ಭಗವಂತನ ಕೃಪೆಗೆ ಫಲಾಪೇಕ್ಷೆ ಇಲ್ಲದ ಪ್ರಾರ್ಥನೆ ಅಗತ್ಯ
ಚಿಕ್ಕಮಗಳೂರು: ಭಗವಂತನ ಆರಾಧನೆಗೆ ಭಕ್ತಿ ಮುಖ್ಯ. ನಿರ್ಮಲ ಮನಸ್ಸಿನ ಭಕ್ತಿಗೆ ದೇವರು ಒಲಿಯುತ್ತಾನೆ ಎಂದು ಹುಲಿಕೆರೆ ದೊಡ್ಡ ಮಠಾಧ್ಯಕ್ಷ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಸಖರಾಯಪಟ್ಟಣ ಹೋಬಳಿ ಟಿ.ಬಿ. ಕಾವಲು ಗ್ರಾಮದ ಶ್ರೀ ಚಾಮುಂಡೇಶ್ವರಿ ನೂತನ ದೇವಾಲಯ ಪ್ರವೇಶೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮ ವೇದಿಕೆಯ ಸರಕಾಗದೆ ಆಚರಣೆಯ ಸಂಗತಿ ಆಗಬೇಕು. ಧರ್ಮ ಅತ್ಯಂತ ಸೂಕ್ಷ್ಮ ವಿಚಾರ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದ ಪ್ರಾರ್ಥನೆಗೆ ದೇವರು ಒಲಿಯುತ್ತಾನೆ. ದೇವಾಲಯಗಳು ಮನಸ್ಸನ್ನು ನಿರ್ಮಲಗೊಳಿಸಲು ಸಹಕಾರಿ. ಸಣ್ಣ ಗ್ರಾಮದಲ್ಲಿ ಸುಂದರ ದೇವಾಲಯ ನಿರ್ಮಿಸುವ ಮೂಲಕ ತಮ್ಮ ಮನದ ಶ್ರೀಮಂತಿಕೆಯನ್ನು ಮೆರೆದಿದ್ದಾರೆಂದು ಅವರು ಶ್ಲಾಘಿಸಿದರು.
ದೇವಸ್ಥಾನದ ರೂವಾರಿ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ಮಹಾರಾಜರ ಕಾಲದಲ್ಲಿ 200 ಎಕರೆ ದಾನವಾಗಿ ಪಡೆದು ನಿರ್ಮಾಣಗೊಂಡ ತಂಡ್ರೆಬೋರೆ ಕಾವಲು (ಟಿ.ಬಿ. ಕಾವಲು) ಗ್ರಾಮಕ್ಕೆ ಅಲ್ಲಿಂದಲೇ ಚಾಮುಂಡೇಶ್ವರಿ ದೇವಿಯನ್ನು ತಂದು ಪೂಜಿಸಲಾಗುತ್ತಿತ್ತು. ಎಲ್ಲರ ಸಹಕಾರದೊಂದಿಗೆ ಪೂರ್ಣಗೊಂಡಿದೆ ಎಂದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಊರಿಗೊಂದು, ಕೆರೆಗೊಂದು, ಬೆಡಗಿಗೊಂದು ದೇವಾಲಯ ಎಂಬುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಗ್ರಾಮಸ್ಥರ ಪರಿಶ್ರಮದ ಬೆವರಿನಿಂದ ಕಟ್ಟಿದ ದೇವಾಲಯಕ್ಕೆ ಹೆಚ್ಚಿನ ಶಕ್ತಿ ಇರುತ್ತದೆ ಎಂದು ಹೇಳಿದರು.
ಏಕತೆಗೆ ದೇಗುಲಗಳು ಸಹಕಾರಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಮಾತನಾಡಿ, ನಮ್ಮೊಳಗಿನ ಸಾಕ್ಷಿ ಪ್ರಜ್ಞೆಯನ್ನು ದೇವಾಲಯಗಳು ಜಾಗೃತಗೊಳಿಸುತ್ತದೆ. ಆತ್ಮಾವಲೋಕನದಿಂದ ಬದಲಾವಣೆ ಸಾಧ್ಯ. ದೇಗುಲಗಳು ಪರಿಣಾಮಕಾರಿಯಾದ ಪರಿವರ್ತನಾ ಕೇಂದ್ರ ಮನಸ್ಸುಗಳನ್ನು ಬೆಸೆಯುವುದರೊಂದಿಗೆ ಗ್ರಾಮದ ಏಕತೆಯನ್ನು ಕಾಪಾಡಲು ದೇವಾಲಯ ಸಹಕಾರಿ ಎಂದರು.
ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ರಂಗನಾಥನಾಯ್ಕ, ಬೆಂಗಳೂರು ಮೆಡಿಕಲ್ ಕಾಲೇಜಿನ ಇಎನ್ಟಿ ಮುಖ್ಯಸ್ಥ ಡಾ. ಕೃಷ್ಣನಾಯಕ, ಪಲ್ಲವಿ ಸಿ.ಟಿ. ರವಿ, ನಿಡಘಟ್ಟ ಮಾಜಿ ಪ್ರಧಾನ ಚಂದಯ್ಯ, ನಿವೃತ್ತ ಬಂದೀಖಾನೆ ಸೂಪರಿಂಟೆಂಡೆಂಟ್ ಸಂಗಪ್ಪ, ಬಿಜೆಪಿ ಮುಖಂಡ ನಿಡಘಟ್ಟ ಲೋಕೇಶ್ ಮಾತನಾಡಿದರು.
ತಾಂಡದ ನಾಯಕ್ ಎಚ್. ಗೋಪಾಲ ನಾಯಕ, ಡಾಮೊ ಬಾಲಾಜಿ ನಾಯಕ, ಕಾರಬಾರಿ ರಾಮಚಂದ್ರ ನಾಯಕ, ಕಾಂಗ್ರೆಸ್ ಮುಖಂಡ ಕೊಪ್ಪಲು ಮಂಜುನಾಥ ಅಣ್ಣನಾಯಕ, ಬಿ.ಎಸ್.ಎಫ್. ಕಮಾಂಡೆಂಟ್ ಸಖರಾಯಪಟ್ಟಣದ ಲೋಕೇಶನಾಯಕ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು. ಉಮೇಶಯ್ಯ ಶಾಸ್ತ್ರಿ, ವೇದಘೋಷ ಮಾಡಿದ್ದು, ಗಂಗಾಧರನಾಯಕ ನಿರೂಪಿಸಿ, ಶಿವರಾಂ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

