ಮೇವು ವಿತರಣೆಗೆ ಮಾರ್ಗಸೂಚಿ ಅಡ್ಡಿ!
ಚಿಕ್ಕಮಗಳೂರು: ಮೂಕ ಪ್ರಾಣಿಗಳು ತಿನ್ನುವ ಮೇವಿಗೆ ಬರ ನಿರ್ವಹಣೆಯ ಮಾರ್ಗಸೂಚಿ ಅಡ್ಡಿಯಾಗಿದೆ.
ಮೇವಿನ ಕೊರತೆ ಇದೆ. ವಿತರಣೆ ಮಾಡಲು ಮೇವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಬಂಧನೆಗಳು ಅಡ್ಡಿಯಾಗಿವೆ.
ಈ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ. ಅಂದರೆ, ಈ ಒಂದೇ ತಾಲೂಕಿಗೆ ಮಾತ್ರ ಅನ್ವಯವಾಗುವಂತೆ ಸರ್ಕಾರ ನಿಯಮ ರೂಪಿಸಿದೀಯಾ, ಖಂಡಿತವಾಗಿಯೂ ಇಲ್ಲ. ಈ ರೀತಿಯ ನಿಬಂಧನೆ ರೂಪಿಸುವ ಸಂದರ್ಭದಲ್ಲಿ ಸರ್ಕಾರಗಳು ಎಡವಿದ್ದರ ಪರಿಣಾಮ ಮೇವಿದ್ದರೂ ಅದನ್ನು ಬಳಸಿಕೊಳ್ಳದ ಸ್ಥಿತಿ ನಿರ್ಮಾಣಗೊಂಡಿದೆ.
ನಿಬಂಧನೆಗಳು: ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎದುರಾದರೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಕೇಂದ್ರದಿಂದ ಈ ಪರಿಸ್ಥಿತಿ ನಿಭಾಯಿಸಲು ಹಣ ಬಂದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಸೇರಿಸಿ ರಾಜ್ಯ ಪ್ರಕೃತಿ ವಿಕೋಪ ನಿಧಿಯಿಂದ ಜಿಲ್ಲಾವಾರು ಬಿಡುಗಡೆ ಮಾಡುತ್ತದೆ.
ಈ ಹಣ ಬಳಕೆಗೆ ಕೇಂದ್ರ, ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿ ಜಾರಿಗೆ ತಂದಿದೆ. ಅದರಲ್ಲಿರುವ ಕೆಲವು ಅಂಶದ ಪ್ರಕಾರ ಕುಡಿಯುವ ನೀರು ಸರಬರಾಜು, ಕೊಳವೆ ಬಾವಿ ಆಳಪಡಿಸಲು(ಹೊಸದಾಗಿ ಕೊಳವೆ ಬಾವಿ ಕೊರೆಯಲು ಅವಕಾಶ ಇಲ್ಲ), ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಮೇವು ಖರೀದಿಗೆ ಬಳಕೆ ಮಾಡಬೇಕು. ಅಂದರೆ ನಿಗದಿತ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಹೇಳಲಾಗಿದೆ.
ಆಗಿದ್ದೇನು?: 2012- 13ನೇ ಸಾಲಿನಲ್ಲಿ ಸಕಾಲದಲ್ಲಿ ಮಳೆ ಬಾರದೆ ರಾಜ್ಯ 149 ತಾಲೂಕುಗಳಲ್ಲಿ ಬರಗಾಲ ಬಂದಿತ್ತು. ಆ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲೂಕುಗಳು ಹಾಗೂ ಚಿಕ್ಕಮಗಳೂರು ಮತ್ತು ಮೂಡಿಗೆರೆಯ ಕೆಲವು ಹೋಬಳಿಗಳು ಸೇರ್ಪಡೆಗೊಂಡಿದ್ದವು.
ಸರ್ಕಾರ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು ಖರೀದಿ ಮಾಡಲು ಹಣ ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ತರೀಕೆರೆ ತಾಲೂಕಿನ ಪಶು ಪಾಲನಾ ಇಲಾಖೆ ಬಾವಿಕೆರೆ, ಲಕ್ಕವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಂದ 20 ಲಕ್ಷ ಮೌಲ್ಯದ ಒಣಗಿದ ಬತ್ತದ ಹುಲ್ಲನ್ನು ಖರೀದಿ ಮಾಡಿ, ಅದನ್ನು ಅಜ್ಜಂಪುರದಲ್ಲಿರುವ ಅಮೃತ್ ಮಹಲ್ ಕಾವಲ್ನ ಆವರಣದೊಳಗೆ ದಾಸ್ತಾನು ಮಾಡಿತ್ತು.
