದೆ, ನದಿಗೆ ಹತ್ತಿರದ ಲಕ್ಕವಳ್ಳಿಯಲ್ಲೇ ದೊಡ್ಡ ಅಣೆಕಟ್ಟು ಕಟ್ಟಿದ್ದಾರೆ. ಹೀಗಿದ್ದರೂ ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂದು ಹೇಳಿದರೆ ಯಾರಾದರೂ ನಕ್ಕಾರು ಎನ್ನುವ ಮಾಮೂಲಿಯ ಮಾತು ಇದೀಗ ಹಳೆತಾಗಿದೆ.
ವಿಫುಲವಾದ ನೀರಿನ ವ್ಯವಸ್ಥೆ ಇದ್ದರೂ, ಅದರ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ ಎಂಬ ಬಹು ದೊಡ್ಡ ಕೂಗು ಇದೆ. ಭದ್ರಾ ನದಿಗೆ ಎಡ ದಂಡೆ, ಬಲ ದಂಡೆ, ಮೇಲ್ದಂಡೆ, ಸುರಂಗ ಮಾರ್ಗ ಇತ್ಯಾದಿ ಹೆಸರಿನಲ್ಲಿ ನದಿಯ ಒಡಲನ್ನೇ ಕೊರೆಯುತ್ತಾ ಹೋದರೆ ಮುಂದೊಂದು ದಿನ ಈ ಭಾಗದಲ್ಲೇ ಭೀಕರ ಜಲಕ್ಷಾಮ ಎದುರಿಸಬಹುದೇ ಎಂಬುದು ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆ.
ನೀರಿನಂತೆ ಖರ್ಚು: ಹೊರಗಿನ ಮಾತು ಹಾಗಿರಲಿ, ಅಸಲು ಭದ್ರಾ ನದಿ ನಂಬಿಕೊಂಡು ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ರಾಜ್ಯ ಸರ್ಕಾರಗಳೇ ಮುಂದೆ ನಿಂತು ಜಿಪಂ ಎಂಜಿನಿಯರಿಂಗ್ ವಿಭಾಗದ ಮೂಲಕ ರೂಪಿಸಿದ ರಾಜೀವ್ ಗಾಂಧಿ ಗ್ರಾಮೀಣ ಕುಡಿವ ನೀರಿನ ಯೋಜನೆ, ಬೇಲೇನಹಳ್ಳಿ ಮತ್ತು ಇತರ 16 ಹಳ್ಳಿ ಕುಡಿವ ನೀರಿನ ಯೋಜನೆ, ಅಜ್ಜಂಪುರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ ಕೋಟ್ಯಂತರ ರು.ಗಳನ್ನು ಸರ್ಕಾರ ನೀರಿನಂತೆ ಖರ್ಚು ಮಾಡಿದೆ.
ಮಂತ್ರಿಗಳು, ಜನಪ್ರತಿನಿಧಿಗಳು, ನೀರಾವರಿ ತಜ್ಞರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ನಾ ಮುಂದು ತಾ ಮುಂದು ಎಂದು ನೀರಾವರಿ ಯೋಜನೆಗಳ ಶಂಕುಸ್ಥಾಪನೆ ನಡೆಸಿದ್ದೇ ನೆಡೆಸಿದ್ದು, ಹಾರ ತುರಾಯಿಗಳನ್ನು ಹಾಕಿಸಿಕೊಂಡು ನಲಿದಿದ್ದೂ ಆಯಿತು.
ತಪ್ಪದ ಸಂಕಷ್ಟ: 3-4 ಬೇಸಿಗೆಗಳೂ ಬಂದು ಹೋಯಿತು. ಸರ್ಕಾರದ ಬುಕ್ಕು ಲೆಕ್ಕಗಳಲ್ಲಿ ಕಂಪ್ಯೂಟರ್‌ಗಳ ಫೈಲ್‌ನಲ್ಲಿ ಯೋಜನೆಗಳು ಉಳಿಯತು ಹಣವೂ ಖರ್ಚಾಯಿತು, ಆದರೆ ಯಾವ ಯೋಜನೆಗಳು ಯಶಸ್ವಿಯಾಗಲಿಲ್ಲ, ಜನರ ಕುಡಿಯುವ ನೀರಿನ ಸಂಕಷ್ಟ ಮಾತ್ರ ತಪ್ಪಲಿಲ್ಲ.
ತಾಲೂಕಿನ ಬಯಲು ಸೀಮೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಇವತ್ತು ಕಿಲೋಮೀಟರ್‌ನಷ್ಟು ದೂರ ನಡೆದು ಹೋಗುವುದು ತಪ್ಪಿಲ್ಲ. ತಾಲೂಕಿನ ಕುಡ್ಲೂರು, ಕೊರಟೀಕೆರೆ, ಚೀರನಹಳ್ಳಿ ಮತ್ತಿತರ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ.