ಹುಲ್ಲು ಖರೀದಿ ಮಾಡಿ ದಾಸ್ತಾನು ಮಾಡುವ ವೇಳೆಗೆ ಮಳೆ ಬಂದಿತು. ಜಾನುವಾರುಗಳಿಗೆ ಹಸಿ ಹುಲ್ಲು ಸಿಕ್ಕಿತು. ಆದ್ದರಿಂದ ಒಣಗಿದ ಹುಲ್ಲನ್ನು ವಿತರಣೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಕೈಹಾಕಲಿಲ್ಲ. ಒಣಗಿದ ಹುಲ್ಲಿನ ಬಣವೆಯ ಮೇಲೆ ಮಳೆ ಬಿದ್ದು ಹಾಳಾಗದಂತೆ ಟಾರ್ಪಲ್ ಮುಚ್ಚಲಾಗಿದೆ. ಈ ಮುಂಜಾಗ್ರತಾ ಕ್ರಮ ಕೈಗೊಂಡರೂ ಹುಲ್ಲು ಹೆಚ್ಚಿನ ದಿನ ಸಂಗ್ರಹ ಮಾಡಿ ಇಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯವಾದ ಜ್ಞಾನ. ಮೇಲ್ಭಾಗದಲ್ಲಿರುವ ಹುಲ್ಲು ಹಾಳಾಗಿದೆ. ಇನ್ನಷ್ಟು ದಿನ ಇದೇ ಪರಿಸ್ಥಿತಿ ಮುಂದುವರಿದರೆ, ಹುಲ್ಲು ಸಂಪೂರ್ಣವಾಗಿ ಕೊಳತೆ ಹೋಗಲಿದೆ.
ಮೇವು ಬಳಕೆಗೆ ಅಡ್ಡಿಯಾದರೂ ಏನು?
ಈ ಹುಲ್ಲಿನ ಬಳಕೆಗೆ ಆಗಿರುವ ಅಡ್ಡಿಯಾದರೂ ಏನು, ಎಂಬ ಪ್ರಶ್ನೆ ಎದುರಾಗಬಹುದು. ಇದಕ್ಕೆ ಅಡ್ಡಿಯಾಗಿರುವುದು ಸರ್ಕಾರದ ಬರ ನಿರ್ವಹಣೆಯ ಮಾರ್ಗಸೂಚಿ.
ಈ ಮೇವು ಅದೇ ವರ್ಷದಲ್ಲಿ ವಿತರಣೆಯಾಗಿದ್ದರೆ ಇಂದು ಕೊಳೆತು ಹೋಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ, ಈ ವರ್ಷದಲ್ಲಾದರೂ ಬಳಕೆ ಮಾಡಬಹುದಲ್ಲಾ, ಈಗ ಇದಕ್ಕೆ ಅವಕಾಶ ಇಲ್ಲ, ಕಾರಣ, ಈ ವರ್ಷ ತರೀಕೆರೆ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿಲ್ಲ, ಆದುದರಿಂದ ಮೇವು ಬಳಕೆ ಮಾಡುವಂತಿಲ್ಲ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಈ ಭಾಗದಲ್ಲಿ ಸುಮಾರು 13 ಸಾವಿರ ಜಾನುವಾರುಗಳಿವೆ. ಮೇವಿದ್ದರೂ ಅದನ್ನು ಬಳಕೆ ಮಾಡಲು ಅವಕಾಶ ಇಲ್ಲ. ಈ ವರ್ಷದಲ್ಲಿ ಸರ್ಕಾರ ತರೀಕೆರೆ ತಾಲೂಕು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದ್ದರೆ, ಈ ಮೇವು ಬಳಸಿಕೊಳ್ಳಬಹುದಾಗಿತ್ತು. ಸಾಕಷ್ಟು ಮೇವಿದ್ದರೂ ಅದನ್ನು ಹಸಿವಿನಿಂದ ಬಳಲುತ್ತಿರುವ ಜಾನುವಾರುಗಳಿಗೆ ಬಳಕೆ ಮಾಡಲು ಅವಕಾಶ ಇಲ್ಲದಂತಾಗಿದೆ.
ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