ಅಂತರ್ಜಲ ಖಾಲಿ: ತಾಲೂಕಿನಲ್ಲಿ ಅಜ್ಜಂಪುರ ಶಿವನಿ ಮತ್ತು ಲಿಂಗದಹಳ್ಳಿ ಭಾಗದಲ್ಲಿ 700-800 ಅಡಿ ಭೂಮಿ ಕೊರೆದರೂ ಒಂದು ಹನಿ ನೀರಿಲ್ಲ. ಭೂಮಿಯಿಂದ ಬರೀ ಧೂಳು ಸಣ್ಣ ಕಲ್ಲಿನ ರಾಶಿ ಹೊರಬಂತೇ ವಿನಃ ಜಲಕಣ್ಣು ಮಾತ್ರ ಗೋಚರಿಸಿಲ್ಲ. ಭೂಮಿಯ ಅಂತರ್ಜಲವೆಲ್ಲಾ ಖಾಲಿಯಾಗಿ ಹೋಗಿದೆ, ಬೋರ್‌ವೆಲ್‌ಗಳನ್ನು ಈಗಾಗಲೇ ಕೊರೆಯಲಾಗಿದೆ.
ತಾಲೂಕಿನಲ್ಲಿ ಜಲಾನಯನ ಇಲಾಖೆಯಿಂದ ಮೇಲಿಂದ ಮೇಲೆ ಚೆಕ್ ಡ್ಯಾಂಗಳು, ಇಂಗು ಗುಂಡಿ ಮಳೆ ಕುಯ್ಲು ಬದುಗಳ ನಿರ್ಮಾಣಕ್ಕೆ ಯೋಜನೆಗಳು ತಯಾರಾಗುತ್ತಿದೆ, ಹಣವೂ ಖರ್ಚಾಗುತ್ತಿದೆ.
ಫ್ಲೋರೈಡ್ ನೀರು: ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಫ್ಲ್ಲೋರೈಡ್ ಯುಕ್ತ ನೀರನ್ನೇ ದಿನನಿತ್ಯ ಬಳಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತರೀಕೆರೆ ಪಟ್ಟಣದ ನಾಗರಿಕರು ನಿತ್ಯ ಬಳಸುತ್ತಿರುವ ಭದ್ರಾ ನದಿ ನೀರು ಸಮೀಪದ ಮಾನಸಿ ಎಂಬ ಸುಂದರ ಹೆಸರಿನ ಕೆರೆಗೆ ಡಂಪ್ ಮಾಡಿ ಕೊಂಡು ಸರಬರಾಜಾಗುತ್ತಿರುವ ನೀರಿನ ವರ್ಣಮಯ ಕಥೆ ಆಲಿಸಿದರೆ ವಾಕರಿಕೆ ಬರುತ್ತದೆ. ನೀರು ಅಷ್ಟರ ಮಟ್ಟಿಗೆ ಅಶುದ್ಧವಾಗಿದೆ. ಕಣ್ಮುಚ್ಚಿಕೊಂಡು ಕುಡಿಯುತ್ತಿದ್ದೇವೆ. ಇದು ಕಹಿಯಾದ ಸತ್ಯ ಸಂಗತಿ.
ದೀಪದ ಬುಡ ಕತ್ತಲು: ಭದ್ರಾ ನದಿಯಿಂದ ದೂರದ ಊರುಗಳಿಗೆ ನೀರು ತೆಗೆದುಕೊಂಡು ಹೋಗುವ ಸಾಹಸ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ನದಿಯ ದಡದಲ್ಲಿರುವವರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿರುವುದು ವಿಪರ್ಯಾಸವೇ ಸರಿ.
ಸರ್ಕಾರ ಎಚ್ಚೆತ್ತು, ಅಧಿಕಾರಿಗಳಿಗೆ ಸಕ್ರಿಯವಾಗುವಂತೆ ಚುರುಕು ಮುಟ್ಟಿಸಿ, ಮೊದಲು ನದಿ ದಡದಲ್ಲಿರುವವರಿಗೆ ವಿಶೇಷವಾಗಿ ತರೀಕೆರೆ ಮತ್ತು ತಾಲೂಕಿನ ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳಿಗೆ ಅರ್ಧಂಬರ್ಧಕ್ಕೆ ನಿಂತಿರುವ ಕುಡಿಯುವ ನೀರಿ ಯೋಜನೆಯನ್ನು ಬೇಗನೆ ಅನುಷ್ಠಾನಕ್ಕೆ ತರಲಿ ಎಂಬುದು ತಾಲೂಕಿನ ಜನರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

